ಇಂದು ನಸುಕಿನಲ್ಲಿ ಚೀನಾದಲ್ಲಿರುವ ನನ್ನೊಬ್ಬ ಗೆಳೆಯನಿಗೆ ಅವನ ಹಾಗು ಹೋಗುಗಳನ್ನು ಕೇಳುತ್ತ ಮಿಂಚೋಲೆ (ಇ-ಮೇಲ್) ಕಳಿಸಿದೆ. ಅದಕ್ಕೆ ಅವನು ಮರು ಮಿಂಚೋಲೆ ಕಳಿಸಿದ. ಅವನು ಕನ್ನಡ ಕುವರನಾಗಿದ್ದರು, ಪಿರಿಕನ್ನಡದ ಕಯ್ವಾರಿ(ಅಬಿಮಾನಿ)ಯಾಗಿದ್ದೂ ತನ್ನ ಎದುರೋಲೆಯಲ್ಲಿ ಬಳಸಿದ ಒಂದು ಸಕ್ಕದ ಒರೆ(ಪದ) ನನ್ನೊಳಗೆ ಮಲಗಿದ್ದ ಕನ್ನಡತನವನ್ನು ಕೆಣಕುವಂತೆ ಮಾಡಿತು. ಸಿಡಿದೆದ್ದ ನನ್ನ ಕನ್ನಡತನ ಅವನು ಬಳಸಿದ ಸಕ್ಕದ ಒರೆಗಳನ್ನೇ ಬಳಸಿ ಈ ಕೆಳಗಿನಂತೆ ಬರೆದು ಉತ್ತರಿಸುವಂತೆ ಮಾಡಿತು.
'ಮಹಿಳೆ' 'ಪುರುಷ' ಎಂದು ಸಕ್ಕವನುಲಿಯುತ
ಕನ್ನಡವನು ಕೀಳಾಗಿ ಏಳಿಲಸದಿರು ಗೆಳೆಯ
ಮಹಿಳೆಗೆ 'ಹೆಂಗಸುಂಟು' ಪುರುಷನಿಗೆ 'ಗಂಡಸುಂಟು'
ಅರಿತು ಸಿರಿ ಕನ್ನಡವನಾಡು ಮಂಕುತಿಮ್ಮ
ಏಳಿಲ-ಅವಮಾನ
ಹಿರಿಯರಾದ ಗುಂಡಪ್ಪರಲ್ಲಿ ಮನ್ನಿಸೆಂದು ಕೋರುತ್ತ....
ನನ್ನ ಈ ಪಿರಿಕನ್ನಡ ಕಯ್ವಾರ(ಅಬಿಮಾನ)ವನ್ನು ಎಲ್ಲಾ ಕನ್ನಾಡಿಗ ಗೆಳೆಯರಲ್ಲಿ ಹಂಚಿಕೊಳ್ಳುವ ಹುಚ್ಚು ಹುಂಬತನದಿಂದ ಇದನ್ನು ಇಲ್ಲಿ ಬರೆದು ನಿಮಗೆಲ್ಲ ಕಳಿಸುತ್ತಿರುವೆ.
"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"
ಕುಕೂಊ...
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ
26/12/08
ಬ್ಲಾಗ್ ಲೋಕದಲ್ಲಿ ತಿರಿಗಾಡುತ್ತಿರುವಾಗ ನನಗೊಂದು ಅನುಬವ ಬರಹ ಸಿಕ್ಕಿತು. ಆ ಬರಹಕ್ಕೆ ತಲೆನಾಮ ಕನ್ನಡ ಇಂಬ್ಲೀಚ್ ಬೆರೆಕೆಯಲ್ಲಿ ಈಗೆ ಬರೆಯಲಾಗಿತ್ತು "ನನ್ನ Some ಶೋಧನೆ!!" ಈ ಬರಹ ಓದಿದೊಡನೆಯೇ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಗ ಮಾಡಿದ ಪ್ರಯೋಗದ ನೆನಪು ಬಂತು. ಹೊಸದಾಗಿ ನನ್ನ ಪಕ್ಕದೂರಾದ ಚಿಕ್ಕಜೋಗಿಹಳ್ಳಿಯ ಹಯಸ್ಕೂಲ್ ಶಾಲೆಗೆ ಸೇರಿದ್ದೆ. ದಿನಾಲು ನಾಲ್ಕು ಹರದಾರಿ ನಡೆದು ಮತ್ತೇ ಸಂಜೆ ಅಶ್ಟೇದೂರ ನಡೆದು ಮರಳಿ ಬರುತ್ತಿದ್ದೆವು. ಮನೆಗೆ ಬರುವುದರೊಳಗೆ ಕತ್ತಲು ಕವಿಯುತ್ತಿತ್ತು. ಹೊಸದಾಗಿ ದೊಡ್ಡ ಶಾಲೆಗೆ ಸೇರಿದ ಹುರುಪು. ಹೊಸ ತರಗತಿ, ಹೊಸ ಮಾಸ್ತರು, ಹೊಸ ಊರು ಎಲ್ಲದೂ ಹೊಸದಾಗಿ ಕಾಣುತಿತ್ತು.
ಅಂದಿನ ದಿನಗಳಲ್ಲಿ ಲೆಕ್ಕದ ಜೊತೆ ವಿಗ್ನಾನವೆಂದರೆ ನನಗೆ ಹೆಚ್ಚು ಅಚ್ಚು ಮೆಚ್ಚು. ವಿಗ್ನಾನದ ಪಾಟ ಹೇಳಲು ಬರುತ್ತಿದ್ದ ಜಯಮೂರ್ತಿ ಮಾಸ್ತರು ನನ್ನ ನೆಚ್ಚಿನ ಗುರುಗಳು. ಅವರಿಗೆ ನಾನು ನೆಚ್ಚಿನ ವಿದ್ಯಾರ್ತಿ. ಹಿಂದಿನ ದಿನ ಹೇಳಿಕೊಟ್ಟ ಪಾಟದ ಬಗ್ಗೆ ದಿನಾಲು ಮೊದಲು ಪ್ರಶ್ನೆ ಕೇಳಿ ಮುಂದಿನ ಪಾಟ ಶುರುಮಾಡುತ್ತಿದ್ದರು. ಹುಡುಗರಲ್ಲಿ ಯಾರು ಉತ್ತರ ಹೇಳದಿದ್ದಾಗ ನನ್ನ ಸರದಿ ಬರುತ್ತಿತ್ತು. ಯಾವತ್ತೂ ಜಯಮೂರ್ತಿ ಮಾಸ್ತರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಹೇಳುವುದರಲ್ಲಿ ನಾನು ಸೋತಿರಲಿಲ್ಲ. ಆಗ ಉತ್ತರ ಹೇಳದಿದ್ದ ನನ್ನ ಸಹಪಾಟಿ ಹುಡುಗರಿಗೆ ಮೂಗಿಡಿದು ಕಪಾಳಕ್ಕೆ ಹೊಡೆಯುವ.....
ಒಂದು ದಿನ ಜಯಮೂರ್ತಿ ಮಾಸ್ತರು ವಿದ್ಯತ್ ಬಗ್ಗೆ ಪಾಟ ಮಾಡುತ್ತಿದ್ದರು. ವಾಹಕ, ಅರೆವಾಹಕ, ನಿರೋದಕ, ಕರೆಂಟ್, ವೋಲ್ಟೇಜ್ ರೆಜಿಶ್ಟೆಂಟ್ ಇನ್ನೇನನ್ನೋ ಬಿಡಿಸಿ ಹೇಳುತ್ತಿದ್ದರು. ಮನೆಯಲ್ಲಿ ತುಂಬಾ ಮೊಸರು. ಬೆಳಿಗ್ಗೆಯ ಊಟಕ್ಕನೇ ಮೊಸರು ಮುದ್ದೆ, ಮೊಸರು ಬಾನ(ಅನ್ನ) ಹೊಟ್ಟೆ ಬಿರಿಯುವಂತೆ ಹಣಿದು ಬಂದಿದ್ದೆ. ಜೊಗೆತೆ ಒಂದು ಅಚ್ಚುಂಡೆ ಬೆಲ್ಲ ಒಣಕೊಬ್ಬರಿ ಹಾದಿಗುಂಟ ತಿನ್ನುತ್ತ ಬಂದಿದ್ದೆ. ಮೊಸರಿನ ಪ್ರಬಾವವೇ ಇರಬೇಕು ಜೊತೆಗೆ ಸುಯ್ಯಂದು ಮರದ ನೆರಳನ್ನು ಸೀಳಿ ಬೀಸುತ್ತಿದ್ದ ತಣ್ಣನ ತಂಗಾಳಿ ಕಿಟಕಿಯಿಂದ ಒಳಗೆ ನುಗ್ಗಿ ನನ್ನ ಸವರಿಕೊಂಡು ಹೋಗುತ್ತಿದ್ದುದ್ದರಿಂದ ಹಾಯ್ ಎನಿಸುತ್ತಿತ್ತು. ಮೂರನೆ ಬೆಂಚಿನಲ್ಲಿ ತೂಕಡಿಸುತ್ತ ಕೂತಿದ್ದೆನೋ ಎನೋ. ಮಾಸ್ತರು ನನ್ನ ಕಡೆ ಅಲ್ಲಾಡಿಸುತ್ತ ಕೋಲು ತೋರಿಸಿದರು. ಮಾಸ್ತರ ಕಯ್ಯಲ್ಲಿ ಅಲ್ಲಾಡುತ್ತಿದ್ದ ಕೋಲು ನಿದ್ದೆ ತುಂಬಿದ ಅರೆಗಣ್ಣಿನಲ್ಲಿ ನೋಡಿದೊಡನೆಯೇ ಇದ್ದಕ್ಕಿದ್ದಂತೆ ಯಾಕೋ ಒಂದ್ತಾರ ಆಯ್ತು. ಅವರು ಎಲ್ಲರ ನಡುವೆ ನನ್ನನ್ನು ಎಬ್ಬಿಸಿದರೆ ಅವಮಾನವಾಗುವುದೆಂದೆನಿಸಿರಬೇಕು ನನಗಾಗ. ನನ್ನ ನೆಚ್ಚಿನ ಮಾಸ್ತರು ತರಗತಿಯಲ್ಲಿ ಎಬ್ಬಿಸಿ ಎಲ್ಲರೆದುರು ಅವಮಾನಮಾಡಿದರೆ? ತುಂಬಾ ಅವಮಾನದ ಮಾತಿದು. ಇದನ್ನು ಏಗಾದರು ಏನಾದರು ಮಾಡಿ ತಪ್ಪಿಸ ಬೇಕು!!! ತಡಮಾಡದೆ ಮರುಗಳಿಗೆಯಲ್ಲಿ ತಟ್ಟನೆ ಎದ್ದು ನಿಂತು ನಾನು ಮಾಸ್ತರಿಗೆ ಒಂದು ಪ್ರಶ್ನೆ/ಸಂಶಯ ಕೇಳಿ ಆಗುವ ಅವಮಾನದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ.
ನಾನು ಕೇಳಿದ ಪ್ರಶ್ನೆಯಿಂದ ತರಗತಿಯಲ್ಲಿರುವ ಹುಡುಗರೆಲ್ಲರಿಗೂ ಗಾಬರಿನೇ. ಗಾಬರಿಯಾಕೆ ಗೊತ್ತ ಇದುವರೆಗು ತರಗತಿಯಲ್ಲಿ ಎದ್ದು ಮಾಸ್ತರಿಗೆ ಪ್ರಶ್ನೆ ಕೇಳಿ ಸಂಶಯ ಬಗೆಹರಿಸಿಕೊಳ್ಳುವ ಎದೆಗಾರಿಕೆ ಯಾರಿಗೂ ಇರಲಿಲ್ಲ ಅತವ ಯಾರಿಗೂ ಈಬಗೆ ಪ್ರಶ್ನೆಕೇಳುವಂತ ಸಂಶಬ ಬರುತ್ತಿತ್ತೋ ಇಲ್ಲವೋ.. ನನಗಂತು ಬರುತ್ತಿರಲಿಲ್ಲ. ನನ್ನ ಬದುಕಲ್ಲೇ ಇದೇ ಮೊದಲ ಹಾಗು ಕೊನೆಯ ಪ್ರಶನ್ಎ. ಮೊದಲನೆಯ ಪ್ರಶ್ನೆಗೆ ಮಾಸ್ತರು ಸೊಗಸಾಗಿ ಉತ್ತರಿಸಿದರು. ಎಲ್ಲರಿಗೂ ಚನ್ನಾಗಿ ತಿಳಿಯಿತು ಆದರೆ ನಾನು ಕುತೂಹಲದಿಂದ ಅವರ ವಿವರಣೆಗೆ ಎದುರಾಗಿ ಇನ್ನೊಂದು ಪ್ರಶ್ನೆ ಕೇಳಿದೆ. ಮೊದಲನೆಯ ಪ್ರಶ್ನೆ ಈಗಿತ್ತು. ಕರೆಂಟ್ ಇರೋ ವಯರು ಮುಟ್ಟಿದರೆ ಯಾಕೆ ಶಾಕ್ ಹೊಡೆಯುತ್ತೆ? ಜೊತೆಗೆ ಕರೆಂಟು ಹಿಡಿದ ಜೀವಿ ಯಾಕೆ ಸಾಯುತ್ತದೆ? ಜಯಮೂರ್ತಿ ಮಾಸ್ತರು ಸೊಗಸಾಗಿ ಎಲ್ಲರಿಗೂ ತಿಳಿಯುವಂತೆ ಬಿಡಿಬಿಡಿಸಿ ಹೇಳಿದರು. ನಮ್ಮ ಮೈಯ್ಯೊಳಗೆ ನರನಾಡಿ ಇರುತ್ತಾವೆ. ಅದರಲ್ಲಿ ವಿದ್ಯತ್ ಹರಿಯುತ್ತಿರುತ್ತದೆ. ಅದು ಅತಿ ತುಸು ಮಾತ್ರ. ಹೆಚ್ಚಿನ ಕರೆಂಟ್ ನಮ್ಮ ಮೈಯ್ಯೋಳಗೆ ಹರಿದಾಗ ನಮ್ಮ ಮಯ್ಯಲ್ಲಿ ಇರುವ ವಿದ್ಯತ್ತಿನ ಬಲೆ ಶಾರ್ಟ್ ಆಗಿ ಎಲ್ಲಾ ಕೆಲಸಗಳನ್ನು ನಿಲ್ಲಿಸಿ ಬಿಡುತ್ತದೆ. ಈಗೆ ಆಗದಿರಲೆಂದು ನಮ್ಮ ಮೆದುಳು ಕರೆಂಟಿರುವ ತಂತಿ ಮುಟ್ಟಿದಾದ ತಪ್ಪಿಸಿಕೊಳ್ಳಲು ಕೈಗೆ ಒಂದು ಮಾತನ್ನು ಹೇಳಿಕಳಿಸುತ್ತದೆ. ಕೊಸರಿ ತಂತಿಯಿಂದ ದೂರವಾಗು ಎಂದು ಅದೇ ಶಾಕ್ ಎಂದು ಬಿಡಿಸಿ ಹೇಳಿದರು. ಸರಿಯೆಂದು ಸೋಜಿಗದಿಂದ ಎಲ್ಲರೂ ತಲೆತೂಗಿದೆವು.
ಆದರೆ ಇದ್ದಕ್ಕಿದ್ದಂತೆ ನನ್ನ ಕೊಳಕು ತಲೆಯಲ್ಲಿ ಇನ್ನೇನೋ ನೆನಪಿಗೆ ಬಂತು. ಬೆಳಗಾದರೆ ಸಾಕು ನಮ್ಮ ಮನೆಯ ಮುಂದೆ ಲೈಟ್ ಕಂಬಕ್ಕೆ ಬಿಗಿದು ಕಟ್ಟಿರುವ ಕರೆಂಟ್ ತಂತಿಯ ಮೇಲೆ ನೂರಾರು ಗುಬ್ಬಚ್ಚಿ, ಬೆಳ್ಳಕ್ಕಿ, ಕಾಗೆ, ಬೆಳವ, ಪಾರಿವಾಳ ಕೂರುತ್ತಾವೆ. ಅದರ ಮೇಲೆನೇ ಜಗಳವಾಡುತ್ತಾವೆ. ಕಾ,... ಕೀ, ....ಪೀ,... ಚೀ.... ಮಾಡ್ತಾವೆ. ಕೆಲವು ಅದರ ಮೇಲೆ ಕುಳಿತೇ ನಿದ್ದೆ ಮಾಡ್ತಾವೆ ಆದರೆ ಆ ಯಾವಾ ಬೆಳ್ಳಕ್ಕಿಗೂ, ಗುಬ್ಬಚ್ಚಿಗೂ, ಕಾಗೆ, ಪಾರಿವಾಳಕ್ಕೆ ಇದುವರೆಗೆ ಕರೆಂಟ್ ಶಾಕೇ ಹೊಡೆದಿಲ್ಲ! ನಮ್ಮೂರಿನ ಮಾತು ಬಾರದ ಕಿವಿಯೂ ಕೇಳಿಸದ ಮೂಕ ಚಂದ್ರ ಯಾವಾಗಲು ಬರಿಗಯ್ಯಿಂದಲೇ ತಂತಿ ಮುಟ್ಟುತ್ತಾನೆ. ನಮ್ಮೂರಿನವರೆಲ್ಲ ಮನೆಯಲ್ಲಿ ಏನಾದರು ವಿದ್ಯತ್ತಿನ ತೊಂದರೆಯಾಗಿದ್ದೆರೆ ಅವನನ್ನೇ ಕರೆದುಕೊಂಡು ಹೋಗ್ತಾರೆ. ಅವನಿಗೆ ಯಾವತ್ತೂ ಶಾಕ್ ಹೊಡೆದಿಲ್ಲ. ಮಾತಾಡುವ ನಮಗೊಂದೇ ಯಾಕೆ ಶಾಕ್ ಹೊಡೆಯುತ್ತೆ ಎಂದು ತಲೆಯಲ್ಲಿ ಸುಳಿದಿದ್ದೇ ತಡ. ಮತ್ತೆ ಮೇಲೆದ್ದು ಮಾಸ್ತರಿಗೆ ನನ್ನ ಕೊರಗು ಹೇಳುತ್ತ ಸಾರ್ ಕರೆಂಟ್ ಬರೀ ಮಾತಾನಾಡುವ ಮನುಶ್ಯರಿಗೋಂದೇನ ಹೊಡೆಯೋದು?? ಎಂದು ಕೇಳಿದೆ.
ಮತ್ತೇ ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರ್ ತಮ್ಮ ಬಹು ಸೊಗಸಾದ ತಾಳ್ಮೆಯ ಶೈಲಿಯಲ್ಲಿ ಬಿಡಿಬಿಡಿಯಾಗಿ ಬಿಚ್ಚಿ ಬಿಡಿಸಿ ಮುಂದುವರಿಸಿ ಹೇಳಿದರು. ಕರೆಂಟ್ ನಮ್ಮ ಮಯ್ಯಯಿಂದ ಹರಿದು ಇನ್ನೊಂದು ವಾಹಕಕ್ಕೆ ನಂಟಾಗಿ ಹರಿದಾಗ ನಮಗೆ ಹೊಡೆಯುತ್ತದೆ. ಇಲ್ಲದಿದ್ದರೆ ಹೊಡೆಯುವುದಿಲ್ಲ. ನೋಡು ತಂತಿಮೇಲೆ ಕೂಡೋ ಹಕ್ಕಿ ಬೇರೆ ಯಾವುದೇ ವಾಹಕ್ಕಕ್ಕೆ ಅಂಟಿಕೊಂಡಿರುವುದಿಲ್ಲ. ಅದಕ್ಕೆ ಅವಕ್ಕೆ ಹೊಡೆಯುವುದಿಲ್ಲ. ನಾವು ಕರೆಂಟ್ ಇರುವ ತಂತಿ ಹಿಡಿದಾಗ ನಮಗೂ ಕೂಡ ಯಾವುದೇ ವಾಹಕದ ನಂಟು ಇಲ್ಲದಿದ್ದರೆ ಹೊಡೆಯುವುದಿಲ್ಲ. ಉದಾಹರಣೆಗೆ ಒಣಮರದ ಹಲಗೆಯ ಮೇಲೆ ನಿಂತಾಗ ಪ್ಲಾಸ್ಟಿಕೂ, ರಬ್ಬರೂ ಮೆಟ್ಟು ಹಾಕಿಕೊಂಡಾಗ ನಾವು ಕರೆಂಟ್ ತಂತಿ ಹಿಡಿದರೆ ಹೊಡೆಯಲ್ಲ. ಆಗ ನನಗೆ ನೆನಪಾಯಿತು ಮೂಕ ಚಂದ್ರ ಯಾವಾಗಲು ಪ್ಯಾರಗಾನ್ ಮೆಟ್ಟು ಹಾಕಿಕೊಂಡಿರುತ್ತಿರುವುದು ಇಲ್ಲವೆ ಹಲಗೆಯ ಮೇಲೆ ನಿಂದು ವಯರ್ ಮುಟ್ಟುವುದು. ಕೊನೆಗೆ ಮಾಸ್ತರು ಒಂದು ಎಚ್ಚರಿಕೆಯನ್ನೂ ಕೊಟ್ಟರು. ಮಯ್ ಬೆವರೊಡೆದಿದ್ದರೆ ಕರೆಂಟು ಹೊಡೆಯುತ್ತದೆ. ಯಾಕೆಂದರೆ ಬೆವರಿನಲ್ಲಿ ನೀರಿದೆ, ನೀರು ವಾಹಕ ಅಂದರೆ ನೀರಿಗೆ ನಮ್ಮ ಮುಕಾಂತರ ಕರೆಂಟ್ ಹರಿದಾಗ ನಮಗೆ ಹೊಡೆಯುತ್ತೆ ಎಂದು ಹೇಳಿದರು.
"ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಮಾಸ್ತರ ಈ ಮಾತು ನನ್ನ ತಲೆಯಲ್ಲಿ ಮಾರುಲಿಯ(ಮಾರ್ದನಿ) ತೊಡಗಿತು. ಅದೇ ಗುಂಗು ನನ್ನ ತಲೆಯಲ್ಲಿ ನಿಂತಲ್ಲಿ ಕುಂತಲ್ಲಿ ಕೊರೆಯ ತೊಡಗಿತು. ಕರೆಂಟು ಕಂಬ, ಅದಕ್ಕೆ ಕಟ್ಟಿದ ತಂತಿ ನೋಡಿದರೆ ಸಾಕು ಮುಟ್ಟಿ ನೋಡೋಣವೇ ಎನ್ನಿಸುತ್ತಿತ್ತು. ಹಾಗೆಂದುಕೊಂಡು ಕರೆಂಟು ಕಂಬಕ್ಕೆ ಕಟ್ಟಿದ್ದ ಗಯ್ವಯರನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದೆ. ಉದ್ದವಾದ ಜೋಟಿ ಬಡಿಗೆಯಂತ ಒಣ ಕಟ್ಟಿಗೆಯನ್ನು ಹಿಡಿದು ತಂತಿಗೆ ತಾಗಿಸುತ್ತಿದ್ದೆ. ಹತ್ತಾರು ಬಗೆಯ ಪಲುಕು(ಕಲ್ಪನೆ) ನನ್ನಲ್ಲಿ ಬಂದೋಗುತ್ತಿದ್ದವು. ಪಲುಕಿನ ಮಿಡಿತ್ತಕ್ಕೆ ಹೊಂದುವ ಹಾಗೆ ಬಗೆ ಬಗೆಯಲ್ಲಿ ಏನೇನೋ ಮಾಡತೊಡಗಿದೆ. ಒಣ ಕಟ್ಟಿಗೆಯ ತುದಿಗೆ ತಂತಿ ಕಟ್ಟಿ ಜೋತಾಡುವ ತಂತಿಗೆ ತಾಗಿಸುತ್ತಿದ್ದೆ. ಏನು ಮಾಡಿದರೂ ತಣಿಯದ ಹುಳ ತಲೆಯನ್ನು ಚನ್ನಾಗಿ ತಿನ್ನ ತೊಡಗಿತು.
ಈ ಪ್ರಯೋಗ ಸಿದ್ದ ಮಾಡಲು ಒಂದು ನಲ್ ದಿನ ಬಂದೇ ಬಿಟ್ಟಿತು. ನನಗಿಂತ ಹಿರಿಯ ಗೆಳೆಯ ಹುಳ್ಳೇರ ಮಲ್ಲಿ ಹಾಗು ನಾನು ಒಮ್ಮೆ ನಮ್ಮ ತೊಟಕ್ಕೆ ಹೋಗಿದ್ದೆವು. ಮೋಟರು ಯಾಕೋ ನಡೆಯದೆ ಮನಿಸಿಕೊಂಡಿತ್ತು. ಪ್ಯೂಜ್ ಜೋಡಣೆ ತಪ್ಪಿರಬಹುದೇ ಎಂದು ನೋಡಲು ಮಲ್ಲಿ ತೋಟದ ಮನೆಯಲ್ಲಿ ಮೋಟರು ಸುರುಮಾಡಲು ಇರುವ ಸ್ಟಾಟರ್ ಹಲಗೆಯಮೇಲೆ(ಬೋರ್ಡ್) ಜೋಡಿಸಿದ ಪ್ಯೂಜ್ ಕಿತ್ತ. ಪ್ಯಾರಗಾನು ಅವಾಯಿ ಚಪ್ಪಲಿ ಹಾಕಿಕೊಂಡು ಬರಿ ಕೈಯಲ್ಲೇ ಎಲ್ಲಾ ತಂತಿಗಳನ್ನು ಮುಟ್ಟಿ ನೋಡುತ್ತ ತಿರುವುತ್ತ ತನ್ನ ಎದೆಗಾರಿಕೆಯನ್ನು ತೋರಿಸ ತೊಡಗಿದ. ನಾನು ಅವನ ಹಿಂದೆ ಸುಮ್ಮನೆ ಕಣ್ಣರಳಿಸಿ ಹೊರಳಿಸಿ ನೋಡುತ್ತ ನಿಂತಿದ್ದೆ. ಮತ್ತೆ ಅದೇ ಮಾತು, ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರು ಹೇಳಿದ ಮಾತು ತಟ್ಟನೆ ತಲೆಯಲ್ಲಿ ಸುಳಿಯಿತು. "ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಈ ಮಾತು ನೆನಪಾದೊಡನೆಯೇ ಸರಿ ನೋಡೋಣ ಮಲ್ಲಿಗೆ ಈಗ ಯಾವುದೇ ವಾಹಕಕ್ಕೆ ನಂಟಿಲ್ಲ ಅದಕ್ಕೆ ಕರೆಂಟು ಹೊಡೆಯುತ್ತಿಲ್ಲ. ಈಗ ನಾನು ಅವನನ್ನು ಮುಟ್ಟಿದರೆ? ಎಂಬ ಪಲುಕು ನನ್ನ ತಲೆಯಲ್ಲಿ ಬಂದೊಡನೆಯೇ..... ಮೆಲ್ಲನೆ ಕೈ ಎತ್ತಿ ಅವನ ಬುಜದ ಮೇಲಿಡಲೋದೆ. ಕೊಂಚ ಅಳುಕೆನಿಸಿತು. ಸರಕ್ಕನೆ ಕೈ ಹಿಂದಕ್ಕೆಳೆದುಕೊಂಡೆ. ಕಕ್ಕಾಬಿಕ್ಕಿಯಾದವನಂತೆ ಆಕಡೆ ಈಕಡೆ ನೋಡುತ್ತ ಕೂತೆ. ಹಾಗೆ ಕೊಂಚಹೊತ್ತು ಸಾವರಿಸಿಕೊಂಡು ಹೊಂಚುಹಾಕಿ ಕುಂತುಕೊಂಡು ಕಣ್ಣು ಮುಚ್ಚಿ ದೈರ್ಯ ತಂದುಕೊಂಡು ಮೆಲ್ಲನೆ ಕೈ ಎತ್ತುತ್ತ ಅವನ ಬುಜದ ಮೇಲೆ ಇಟ್ಟೆ. ಇಟ್ಟೊಡನೆಯೇ ಮಲ್ಲಿ ಸರಕ್ಕನೆ ಪ್ಯೂಜಿನೊಳಗಿಟ್ಟಿದ್ದ ಕೈಯನ್ನು ಜಾಡಿಸಿ ಕಿತ್ತುಕೊಂಡು ನನ್ನ ಹಿಂದಕ್ಕೆ ನೂಕಿ ಎನೋ ಕಿರುಚುತ್ತ ಒಂದೇ ಓಟ.... ಮನೆಯಿಂದ ಹೊಲದ ಬಯಲವರೆಗೆ. ಆಗಲೆ ನನಗೂ ಶಾಕು ಹೊಡೆದಿತ್ತು. ಮುಂಗುಸಿ ನೋಡಿದ ಹಾವಿನಂತೆ ಕಂಗೆಟ್ಟು ಹೋಗಿದ್ದೆ. ಮೆಲ್ಲನೆ ಎದ್ದು ನಾನು ಹೊರಗೆ ಓಡಿದೆ. ಮುಂದೆ ಅವನೂ ಏನೂ ಹೇಳಲಿಲ್ಲ ನಾನು ನನ್ನ ಪ್ರಯೋಗದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.
ಇಶ್ಟಾದರು ನನ್ನ ತಲೆಯೊಳಗೆ ಕೊರೆಯುತ್ತಿದ್ದ ಹುಳ ನನ್ನ ನಿದ್ದೆ ಕೆಡಿಸಿತು. ಮಾಸ್ತರು ಹೇಳಿದ ಮಾತು ದಿಟವೊ ಸುಳ್ಳು ಎಂದು ಪಕ್ಕ ಮಾಡಿಕೊಳ್ಳ ಬೇಕಿತ್ತು. ಇನ್ನೊಮ್ಮೆ ದಿಟ ಎಂದು ಪ್ರಯೋಗದ ಮೂಲಕ ಕಂಡುಕೊಳ್ಳುವವರೆಗೆ ನನಗೆ ನೆಮ್ಮದಿ ಇಲ್ಲದಾಯಿತು. ಅಂತಹ ನಲ್ಹೊತ್ತಿಗಾಗಿ ಕಾಯತೊಡಗಿದೆ. ದಿನ ಉರುಳತೊಡಗಿದವು. ಒಂದುದಿನ ಶನಿವಾರ ಬಂತು. ಶನಿವಾರದ ಮುಂಜಾನೆಯ ಶಾಲೆ ಮುಗಿಸಿಕೊಂಡು ಹಾದಿಗುಂಟ ಕಡ್ಲೆಕಾಯಿ ಕದ್ದು ತಿನ್ನುವುದಕ್ಕೆ, ಜಿನ್ನಿನವರ ಕಬ್ಬಿನ ತೋಟಕ್ಕೆ ನುಗ್ಗಿ ಕಬ್ಬು ಕದಿಯುವುದಕ್ಕೆ ರಜ ಹೇಳಿ ಓಡೋಡಿ ಮನಗೆ ಬಂದೆ. ಆತುರ ಆತುರದಲ್ಲೇ ಒಂದೊಶ್ಟು ಕೂಳು ತಿಂದು ಒಬ್ಬನೇ ತೋಟಕ್ಕೆ ಹೋದೆ. ಯಾರಿಗೂ ಏನೂ ಹೇಳಲಿಲ್ಲ. ನನ್ನ ಗೆಳೆಯರು ಜೊತೆಗೆ ತೋಟಕ್ಕೆ ನಾವು ಬರುತ್ತೇವೆ ಎಂದು ಹಿಂದೆ ಬಿದ್ದರೂ ಅವರಿಗೆಲ್ಲಾ ಚಳ್ಳೆಹಣ್ಣು ತಿನ್ನಿಸಿ ಕಣ್ಣು ತಪ್ಪಿಸಿ ಒಬ್ಬನೇ ಹೊರಟೆ. ಆಗಲೆ ನನ್ನ ಅರಿವಿನಲ್ಲಿ ಏನೇನು ಪ್ರಯೋಗ ಮಾಡಬೇಕೆಂದು ನೂರಾರು ಪಲುಕು(ಕಲ್ಪನೆ) ಬರತೊಡಗಿದವು. ನನ್ನ ಪ್ರಯೋಗಕ್ಕೆ ಬೇಕಾದ ಮೆಟ್ಟು, ಒಣಮರದ ಹಲಗೆ, ತಂತಿ ಎಲ್ಲಾ ನನ್ನ ಹೊಲದಲ್ಲಿ ಬೇಕಾದಶ್ಟು ಸಿಗುತ್ತಿದ್ದವು. ಹೋದೆ. ನಾನೂರಹತ್ತು ವೋಲ್ಟನ ಮೂರರಲ್ಲಿ ಒಂದು ಪ್ಯೂಜ್ ಕಿತ್ತೆ. ಕಾಲಲ್ಲಿ ಮೆಟ್ಟು ಹಾಕಿಕೊಂಡು ಹಲೆಗೆಯ ಮೇಲೆ ನಿಂತೆ. ಮೆಲ್ಲ ಮೆಲ್ಲನೆ ಅಂಜಿಕೆ ಅಳುಕು ಏನೂ ಇಲ್ಲದೆ ಒಂದು ಗೇಣಿನಶ್ಟು ಉದ್ದದ ತಾಂಬ್ರದ ತಂತಿಯನ್ನು ಹಿಡಿದು ಎಲ್ಲೂ ನನಗೂ ಬೇರಾವುದೆ ವಾಹಕಕ್ಕೂ ನಂಟಾಗದಂತೆ ಎಚ್ಚರವಹಿಸುತ್ತ ಕರೆಂಟ್ ಇದ್ದ ಪ್ಯೂಜಿನ ಕಡೆ ಸೇರಿಸಿದೆ. ಶಾಕ್ ಹೊಡೆಯಲಿಲ್ಲ. ನಾನೂರ ಹತ್ತು ವೋಲ್ಟ್. ಗುಂಡಿಗೆ ತುಸು ಹೆಚ್ಚಾಯಿತು. ಆದರೆ ಒಂದುಕಡೆ ಸಂಶಯ ಬರತೊಡಗಿತು. ನಾನು ತಂತಿ ಇಟ್ಟ ಕಡೆ ಕರೆಂಟು ಇದೆಯೋ ಇಲ್ಲವೋ? ನೋಡಿ ಪಕ್ಕಮಾಡಿಕೊಳ್ಳ ಬೇಕೆನಿಸಿತು. ಟೆಸ್ಟರ್ ತೆಗೆದುಕೊಂಡು ಪ್ಯೂಜೊಳಗೆ ಇಟ್ಟೆ. ಟೆಸ್ಟರ್ ದೀಪ ಹೊತ್ತಿತು. ಅಲ್ಲಿ ಕರೆಂಟು ಇರುವುದು ದಿಟವಾಯಿತು. ಮತ್ತೊಮ್ಮೆ ದಪ್ಪ ತಂತಿ ಇಟ್ಟು ನೊಡಿದೆ. ಈಗಲೂ ಕರೆಂಟ್ ಹೊಡೆಯಲಿಲ್ಲ. ಹತ್ತಾರು ಬಾರಿ ತಂತಿ ಇಟ್ಟು ತೆಗೆದು ನೋಡಿದೆ. ಆಗ ನನಗೆ ಜಯಮೂರ್ತಿ ಸಾರು ಹೇಳಿದ ಮಾತು ದಿಟವಂದನಿಸತೊಡಗಿತು.
ಪ್ರಯೋಗದ ಒಂದನೆ ಬಾಗ ಮುಗಿಯಿತು. ತೋಟದ ಮನೆಯಿಂದ ಹೊರಬಂದೆ. ಯಾರಾದರು ಇತ್ತ ಸುಳಿದರೆ? ಹತ್ತಿರದಲ್ಲಿದ್ದ ತೆಂಗಿನ ಮರವೇರಿ ಸುತ್ತೆಲ್ಲ ನೋಡಿದೆ. ಯಾರೂ ಇಲ್ಲ. ನನ್ನ ಮುಂದಿನ ಬಾಗವಾದ ಶಾಕ್ ಹೊಡೆಯುವುದನ್ನು ಅನುಭವಿಸಿ ತಿಳಿದುಕೊಳ್ಳ ಬೇಕಿತ್ತು. ಯಾಕೋ ಈ ಮಾತು ನೆನಸಿಕೊಂಡೊಡನೆಯೇ ಎದೆ ಅಳ್ಳೊಡೆಯತೊಡಗಿತು. ಕೊಂಚ ಅಂಜಿಕೆ ಅನಿಸತೊಡಗಿತು. ಆದರೂ ಬಿಟ್ಟುಕೊಡುವ ಮನಸ್ಸಿಲ್ಲ. ಸರಿ ನೋಡೋಣವೆಂದು ಮನೆಯ ಹೊಳಹೊಕಕ್ಕೆ. ಮತ್ತೆ ಮೆಟ್ಟು ಮೆಟ್ಟಿ ತಂತಿಯನ್ನು ಪ್ಯೂಜ್ ನಲ್ಲಿ ಸಿಕ್ಕಿಸಿದೆ. ಎರಡು ಮೂರು ಬಾರಿ ಇಟ್ಟು ತೆಗೆದು ಮಾಡಿದೆ. ಇನ್ನೊಮ್ಮೆ ಟೆಸ್ಟರ್ ಇಟ್ಟೆ. ದೀಪ ಹತ್ತಿತು. ಕರೆಂಟು ಇರುವುದು ಪಕ್ಕವಾಯಿತು. ಒಣ ಹಲಗೆಯ ಮೇಲೆ ಒಂದು ಕುಡುಗೋಲನ್ನು ಇಟ್ಟೆ. ಮೆಟ್ಟು ಮೆಟ್ಟಿ ತಂತಿ ಹಿಡಿತು ಸರಿ ಎಂದು ಪ್ಯೂಜಿನಲ್ಲಿ ಇಟ್ಟೆ. ನಾನೂರ ಹತ್ತು ವೋಲ್ಟ್. ಕೊಂಚ ಏರುಪೇರಾದರೂ ಏನಾಗುವುದೋ ಗೊತ್ತಿಲ್ಲ. ಏನಾದರು ಹೆಚ್ಚು ಕಡಿಮೆಯಾದರೆ ಪ್ಯೂಜಿನಲ್ಲಿರುವ ಹರಿದಾಡುವ ನಾರೂರ ಹತ್ತು ವೋಲ್ಟನ ಕರೆಂಟ್ ಸಾವಗಿ ನನ್ನ ಹೆಣವಾಗಿಸಿಬಿಡುತ್ತದೆ. ಒಳಗೆ ಅಂಜಿಕೆ ಆದರೂ ಎಲ್ಲೋ ಇನ್ನೊಂದಡೆ ಒಣ ಕೆಚ್ಚು. ಜೊತೆಗೆ ಮೆಲ್ಲ ಕಯ್ನಡುಗಿಸುವ ತುಜು ಹೆದರಿಕೆ. ಮೈಯ ಬಿಸಿ ಮೆಲ್ಲನೆ ಕೊಂಚ ಹೆಚ್ಚಾಯಿತು. ಸಾವಿನ ನೆರಳು ತಲೆಯಲ್ಲಿ ಸುಳಿದರೂ ಬಿಡುವ ಪಿಂಡ ನಾನಲ್ಲ. ಯಾವಗಲು ಹಟಮಾರಿ ನಡವಳಿಕೆಗೆ ನನ್ನದು. ಹಟಮಾರಿತನದ ದಗ್ವಿಜಯಕ್ಕೆ ನಮ್ಮ ಮನೆಯಲ್ಲಿಯೇ ಹೆಸರುವಾಸಿಯಾದ ತ್ರಿವಿಕ್ರಮ ನಾನಾಗಿದ್ದೆ. ಈಗ ನಾನೂರ ಹತ್ತು ವೋಲ್ಟ ನನ್ನ ಮೈಯಲ್ಲಿ ಹರಿಯುತ್ತಿದೆ. ಅದರ ಯಾವುದೇ ಇರುವಿಕೆಯ ಅರಿವು ನನಗಾಗುತ್ತಿಲ್ಲ. ಕೊನೆಗೆ ಅಂಜುತ್ತಲೇ ಪಕ್ಕದಲ್ಲಿ ಇಟ್ಟಿದ್ದ ಕುಡುಗೋಲಿನ ತುದಿ ಮುಟ್ಟಿದೆ ಮುಟ್ಟಿದೊಡನೆಯೇ......
ಮರುಗಳಿಗೆಯಲ್ಲಿ ಜಯಮೂರ್ತಿ ಮಾಸ್ತರು ಹೇಳಿದ್ದ ಮಾತು ದಿವಾಗಿ ಸಿದ್ದವಾಗಿತ್ತು. ಶಾಕ್, ಎಶ್ಟು ಬಿರುಸಾದ ಶಾಕ್..! ಶಾಕ್ ನ ಜೋರಿಗೆ ಕೈಜಾಡಿಸಿದೆ. ಜಾಡಿಸಿದ ಕೈ ಅಲ್ಲೇ ಇದ್ದ ಗೋಡಗೆ ಹೊಡೆಯಿತು. ಎಂತಹ ಹೊಡೆದ. ಕೈ ಮರ ಮರ ಎನ್ನುತ್ತಿದ್ದರೆ ಸ್ವಾದೀನ ಕಳೆದುಕೊಂಡಿತೇನೋ.. ಅನ್ನಿಸುತಿತ್ತು. ಕರೆಂಟು ಹರಿದಾಟ ನಿಂತಿದ್ದರೂ ಮೈಯಲ್ಲಿನ ಜುಮು ಜುಮು ಜುಮು ನಿಂತಿರಲಿಲ್ಲ. ನಡುಕ .....ಜಿನುಗಿದ ಬೆವರು, ಜೋರಾದ ಉಸಿರಾಟ ಬೆಚ್ಚಿದ ನೋಟ. ಮೆಲ್ಲ ಮೆಲ್ಲನೆ ಸಾವರಿಸಿಕೊಂಡು ಎದ್ದು ಸುತ್ತೆಲ್ಲ ನೋಡಿದೆ. ಯಾರು ಇರಲಿಲ್ಲ. ಉಸುರಿನ ಜೋರು ಕೊಂಚ ಇಳಿಯಿತು ಅಂತು ಬದುಕುಳಿತು ಜೀವ ಎಂದುಕೊಂಡು ಹೊರಬಂದು ಬಾವಿ ಮಣ್ಣಿನ ದಿಬ್ಬದ ಮೇಲೆ ಕುಡುಗೋಲಿನಿಂದ ದಿಬ್ಬದ ಮಣ್ಣು ಹಗೆಯುತ್ತ ಕುಳಿತಿದ್ದೆ. ಮರದ ದಡದಲ್ಲೇ ಬೆಳೆದು ನಿಂತಿರುವ ಕರಿಜಾಲಿ ಹೆಮ್ಮರ ಬಾವಿಯ ಕಡೆವಾರಿ ನಿಂತಿದೆ. ನೀರಿನ ಮೇಲೆ ಚಾಚಿರುವ ಕೊಂಬೆಗಳಿಗೆ ಜೋತು ಬಿದ್ದಿರುವ ಗೀಜಗನ ಗೂಡು. ಚಿಮ್ ಚಿಮ್ ಗೀಜಗನ ಕೊರಳ ಸದ್ದು ಬರುತ್ತಿದ್ದು. ಇದ್ದಕ್ಕಿದ್ದ ಹಾಗೆ ಜೋರು ಚೀರಾಟ ಅಂಜಿಸುವಂತ ಕೊರಳ ಚೀರು, ಯಾಕೆ ಈ ಚೀರು ಎಂದುದು ಆಕಡೆ ತಲೆಯೆತ್ತಿ ನೋಡಿದೆ. ಮಾರುದ್ದದ ಕೇರೆಹಾವು ಗೀಜಗ ಹಕ್ಕಿ ಹಿಂಡಿನ ಮೇಲೆ ಬೇಟೆಯ ಸವಾರಿ ನಡೆಸಿತ್ತು. ನೋಡಿದೊಡನೆಯೇ ಹಾವಿನ ಮೇಲೆ ಕೋಪ ಬಂತು ಸಿಕ್ಕ ಕಲ್ಲು ತೆಗೆದುಕೊಂಡು ಹಾವಿನಕಡೆ ಕಲ್ಲು ಬೀಸಿತೊಡಗಿದೆ. ಕೊಂಚ ಹೊತ್ತಾದಮೇಲೆ ಅಕ್ಕ ಅಮ್ಮ ಬಟ್ಟೆ ತೊಳೆಯಲು ತೋಟಕ್ಕೆ ಬಂದರು. ನಾನೊಬ್ಬನೆ ಮರದ ಕಡೆ ಕಲ್ಲುಬೀಸುತ್ತಿದ್ದಿದ್ದು. ನನ್ನ ಜೊತೆಗೆ ಬರುವ ವಾನರ ಗೆಳೆಯ ಬಳಗ ಬೇರೆ ಇಲ್ಲ. ನನ್ನ ಮುಕ ಶಾಕ್ ಹೊಡೆತಕ್ಕೆ ಇಂಗುತಿಂದ ಮಂಗನಂತೆ ಸಂಣದಾಗಿತ್ತು. ನನ್ನ ಕೀಟಲೆ ತರಲೆ ಬಗ್ಗೆ ಚನ್ನಾಗಿ ತಿಳಿದಿದ್ದ ಅಕ್ಕ ನನ್ನ ಮುಕ ನೋಡಿದೊಡನೆಯೇ ...ಏನೋ ಅವಾಂತರ ನಡೆಸಿದ್ದಾನೆ ಎಂದು ದಿಟವಾದ ನಂಬುಗೆಯಲ್ಲಿ ಇವತ್ತಿನ ಪುರಾಣ ಏನು ಎಂದು ನನ್ನಡಗೆ ನೋಡಿ ಕೇಳುವಲ್ಲಿಗೆ. ....... ಅವನದೆಲ್ಲಿ ಮುಗಿಯುತ್ತೆ ದಿನಾ ಇದ್ದದ್ದೇ ರಾಮಾಯಣ ಬಾ ಎಂದು ಅಮ್ಮ ಅಕ್ಕನನ್ನು ಕರೆಯುವಲ್ಲಿಗೆ........
ನನ್ನಂತೆ ಈ ಬಗೆಯ ಸಾವಿನೊಡನೆ ಆಟವಾಡುವ ಪ್ರಯೋಗ ಯಾರು ಮಾಡದಿರಲೆಂದು...ಈ ಬರಹದೊಂದಿಗೆ ಬೇರೆಯವರಿಗೆ ಬರೆದು ತಿಳಿಸಲೆಂದು....ದೇವರು ನನ್ನ ಬದುಕಿಸಿದನೆಂದು ನಂಬಿ ದೇವರಲ್ಲಿ ಪಡಮಟ್ಟು ಬರಹ ಮುಗಿಸುವಲ್ಲಿಗೆ.......!
ಕುಕೂಊ...
(ಕುಮಾರಸ್ವಾಮಿ. ಕಡಾಕೊಳ್ಳ)
ಪುಣೆ
ಬೆಂಗಳೂರಿಗೆ ಹೋಗಿ ಯಾರನ್ನಾದರು ಮನೆಯ ವಿಳಾಸ ಅಥವ ದಾರಿ ಬಗ್ಗೆ ಕೇಳಿ. ನಿಮಗೆ ಸಿಗುವ ಉತ್ತರ, "ನೋಡಿ ಸಾರ್, ಸ್ಟ್ರೈಟ್ ಹೋಗಿಬಿಡಿ, ಸೆಕೆಂಡ್ ಲೆಫ್ಟ್ ತೊಗೊಳ್ಳಿ, ಅಲ್ಲಿಂದ ಜಷ್ಟ್ ಫೈವ್ ಮಿನಿಟ್ ವಾಕ್ ಮಾಡಿ ನೆಕ್ಸ್ಟ್ ಒಂದು ಸರ್ಕಲ್ ಸಿಗುತ್ತೆ. ಸರ್ಕಲ್ ನಿಂದ ರೈಟ್ ಟರ್ನ್ ತೊಗೊಂಡು ಟೂ ಮಿನಿಟ್ ವಾಕ್ ಮಾಡಿದ್ರೆ ನಿಮಗೆ ಒಂದು ಬಿ.ಎಮ್.ಟಿ.ಸಿ. ಬಸ್ ಸ್ಟಾಪ್ ಸಿಗುತ್ತೆ. ಅಲ್ಲಿಂದ ಟೂತರ್ಟಿ ನಂಬರ್ ಬಸ್ ಕ್ಯಾಚ್ ಮಾಡಿ. ಲಾಷ್ಟ ಸ್ಟಾಪೇ ಮೆಜೆಸ್ಟಿಕ್ ಸ್ಟಾಪ್. ಅಲ್ಲಿ ಕಂಡಕ್ಟರ್ ಅಥವ ಯಾರನ್ನಾದರು ಕೇಳಿ ನಿಮಗೆ ಜಯನಗರ ಫೋರ್ತ್ ಬ್ಲಾಕ್ ಗೆ ಹೋಗೋ ಬಸ್ ಬಗ್ಗೆ ಹೇಳ್ತಾರೆ. ಮೋಸ್ಟ್ಲಿ ಫೋರ್ತ್ ಫ್ಲಾಟ್ ಫಾರ್ಮ್ ನಿಂದ ಸಿಕ್ ಸ್ಟೀ ಟೂ ನಂಬರ್ ಹೋಗುತ್ತೆ ಅನಿಸುತ್ತೆ. ಜಸ್ಟ ಮೆಜೆಸ್ಟಿಕ್ ನಲ್ಲಿ ಒಮ್ಮೆ ಎನ್ ಕ್ವಾರಿ ಮಾಡಿ ಕನ್ಪಾರಮ್ ಮಾಡ್ಕೊಳ್ಳಿ"
ಏನಿದು ಯಾಕೆ ಇದನ್ನ ಇಲ್ಲಿ ಹೇಳ್ತೀನಿ ಅಂತ ಕೇಳ್ತೀರ. ಇದು "ನನ್ನ ನಾಡು, ಕನ್ನಡಿಗರ ನಾಡು ಕನ್ನಾಡು ರಾಜ್ಯಧಾನಿ ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನುಡಿಯುವ ಕಸ್ತೂರಿ ಕನ್ನಡ" ಮೇಲಿನ ಸಾಲಿನಲ್ಲಿ ಸಿಗುವುದು ನೂರಕ್ಕೆ ಎಂಬತ್ತರಿಂದ ತೊಂಭತ್ತರಶ್ಟು ಪದಗಳು ಅಪ್ಪಟ ಇಂಬ್ಲೀಚ್ ಪದಗಳೇ. ಕೆಲವು ಪ್ರತ್ಯಯ ಹಾಗು ಜೋಡಿಸುವ ಒರೆಗಳನ್ನು ಬಿಟ್ಟು ಮತ್ತೆಲ್ಲ ಒರೆಗಳು ಬೇರೆ ಬಾಷೆಯ ಪದಗಳೆ. ಇದು ಇವತ್ತು ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನಲಿಯುವ ಕನ್ನಡದ ಪಾಡು. ದಿನಪತ್ರಿಕೆಗಳಲ್ಲಿ ಇವತ್ತಿನ ದಿನಗಳಲ್ಲಿ ಕೇಳಿಬರುತ್ತಿರುವುದೇನೆಂದರೆ ಬೆಂಗಳೂರಿನಲ್ಲಿರುವ ಕನ್ನಡಿಗರ ಬಲ ಕೇವಲ ಮೂವತ್ತೆಂಟರಿಂದ ನಲವತ್ತರಷ್ಟು ಎಂದು. ಆ ಮೂವತ್ತು ನಲವತ್ತರಷ್ಟು ಕನ್ನಡಿಗರ ಬಾಯಲ್ಲಿ ನುಲಿಯುವ ಕನ್ನಡದ ಪಾಡು ಇದು. ಅಂದರೆ ನೀವೇ ಊಹಿಸಿಕೊಳ್ಳಿ ನಮ್ಮ ಕಸ್ತೂರಿ ಕನ್ನಡದ ಪಾಡನ್ನು.
ಇನ್ನೂ ಕನ್ನಡದ ಕಣ್ಣೀರಿನ ಕತೆ ಕೇಳಬೇಕೆ ಇಗೋ ಇಲ್ಲಿ ನೋಡಿ
ಜಷ್ಟ್ ಟೂ ಮಿನಿಟ್ ವಾಕ್ ಹೊಡೆದಕ್ಕೆ ಕನ್ನಡದ "ಎರಡು ಗಳಿಗೆಯ ದಾರಿ" ಇಲ್ಲವೆ "ಎರಡು ಹರದಾರಿ", " ಕಣ್ಣಳತೆಯ ದಾರಿ" ಸೆಟ್ಟಹೇರಿ ಸುಡುಗಾಡಿಗೆ ಹೋಗಲು ಕೂತಿದೆ.
"ಹಾಲಲ್ಲಿ ಸೋಫಾದ ಮೇಲೆ ಟೀವಿ ರಿಮೋಟ್ ಇದೆ" ಈ ಸಾಲಲ್ಲಿ ಇರುವ ಕನ್ನಡದ ಒರೆಗಳೆಷ್ಟು? ಮೊಗದೊಂದು "ಮಾರ್ಕೆಟಿಗೆ ಹೋಗಿ ಬೀನ್ಸ್ ತಂದು ಅದನ್ನು ವಾಶ್ ಮಾಡಿ, ಚೆನ್ನಾಗಿ ಕಟ್ ಮಾಡಿ, ಸ್ಟವ್ ಮೇಲಿಟ್ಟು ಸರಿಯಾಗಿ ಫ್ರೈ ಮಾಡಿ ತಿಂದರೆ ಏನ್ ಟೇಸ್ಟ್ ಅಂತೀರಿ... " ಜೊತೆಗೆ ಕನ್ನಡವನ್ನೂ ಸುಟ್ಟು ಬಿಡು ಎಂದೇಳಿಬಿಡೋಣವೇ ಈಗೆ ಕನ್ನಡ ಮಾತನಾಡುವವರಿಗೆ?
ಕೃಷ್ಣೇಗೌಡ್ರು ಎಲ್ಲೋ ಹೇಳಿದಂತೆ..
"ರೀ... ಮದುವೇಗೆ ಹೋಗ್ತಿದೀವಿ... ಗೋಲ್ಡ್ ಜೆವೆಲ್ಸ್... ಅದ್ರಲ್ಲೂ ಆ ದೊಡ್ಡ ನೆಕ್ಲೇಸ್ ಹಾಕ್ಕೋಬೇಕೂಂತ ಆಸೆ... ಅವೆಲ್ಲಾ ಇವತ್ತು ನಾನು ಹಾಕ್ಕೋತೀನಿ... ಮ್ಯಾರೇಜ್ ಹಾಲ್ನ ಡೋರ್ನಲ್ಲೇ ನಿಂತ್ಕೊಂಡು ಎಲ್ರನ್ನೂ ರಿಸೀವ್ ಮಾಡ್ತೀನಿ... ಯಾಕಂದ್ರೆ ಎಲ್ರೂ ನನ್ನ "ನೆಕ್ಲೆಸ್" ನೋಡಿಯೇ ಒಳಹೋಗ್ಬೇಕೂಂತ ಆಸೆ ಕಣ್ರೀ" ಈಗೆ ನೆಕ್, ನೆಕ್ಲೆಸ್ಸ್ ನಮ್ಮ ಬಾಯಲ್ಲಿ ಉಲಿಯುತ್ತಿದ್ದರೆ ಕನ್ನಡ ನೆಕ್ಕಿ ನೆಲಸಾರುವುದಂತೂ ದಿಟ.
ಇದು ಒಂದು ಪಾಡಾದರೆ ಕನ್ನಡದ ಇನ್ನೊಂದು ಪಾಡೇನಪ್ಪಾ ಅಂದ್ರೆ ಬೇಡವಿಲ್ಲದ ಜಾಗದಲ್ಲಿ ಸಂಸ್ಕೃತ ತುರುಕುವುದು. ಹೆಚ್ಚು ಹೆಚ್ಚು ಸಂಸ್ಕೃತ ಒರೆಗಳನ್ನ ಬಳಸುವುದನ್ನೇ ದೊಡ್ಡಸ್ತಿಕೆಯ, ಹಿರಿಮೆಯ ಸಂಕೇತವಾಗಿ ಮಾಡಿಕೊಂಡಿರುವ ಇನ್ನೊಂದು ಹಿಂಡು. ಇಂತಹ ಸಕ್ಕದ ಹಿಂದೆ ಬಿದ್ದಿರುವ ಹಿಂಡಿನಲ್ಲೊಬ್ಬನ ತಿಳಿವಂತನ ಮಾತನ್ನೊಮ್ಮೆ ಕೇಳಿ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ? ಅಯ್ಯೋ ನನ್ನ ಸುಲಿದ ಬಾಳೆ ಹಣ್ಣಿನಂತ ಕನ್ನಡವೇ..ಈ ಜಾಣನಿಗೆ ಅಪ್ಪಟ ಕನ್ನಡ ನುಡಿಬಳಸುವುದಕ್ಕೆ ಏನು ದಾಡಿ. ಅಂಜಿಕೆಯೆ? ಅಳುಕೇ? ಮುಜುಗರವೇ? ಕೀಳರಿಮೆಯೇ? ನಿಧನರಾದರು ಅನ್ನುವ ಪದಕ್ಕೆ ಕನ್ನಡದಲ್ಲಿ ನುಡಿಗಳಿಲ್ಲವೇ? ಇನ್ನೊಬ್ಬ ನನ್ನ ಗೆಣೆಯ ಹೇಳುವಂತೆ ನಿಧನರಾದರು ಎಂಬುದಕ್ಕೆ ಈಗೆಲ್ಲಾ ಒರೆಗಳನ್ನು ಬಳಸಬಹುದಲ್ಲ. ಸತ್ತರು =ತೀರಿಹೋದರು = ಕೊನೆಯುಸಿರೆದರು = ಕಣ್ಮಿದರು=ಶಿವನಡಿಸೇರಿದರು ಮುಂತಾದ ಕನ್ನಡದ ಪದಗಳೇ ಇವೆ.. ಇವನ್ನು ಬಳಸ ಬಹುದಲ್ಲ. ಇದರ ಬದಲು ಸಕ್ಕದ(ಸಂಸ್ಕೃತದ) ನಿಧನ, ಮೃತ, ದಿವಂಗತ, ಇಲ್ಲವೇ ಉರ್ದು ಪದಗಳಾದ ’ಗುಜರ್ ಜಾನ’. ’ಇಂತಿಕಾಲ್’ ಇಲ್ಲವೇ ಇಂಗ್ಲೀಶಿನ ’ಪಾಸ್ ಅವೇ’ ’ಎಕ್ಸ್ಪಯಿರ್ಡು’ ಯಾವುದನ್ನೇ ಬಳಸಿದರೂ ಅದು ಕನ್ನಡವಲ್ಲ... ಅದು ಅನ್ಯಬಾಶೆಯ ಪದವೇ. ಈ ಗೆಳೆಯನ ಮಾತು ದಿಟವಾಗಿ ಸರಿ ಅಲ್ಲವೇ?
ಮೇಲೇ ಹೇಳಿದ ಮಾತನ್ನೇ ಒಂದು ಮಾದರಿಯಾಗಿ ನೋಡೋಣ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ?
ಇದರಲ್ಲಿ ಚಂದ ಕಾಣುವುದಕ್ಕೂ ಕಾಣದೇ ಇರುವುದಕ್ಕೂ ಮತ್ತು ನಿಧನಕ್ಕು ಇರುವ ನಂಟೇನು? ಸಕ್ಕ ಬಲ್ಲವರಿಗೆ, ಸಕ್ಕವನ್ನು ತಾಯಿನುಡಿಯಾಗಿ ಮಾತನಾಡುವವರಿಗೆ ಸಕ್ಕದಲ್ಲಿ ನಿಧನ ಏನು ತಿಳಿಸುವುದೊ ಕನ್ನಡದ ಬಲ್ಲ ಜನಕ್ಕೆ ತೀರಿದರು, ಕಣ್ಮಿದರು, ಕೊನೆಯುಸಿರೆಳೆದರು, ಅಗಲಿದರು, ದೂರವಾದರು, ಶಿವನಡಿ ಸೇರಿದರು ಇನ್ನು ಹತ್ತು ಹಲವು ನುಡಿಗಳು ತಿಳಿಸುವುದು ಸತ್ತರು ಎನ್ನುವುದನ್ನೇ. ಇಶ್ಟೊಂದು ಕನ್ನಡ ಪದಗಳ ಗಂಟೇ ನಮ್ಮಲ್ಲಿ ಇರುವಾಗ ಬಿಂಕಕ್ಕೋ ಹೆಚ್ಚುಗಾರಿಕೆಗೊ ಸೋತು ಸಕ್ಕಕ್ಕೋ, ಇಂಬ್ಲೀಚಿಗೋ ಇನ್ಯಾವುದೋ ನುಡಿಗೆ ಮಾರು ಹೋಗಿ ಅದಕ್ಕೆ ಅಂಟಿಕೊಂಡರೆ ನಮ್ಮ ಕನ್ನಡದ ಗತಿ? ನಮ್ಮಲ್ಲಿ ತೀರಿದರು ಅನ್ನೋ ನುಡಿಗೆ ಬದಲಿ ಪದ ಇರಲಿಲ್ಲ ಅಂದರೆ ಸಕ್ಕದ ಬಗ್ಗೆ ಅವರು ಕೊಡುವ ಹಂಚಿಕೆ (ತರ್ಕ) ಒಪ್ಪಬಹುದಿತ್ತು. ಹೀಗೇ ಸಕ್ಕದ ಅಟ್ಟಹಾಸ ಮುಂದುವರಿದರೆ ನಮ್ಮ ಕನ್ನಡದ ಪದಗಳು ನಮ್ಮವು ನಮ್ಮ ಕನ್ನಡದವು ಅಂತ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುವುದು ಹೇಗೆ? ಇದು ಕೀಳರಿಮೆಯೋ ಇಲ್ಲ ಅಡಿಯಾಳುತನವೋ ಒಟ್ಟಿನಲ್ಲಿ ನಮ್ಮ ಕನ್ನಡವಂತು ಸಕ್ಕ, ಇಂಬ್ಲೀಚು ಹೊರೆಯಲ್ಲಿ ಸಿಕ್ಕು ನೆತ್ತರುಕಾರಿ ನಲುಗುತ್ತ ಬಿಕ್ಕುತ್ತಿರುವುದಂತೂ ನೂರರಶ್ಟು ದಿಟ. ಬೇರೆ ನುಡಿಗಳ ಬೇಡಿಯಿಂದ ನಾವು ಜೊತೆಗೆ ನಮ್ಮ ಕನ್ನಡವನ್ನು ಬಿಡುಗಡೆ ಗೊಳಿಸುವುದನ್ನು ನಾವು ತಿಳಿದುಕೊಂಡು ಮುನ್ನಡೆಯಬೇಕು ತಾನೆ? ಹೌದು ಹತ್ತಾರು ಜನರು ಹತ್ತಾರು ಬಗೆಯಲ್ಲಿ ತಮ್ಮ ಹಂಚಿಕೆಯನ್ನು ಕೊಡುತ್ತಾರೆ. ನುಡಿ ನಿಂತ ನೀರಾಗಬಾರದೆಂದರೆ ಬೇರೆ ನುಡಿಯ ಪದಗಳನ್ನು ಬಳಸಬೇಕು. ಆಗ ನಮ್ಮ ನುಡಿ ಬೆಳೆಯುತ್ತದೆ ಎನ್ನುವ ತರ್ಕ ಮುದಿಡುತ್ತಾರೆ. ಬೇರೆ ನುಡಿಯ ಪದಗಳನ್ನು ಬಳಸಲೇ ಬಾರದೆಂಬ ಗೊಡ್ಡು ನಮ್ಮದಾಗಬಾರದು. ಆದರೆ ಅದಕ್ಕೊಂದು ಎಲ್ಲೆ ಬೇಕಲ್ಲವೆ? ಈಗೇ ಬೇರೆಯದನ್ನು ಪಡೆಯುತ್ತಲೇ ಹೋದರೆ ನಮ್ಮದು ಬೆಳೆಯುವುದು ಹೇಗೆ? ನಮ್ಮದನ್ನು ಬೆಳೆಸುವ ಬದಲು ಇನ್ನೊಂದಕ್ಕೆ ಯಾವಾಗಲು ಕಯ್ಚಾಚುತ್ತ ಕೂತರೆ ನಮ್ಮದು ಬೆಳೆಯದೆ ನಿಲ್ಲುವುದಿಲ್ಲವೆ? ಆಗ ನಮ್ಮತನ ಉಳಿಯುವುದೆಲ್ಲಿ? ಅದೆಲ್ಲ ಅಲ್ಲಿರಲಿ ಕನ್ನಡದ ಕೊರಗಂತೂ ಮುಗಿಲು ಮುಟ್ಟಿದೆ ಎನ್ನುವುದನ್ನು ಕನ್ನಡಿಗನಾದವನು ಇಂದು ಅರಿಯಲೇ ಬೇಕು.
ಒಮ್ಮೆ ನಾನು ಗುರುನಾಥ ಜೋಶಿಯವರ ’ಒರೆಗಂಟು’(ಶಬ್ದಕೋಶ)ನಲ್ಲಿ ಕನ್ನಡ ಪದ ಹುಡುಕುತ್ತಿದ್ದೆ. ಅದರಲ್ಲಿ ನನಗೆ ತಿಳಿದಿದ್ದೇನಪ್ಪ ಅಂದ್ರೆ ಆ ನುಡಿಗಂಟಿನಲ್ಲಿರುವ ನೂರಕ್ಕೆ ನಲವತ್ತಕಿಂತ ಹೆಚ್ಚು ಪದಗಳು ಸಕ್ಕದ ಪದಗಳೇ. ನನಗೆ ಬೇಕೆಂದಿರುವ ಕನ್ನಡ ಒರೆ ಆ ಹೊತ್ತಿಗೆಯಲ್ಲಿ ಸಿಗುತ್ತಿಲ್ಲ, ಅತವ ಆ ಒರೆಗಂಟಿನಲ್ಲಿ ನನಗೆ ಬೇಕಾಗಿರುವ ಕನ್ನಡ ಪದ ಇಲ್ಲವೇ ಇಲ್ಲ. ನೀವೇ ಊಹಿಸಿ ನಮ್ಮ ಅಚ್ಚಕನ್ನಡದ ಪಡಿಪಾಟಲು. ಕನ್ನಡದ ನಿಗಂಟು ಎಂಬ ತಲೆನಾಮ ಹೊತ್ತು ಬೆಳಕಿಗೆ ಬಂದ ಹೊತ್ತಿಗೆಯಲ್ಲಿ ನಮಗೆ ಸಿಗುವುದು ನಲವತ್ತಕ್ಕಿಂತ ಹೆಚ್ಚಿನ ಒರೆಗಳು ಬೇರೆ ನುಡಿಯವು. ಹೆಚ್ಚಾಗಿ ಸಕ್ಕದ ಒರೆಗಳೆ ತುಂಬಿದ್ದಾರೆ. ಸಕ್ಕದ ಪದಗಳನ್ನು ಕನ್ನಡದಲ್ಲಿ ತರುವುದರಬಗ್ಗೆ, ಬಳಸುವುದರ ಬಗ್ಗೆ ಹಿಗ್ಗಿನಿಂದ ಹೇಳಿಕೊಳ್ಳುವ ಒಂದು ಗುಂಪೇ ಇದೆ. ಅವರು ಇದಕ್ಕೆ ಹೂಡುವ ಹಂಚಿಕೆ, ಕೊಡುವ ಹಂಚಿಕೆ ಏನಪ್ಪ ಅಂದರೆ ಬೇರೆ ಭಾಷೆಯ ಪದಗಳನ್ನು ನಾವು ಬಳಸುವುದರಿಂದ ನಮ್ಮ ನುಡಿ ಬೆಳೆಯುತ್ತೆ. ನಮ್ಮ ನುಡಿಯ ಸಿರಿ ಬೆಳೆಯುತ್ತೆ, ನಮ್ಮ ನುಡಿಯ ಸೊಗಸು ಬೆಳೆಯುತ್ತದೆ ಎಂದು. ಎಲ್ಲಿಯವರೆಗೆ ಬೇರೆ ನುಡಿಗಳ ಒರೆಗಳನ್ನು ಎರವಲು ಪಡೆಯುವುದು? ಎರವಲು ಪಡೆಯಲು ನಮ್ಮಲ್ಲಿ ದಿನಬಳೆಕೆಯ ದಿನಿಸು ಗುರಿತಿಸಲು, ನಮ್ಮ ಸುತ್ತಲಿರುವ ನಿಸರ್ಗವನ್ನು ಗುರುತಿಸಲು, ಪ್ರಾಣಿ, ಹಕ್ಕಿ, ಪಿಕ್ಕಿ, ನೀರು, ನಿಡಿ, ಕಳ್ಳು ಬಳ್ಳಿಗಳನ್ನು, ಕೆಲಸವನ್ನು ಗುರುತಿಸಲು ಕನ್ನಡದಲ್ಲಿ ಒರೆಗಳಿಲ್ಲವೇ? ಒರೆಸಿರಿ ನಮ್ಮಲ್ಲಿ ಇಲ್ಲವೇ? ನಾವು ತೆಗೆದುಕೊಳ್ಳುತ್ತುರುವ ಒರೆಗಳು ನಮ್ಮಲ್ಲಿ ಇಲ್ಲವೇ? ಯಾವುದಕ್ಕಾಗಿ ನಾವು ಈ ಒರೆಗಳನ್ನು ಎರವಲು ತೆಗೆದುಕೊಳ್ಳಬೇಕು? ತೆಗೆದುಕೊಂಡರೂ ಎಷ್ಟು? ಅದಕ್ಕೆ ಮೇರೆ ಬೇಡವೇ? ಎಲ್ಲೆ ಬೇಡವೇ?
ಕುವೆಂಪುರವರ ಒಂದು ಹಾಡನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಇಂತಹ ಸಕ್ಕದ ಬಲೆಯಲ್ಲಿ ಸಿಲುಕಿದ ಕನ್ನಡ ಕಬ್ಬಿಗರ ಬಳಗದಲ್ಲಿ ಬಹಳ ಜನ ಸಿಗುತ್ತಾರೆ. ಇಲ್ಲಿ ಯಾರನ್ನೂ ಹೀಯಾಳಿಸುವುದಕ್ಕಾಗಿಯಾದರು, ಯಾರನ್ನಾದರು ಕೀಳಾಗಿ ಕಾಣುವುದಕ್ಕಾಗಿ, ಯಾರನ್ನಾದರು ಅಲ್ಲಗೆಳೆಯಲಾಗಲಿ ಈ ಹಾಡನ್ನು ಮಾದರಿಯಾಗಿ ತೆಗೆದುಕೊಂಡಿಲ್ಲ. ನಮ್ಮ ನೊರೆಹಾಲಿನಂತ ಚೆಲುಗನ್ನಡ ತಿಳಿದೋ ತಿಳಿಯದೆಯೋ ಸಕ್ಕ, ಇಂಬ್ಲೀಚ್ನ ಹುಳಿ ಸೇರಿ ಹೇಗೆ ಒಡಕಲು ಹಾಲಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಇದನ್ನು ಇಲ್ಲಿ ಹೆಸರಿಸಿದ್ದೇನೆ.
ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!
ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!
ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!
ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!
ಬಹಳ ದಿನಗಳಿಂದ ಈ ಹಾಡನ್ನು ಕೇಳಿ ನಲಿದಿದ್ದೇನೆ. ಆದರೆ ಯಾವ ಸಾಲುಗಳು, ಪದಗಳು ನನಗೆ ತಿಳಿಯುತ್ತಿರಲಿಲ್ಲ, ಅರಿವಾಗುತ್ತಿರಲಿಲ್ಲ. ಅಲ್ಲೊಂದು ಇಲ್ಲೋಂದು ಒರೆ ಬಿಟ್ಟು. ನನಗೆ ಕನ್ನಡ ಗೊತ್ತಿರುವುದೇ ಇಷ್ಟೇನೋ ಅಂದು ಕೊಂಡುಬಿಟ್ಟಿದ್ದೆ. ನನ್ನಲ್ಲೇ ಕೀಳರಿಮೆ ಬೆಳೆದು ಮುತ್ತಿಕೊಂಡಿತ್ತು. ತುಂಬಾ ಮಂದಿಗಳಲ್ಲಿ ತಿರುಳೇನೆಂದು ಕೇಳಿದರು ಸರಿಯಾಗಿ ಯಾರಿಗೂ ಗೊತ್ತಿರಲಿಲ್ಲ. ಯಾರನ್ನು ಕೇಳಿದರೂ ಕುವೆಂಪು ಬರೆದಿರುವುದು, ತುಂಬಾ ಎತ್ತರದ ಕನ್ನಡದಲ್ಲಿದೆ ಅಂತ ಜಾರಿಕೆಯ ಮಾತು ಹೇಳಿಬಿಡುತಿದ್ದರು. ಒಂದು ದಿನ ನಾನೆ ಒರೆಗಂಟು ಹಿಡಿದು ಕೂತೆ. ವೆಂಕಟ ಸುಬ್ಬಯ್ಯನವರ ಒರೆಗಂಟಿನಲ್ಲಿ ಜಾಲಾಡಿದೆ, ಕಸ್ತೂರಿ ಕನ್ನಡದಲ್ಲಿ ತಡಕಾಡಿದೆ, ಶಾಬದಿಮಠದ ಹೊತ್ತಿಗೆ ನೋಡಿದೆ, ಗುರುನಾಥಜೋಶಿಯವರ ಒರೆಗಂಟಿನಲ್ಲೂ ಹುಡುಕಾಡಿದೆ. ಅಷ್ಟೂ ಕನ್ನಡ ಒರೆಗಂಟಲ್ಲಿ ಎಷ್ಟೊಂದು ಪದಗಳೇ ಸಿಗುತ್ತಿರಲಿಲ್ಲ. ಸಿಕ್ಕರೂ ಯಾವುದು ಒರೆಯೂ ಕನ್ನಡದ್ದಲ್ಲ. ತದಬಳಿಕ ಒಂದು ದಿನ ಗೊತ್ತಾಯಿತು. ಈ ಹಾಡಲ್ಲಿ ಇರುವುದು ಕನ್ನಡ ನುಡಿಗಳಲ್ಲ ಬರಿ ಸಂಸ್ಕೃತ ಒರೆಗಳು. ಹುಡುಕಿ ನೋಡಿದಾಗ ನೂರಕ್ಕೆ ತೊಂಬತ್ತು ಪದಗಳು ಸಂಸ್ಕೃತ ಒರೆಗಳೇ. ಹೀಗೆ ಸಕ್ಕದ ಒರೆಗಳಿಂದ ಬರೆದ ಹಾಡು ಹೇಗೆ ತಿಳಿಯಬೇಕು ನಮ್ಮಂತ ಕನ್ನಡದ ಹಳ್ಳಿ ಹೈದರಿಗೆ?? ಮೇಲಿನ ಕಬ್ಬದಲ್ಲಿರುವುದು ನಲವತ್ತೆಂಟು ಸಕ್ಕದ ಒರೆಗಳು. ಮಿಕ್ಕಿದ್ದು ಎಶ್ಟು? ಅಯ್ಯೋ ನನ್ನ ಕಸ್ತೂರಿ ಕನ್ನಡವೇ..ಅಯ್ಯೋ ಕನ್ನಡದ ರಸಕವಿಯೇ ಯಾಕಪ್ಪ ಹೀಗೆ ಮಾಡಿದೆ ಅನ್ನಿಸಿಬಿಟ್ಟಿತು. ಕುವೆಂಪುರವರನ್ನು ರಸಕವಿ ಎಂದು ಒಪ್ಪಿಕೊಳ್ಳುವೆ ಇದಕ್ಕೆ ಎರಡು ಮಾತಿಲ್ಲ. ಆದರೆ ಕನ್ನಡದ ಕವಿ ಎಂದು ನಾ ಹೇಗೆ ಒಪ್ಪಿಕೊಳ್ಳಲಿ? ಅವತ್ತಿನಿಂದ ನನಗೆ ಕುವೆಂಪು ಮೇಲೆ ಇದ್ದ ಕೈವಾರ (ಅಭಿಮಾನ) ಕಿಂಚಿತ್ತಾದರು ಕಡಿಮೆ ಆಗದಿರಲಿಲ್ಲ.
ಕನ್ನಡ ನಾಡಗೀತೆ "ಜಯಭಾರತ ಜನನಿಯ ತನು ಜಾತೆ" ಇದು ಕೂಡ ಸಕ್ಕಮಯ. ನಮ್ಮ ನಾಡಗೀತೆಯನ್ನೊಮ್ಮೆ ಒಳಹೊಕ್ಕು ಬಿಡಿಸಿ ಬಿಡಿಸಿ ನೋಡಿ ಎಷ್ಟು ಕನ್ನಡ ನುಡಿಗಳು ಆ ಹಾಡಿನಲ್ಲಿ ಬಳಕೆಯಾಗಿವೆ? ಬರಿ ಹೋಳು. ನೇರವಾಗಿ ಕನ್ನಡದ ಬದಲು ಸಂಸ್ಕೃತನೆ ಓದಬಹುದಲ್ಲ!!
ಇವತ್ತು ಇಂತಹ ಸಂಸ್ಕೃತ ಪ್ರೇಮಿಗಳು ನೀಡುವ ಹಂಚಿಕೆಯಂತೆ ನಮ್ಮ ಕನ್ನಡ ನುಡಿ ಬೆಳೆಯುವುದಕ್ಕೆ ಹೊಂದಿಕೊಳ್ಳುವ ಕೆಲವು ನುಡಿ ಬಳಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇವರ ಹಂಚಿಕೆ ನಾವು ಒಪ್ಪೋಣ. ನಮ್ಮದಲ್ಲದಿದ್ದರೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಎದೆಗಾರಿಕೆ ತೋರೋಣ. ಆದರೆ ಅದೇ ನಮ್ಮ, ನಮ್ಮತನಕ್ಕೆ ಉರುಳಾದರೆ ಇನ್ನು ನಮ್ಮದು ಅನ್ನುವುದು ಏನು ಉಳಿಯುತ್ತೆ? ನಮ್ಮದು ನಮ್ಮತನ ಅನ್ನುವುದನ್ನು ನಾವು ಜಗತ್ತಿಗೆ ಹೇಗೆ ತೋರಿಸುವುದು? ನಮ್ಮತನ ತೋರಲು ನಾವು ತೊಡುವ ಬಟ್ಟೆಬರೆ, ನಮ್ಮ ನಡೆ, ನಮ್ಮ ಬದುಕು, ನಾವಾಡುವ ನುಡಿ, ನಾವು ಉಣ್ಣುವ ಕೂಳು ನಮ್ಮವಾಗಿರಬೇಕು ತಾನೆ. ನಮ್ಮತನ ತೋರಲು ಎಲ್ಲದಕ್ಕಿಂತ ಮೇಲೆ ನಿಲ್ಲುವುದು ನಾವಾಡುವ ನುಡಿ.
ಆ ನಮ್ಮ ನುಡಿಯ ಇಂದಿನ ಪಾಡು ಕೇಳಿದಿರಿ. ಇಂದು ನಮ್ಮ ಕನ್ನಡ ಅಚ್ಚ ಕನ್ನಡ ಕಂಪುಸೂಸುವ ’ಕಸ್ತೂರಿ ಕನ್ನಡ’ ವಾಗಿ ಉಳಿದಿಲ್ಲ. ಸಿಕ್ಕಸಿಕ್ಕ ಭಾಷೆಯನ್ನು ಅರಗಿಸಿಕೊಂಡು ಮುಸುರೆಯಾಗಿ ಗಬ್ಬು, ಸಿಂಡು ಸಿಂಡುನಾತವಾಗಿ ಹೋಗಿದೆ. ಸಕ್ಕದ ’ಅನ್ನ’ ಎಂಬ ಹೊರೆಗೆ ಸಿಕ್ಕ ಕನ್ನಡದ ’ಕೂಳು’ ಇನ್ನಲ್ಲವಾಗುತ್ತಿದೆ. ಪಡಸಾಲೆ ಮರೆಯಾಗಿ ಡೈನಿಂಗ್ ಹಾಲ್ ಮನೆಯಲ್ಲಿ ನುಸಿಳಿದೆ. ಊಟಕ್ಕೆ ಬದಲಾಗಿ ಮೀಲ್ಸ್, ಲಂಚ್, ದಿನ್ನರ್ ಸಪ್ಪರ್, ಹೈಟೆಕ್ ಐ.ಟಿ ಕನ್ನಡಿಗರ ಬಾಯಲ್ಲಿ, ಅಕ್ಷರ ತಿಳಿದವರಲ್ಲಿ ಉಲಿಯುತ್ತಿವೆ.
ಬೆಂಗಳೂರಿನಲ್ಲಿನ ಕನ್ನಡದ ಇನ್ನೊಂಡು ಮುಖ ನೋಡಿ. ನೀವು ಯಾವುದೇ ದಿನಿಸಿ ಅಂಗಡಿ, ಹಣ್ಣಿನ ಅಂಗಡಿ, ತಿಂಡಿ ಅಂಗಡಿಯ ಮೇಲೆ ಬರೆದಿರುವ ಹೆಸರುಗಳನ್ನು ನೋಡಿ. ನಿಮಗೆ ಸಿಗುವುದು ನೂರಕ್ಕೆ ಎಂಬತ್ತರಷ್ಟು ಇಂಬ್ಲೀಚ್ ನುಡಿಗಳು. ಉದಾಹರಣೆಗೆ ಕೆಲವನ್ನು ಇಲ್ಲಿ ಬರೆದಿರುವೆ " ಪಾಟ್ಕರ್ ಜ್ಯೂಸ್ ಅಂಡ್ ಚಾಟ್ಸ್" ,"ಬಸವೇಶ್ವರ ಕಾಂಡಿಮೆಂಟ್ಸ್ ಅಂಡ್ ಜನರಲ್ ಸ್ಟೋರ್ಸ್" "ಮಂಜುನಾಥ ಫಾಸ್ಟ್ ಫುಡ್ಸ್" " ಗುರುಶ್ರೀ ಹೋಂ ಫುಡ್ಸ್" ಅಕ್ಶರ ಮಾತ್ರ ಕನ್ನಡದ್ದು ಒರೆ ಇನ್ಯಾರದ್ದೊ. ಯಾಕೆ ಈ ಗುಲಾಮಿತನ.
ಯಾಕೆ ಈ ಹೀನತನ ಈ ಕನ್ನಡಿಗರಿಗೆ? ಇನ್ನು ದಾರಿಯ ಹೆಸರು, ಬೀದಿಯ ಹೆಸರು, ಓಣಿಯ ಹೆಸರು, ಎಲ್ಲವು ಇಂಬ್ಲೀಚ್ ಅಥವ ಸಂಸ್ಕೃತ ನುಡಿಗಳಿಂದ ಮೇಳೈಸುತ್ತಿವೆ. "ಮೆಜೆಸ್ಟಿಕ್" "ಎಮ್. ಜೀ. ರೋಡ್" "ಬ್ರಿಗೇಡ್ ರೋಡ್" " ಏರ್ ಪೋರ್ಟ ರೋಡ್" " ಹಡ್ಸನ್ ಸರ್ಕಲ್" " ಲಾಲ್ ಬಾಗ್" " ಕಬ್ಬನ್ ಪಾರ್ಕ" ನೂರಾರು ಇಂತಹ ಉದಾಹರಣೆಗೆ ಕೊಡಬಹುದು. ಕನ್ನಡ ಸೊಡರು ತುಂಬಿರುವ ಹೆಸರು "ಬಸವನಗುಡಿ" ಬುಲ್ ಟೆಂಪಲ್ಲಾಗಿದೆ. ಇಂದು ಇನ್ನೂ ಮಹಾತ್ಮಗಾಂಧಿ ಬೀದಿಗೆ ಹೋದರಂತು ನಾವಿರುವುದು ಕನ್ನಾಡಿನ ಬೆಂಗಳೂರಿನಲ್ಲೋ ಅಥವ ಅಮೇರಿಕದ ಬೆಂಗಳೂರಿನಲ್ಲೋ ಅನ್ನಿಸುವುದು.
ಶೌಚಾಲಯ, ಮಹಿಳೆ, ಪುರುಷ, ನಗರ, ಸದನ, ನಿವಾಸ, ಸೌದ, ಭವನ ಬರಿ ಸಕ್ಕದ ಒರೆಯ ಹೊರೆ. ಎಷ್ಟು ನಾಚಿಕೆಗೇಡಲ್ಲವೆ ಕನ್ನಡದ್ದು. ಶೌಚಾಲಯಕ್ಕೆ ಕಕ್ಕಸುಮನೆ, ದೊಡ್ಡಿ ಅಂತ ಬರೆಯಲು ನಮಗೆಲ್ಲ ಯಾಕಿಷ್ಟು ಕೀಳರಿಮೆ? ಪುರುಷ, ಮಹಿಳೆಗೆ ಗಂಡಸರು, ಹೆಂಗಸರು ಅಂತ ಹೇಳುವುದಕ್ಕೆ ಏನು ದಾಡಿ? ಸದನ, ನಿವಾಸಕ್ಕೆ ಬದಲು ಮನೆ, ಉಪ್ಪರಿಗಿ, ಮಾಳಿಗೆ ಅನ್ನುವುದಕ್ಕೆ ನಮ್ಮಲ್ಲರಿಗೇಕೆ ನಾಚಿಕೆ? ಇನ್ನು ನಮ್ಮ ಸರಕಾರದ ಪಾಲಿಕೆಗಳಂತು ಬಿಡಿ ಎಲ್ಲಾ ಸಂಸ್ಕೃತಮಯ. ಪಾಲಿಗೆ, ಪುರಸಭೆ, ನಗರಸಭೆ..ಇನ್ನೇನೇನೋ. ಇದಕ್ಕೆಲ್ಲ ಕಾರಣವೇನು ’ಸಕ್ಕದ ಹಿರಿದು, ಕನ್ನಡ ಕೀಳು’ ಎಂಬ ತಪ್ಪು ತಿಳುವಳಿಕೆ ಇಲ್ಲ ಸಕ್ಕದ ಒರೆ ಬಳಸುವುದರಿಂದ ಕನ್ನಡದ ಸೊಬಗು ಹೆಚ್ಚಾಗುದೆಂಬ ತಪ್ಪು ನಂಬಿಕೆ. ಇಲ್ಲವೆ ಕನ್ನಡ ಬಳಸಲು ಕೀಳರಿಮೆ. ಇಲ್ಲವೆ ನನ್ನನ್ನೇ ಮಾದರಿಯಾಗಿ ತೆಗೆದುಕೊಂಡರೆ ಕನ್ನಡದಲ್ಲಿ ಒರೆಗಳೇ ಇಲ್ಲವೆನ್ನುವ ಅರೆತಿಳುವಳಿಕೆ. ಇನ್ನು ಕೆಲವರು ಇಂತಹ ಕನ್ನಡ ಒರೆಗಳು ಯಾರಿಗೂ ಗೊತ್ತಿಲ್ಲ, ನಾವು ಬರೆದರೆ, ಬಳಸಿದರೆ ಬೇರೆಯವರಿಗೆ ತಿಳಿಯುವುದಿಲ್ಲ ಅನ್ನುವ ಹಂಚಿಕೆ ಮುಂದಿಡುತ್ತಾರೆ. ಅಯ್ಯೋ ದೇವರೆ ಬಳಸದೇ, ಬರೆಯದೇ ಹೇಗೆ ತಿಳಿಯಬೇಕು? ಬಳಕೆಗೆ ತಂದರೆ ತಾನೆ ತಿಳಿಯುವುದು! ಇದು ಒದ್ತರ ಸಕ್ಕ, ಇಂಬ್ಲೀಚ್ ಮೇಲಿನ ಒಲವಿರುವವರ ಸೋಗಲಾಡಿತನ ಎನ್ನುವುದ ದಿಟ. ಎಗ್ಗಿಲ್ಲದೆ ನುಗ್ಗಿ ಅಡರಿರುವ ಬೇರೆ ನುಡಿಯ ಪದಗಳು ನಮ್ಮ ನುಡಿಯ ಬೆಳವಣಿಗೆ ಕುಂಟಿತ ಗೊಳಿಸದೇ ಇರಲಾರವು. ಇನ್ನೂ ಅಸಯ್ಯ ಪಡುವಂತ ಉದಾಹರಣೆ ಬೇಕೆಂದರೆ ಕನ್ನಡ ನಮ್ಮ ಉಸಿರು ಎಂದೆನ್ನುವಂತೆ ತೊರಿಸಿಕೊಳ್ಳುವ "ಕನ್ನಡ ರಕ್ಷಣಾ ವೇದಿಕೆ" ಈ ಗುಂಪಿನ ಹೆಸರಲ್ಲಿ ಇರುವ ಮೂರು ಒರೆಗಳಲ್ಲಿ ಎರಡು ಒರೆ ಅಪ್ಪಟ ಸಕ್ಕ. ಇವರೇನು ಕನ್ನಡ ಉಳಿಸುವರೊ ಕನ್ನಡ ಮಾತೆಗೇ ತಿಳಿದಿರಬೇಕು. "ಕನ್ನಡ ರಕ್ಷಣಾ ವೇದಿಕೆ"ಗೆ ಬದಲಾಗಿ "ಕನ್ನಡ ಕಾವಲು ಬಳಗ" ಯಾಕಾಗಬಾರದಾಗಿತ್ತು? "ಕನ್ನಡ ಕಾವಲು ಒಡ್ಡಣ" ಎಂದು ಬಳಸಬಹುದಿತ್ತಲ್ಲವೆ? "ಕನ್ನಡ ಕಾಪು ಪಡೆ" ಎಂದೇಕೆ ಆಗಲಿಲ್ಲ?
ನಮ್ಮತನ ಹಾಳಗದಂತೆ ಬೇಕೆನಿಸುವಷ್ಟು ಸಂಸ್ಕೃತ ಹಾಗು ಇತರ ನುಡಿಯ ಪದ ಬಳಸುವುದು ಸರಿ. ಆದರೆ ಅದನ್ನೇ ಹಮ್ಮೆ ಅಂದುಕೊಳ್ಳುವುದು, ಅದನ್ನೇ ಹಿರಿತನ ಅಂದುಕೊಳ್ಳುವುದು, ಸಂಸ್ಕೃತ ಬಳಸದವರನ್ನು ಕೀಳಾಗಿ ಕಾಣುವುದು ಕನ್ನಡಿಗನಾಗಿ ಅಸಯ್ಯವಲ್ಲವೆ? ಇದು ಈಗೆ ಮುಂದುವರಿದರೆ ಇನ್ನು ನಮ್ಮ ಮುಂದಿನ ಪೀಳಿಗೆಗೆ ನಮ್ಮತನ, ಕನ್ನಡತನ ಅನ್ನುವುದನ್ನು ಈಗಿತ್ತು ಅಂತ ದಂತ ಕತೆಗಳನ್ನು ಹೇಳಬೇಕಾಗುತ್ತದೆ. ಈಗಾದರೆ ಮುಂದೆ ನಮ್ಮ ಕನ್ನಡ ಬೆಳೆಯುವುದೆಂತು? ಇಂದು ಕನ್ನಡಿಗನಾದವನು ಯೋಚಿಸಬೇಕಲ್ಲವೆ? ಒಂದು ಕಡೆ ಉದಾರಿಕರಣ, ವೈಶವಿಕರಣ, ಕೆಲಸ, ಶಿಕ್ಷಣದ ಹೆಸರಿನಲ್ಲಿ ಅಬ್ಬರಿಸಿ ಅಡರಿ ಮುತ್ತಿಕೊಳ್ಳುತ್ತಿರುವ ಇಂಬ್ಲೀಚ್. ಐಟಿ, ಬೀಟಿ, ಬಿಪಿಓ ಮಾಯಾಬಲೆಯಲ್ಲಿ ಸಿಕ್ಕಿ ಅಮೇರಿಕ, ಯುರೋಪಿನವರಂತೆ ಮಾತನಾಡುತ್ತ, ಅವರಂತೆ ಆವ ಭಾವ ಮಾಡುತ್ತ, ಅವರಂತೆ ಬಟ್ಟೆ ಬರೆ ತೊಡುತ್ತ, ಅದನ್ನೇ ಮಹಾಸಾಧನೆ ಎಂಬಂತೆ ಬೀಗುವ ಸೋಗಲಾಡಿ ನಮ್ಮವರಿಂದಲೇ ಕುಲಗೆಟ್ಟಿರುವ ಕನ್ನಡವನ್ನು ತಿಳಿಗೊಳಿಸಬೇಕು. ಪುರಾತನದು, ದೇವಭಾಷೆ, ಸನಾತನ ಭಾಷೆ ಎಂಬ ಪಟ್ಟಕಟ್ಟಿಕೊಂಡು ಮೆರೆದಾಡುತ ಸೋಗಲಾಡಿ ಸಂಸ್ಕ್ರತ, ಕನ್ನಡವನ್ನು ನುಂಗಿಹಾಕದೇ ಇರುವುದಿಲ್ಲ. ನಮ್ಮನ್ನು ನಾವು ಉಳಿಸಿಕೊಳ್ಳ ಬೇಕು, ನಮ್ಮತನ ಉಳಿಸಿಕೊಳ್ಳ ಬೇಕು. ಅದು ಇದು ಅವರದು ಇವರದು ಎಲ್ಲದ್ದನ್ನೂ ಕಲಸಿದ ಮುಸುರೆಯಾಗಿ ಅಲ್ಲ. ಕಸ್ತೂರಿ ಕನ್ನಡವಾಗಿ. ನಮ್ಮ ಕನ್ನಡ ಸಿರಿವಂತ ನುಡಿ. ಬದುಕಿಗೆ ಬೇಕಾದ ಎಲ್ಲಾ ಕೆಲಸ, ಎಲ್ಲಾ ದಿನಿಸಿಗಳನ್ನು, ಎಲ್ಲಾ ನಂಟನ್ನು ತೋರಿಸಲು ಸಾಕಾಗುವಶ್ಟು ಒರೆಸಿರಿ ನಮ್ಮಲ್ಲಿದೆ. ಹೊಸದಾಗಿ ಬಂದ ವಿಗ್ನಾನದ, ಯಂತ್ರಗಳ ಮುಂತಾದದವುಗಳ ಹೆಸರುಗಳನ್ನು ನಾವೇ ಕನ್ನಡದಲ್ಲಿ ಹುಟ್ಟುಹಾಕೋಣ. ಕನ್ನಡದಲ್ಲಿ ಸರಿಯಾದ ನುಡಿ ಹೊಂದಿಸಲಾಗದಿದ್ದರೆ ಬೇರು ನುಡಿಲ್ಲಿರುವ ಒರೆಯನ್ನೇ ಆ ನುಡಿಯಿಂದ ಎರವಲು ಪಡೆಯೋಣ. ಕನ್ನಡಕ್ಕೆ ಹೊಂದಿಕೊಳ್ಳದ ಪದವನ್ನು ನಮಗೆ ಹೊಂದಿಕೊಳ್ಳುವಂತೆ ತದ್ಬವವಾಗಿ ಬದಲಿಸಿ ಬಳಸೋಣ. ಆದರೆ ಕುರುಡರಂತೆ ಎಲ್ಲದ್ದನ್ನೂ ಒಪ್ಪಿಕೊಂಡರೆ ಎರಡುಸಾವಿರೇಡಿನ (ವರುಶದ) ಇತಿಹಾಸವಿರುವ ನಮ್ಮ ಹೆಮ್ಮೆಯ ಸಿರಿಗನ್ನಡದ ಬದುಕು ಮಣ್ಣುಗೂಡೀತು. "ಕಸ್ತೂರಿ ಕನ್ನಡ"ದ ಸವಿಗಂಪು ಕೊಳೆತ ಮುಸುರೆಯ ನಾತವಾಗಲು ನಾವು ಕಾರಣರಾಗದಂತ ಬದುಕನ್ನು ನಾವು ನಡೆಸಬೇಕು. ಆ ನಿಟ್ಟಿನಲ್ಲಿ ನಮ್ಮ ತಿಳುವಳಿಕೆಗಳನ್ನ ಹರಿದು ಬಿಡೋಣ.
ನನ್ನ ಈ ಬರಹದಲ್ಲಿ ಹಲವು ಸಕ್ಕದ ಒರೆ ಬಳಸಿರುವೆ. ಹಾಗೆ ಬಳಸಲು ನನ್ನ ಅರೆ ತಿಳುವಳಿಕೆ ಎಂಬುದು ದಿಟ. ಇಲ್ಲವೆ ಹುಟ್ಟಿದಾಗಿನಿಂದ ಈಬಗೆಯ ಕಲಬೆರೆಕೆಯದನ್ನುನ್ನು ಕಲಿತಿದ್ದರ ಬೆಳೆ ಇದು. ನನ್ನ ಮುಂದಿನ ಗುರಿ ಹೆಚ್ಚು ಹೆಚ್ಚು ಕನ್ನಡದ ಒರೆ ಬಳಸುವುದು. ಕನ್ನಡದ ಪದಗಳನ್ನು ಹುಡುಕಿ ಬಳಕೆಗೆ ತರುವುದು. ನನ್ನ ಬರಹದಲ್ಲಿ ಅವುಗಳನ್ನು ಬಳಸುವುದು. ನೂರಕ್ಕೆ ನೂರು ಬೇರೆ ನುಡಿಯ ಪದ ಬಳಸ ಬಾರದೆನ್ನುವುದು ಪೆದ್ದುತನ ಎನ್ನುವುದು ತಿಳಿದು ಜೊತೆಗೆ ಎಲ್ಲೆ ಮೀರಿದ ಬಳಕೆ ನಮ್ಮತನವನ್ನು ಮಣ್ಣುಗೂಡಿಸುತ್ತದೆ ಎನ್ನುವ ಎಚ್ಚರಿಕೆಯಲ್ಲಿ ಇರಬೇಕು. ಬೇರೆಯವರಿಗೆ ತಿಳಿಯುವುದಿಲ್ಲವೆಂದು ಇಂದು ನಾವು ಇದ್ದ ನಮ್ಮದೇ ನುಡಿಯ ಒರೆಗಳನ್ನು ಬಳಸದೇ ಇನ್ನೋಂದು ನುಡಿಯ ಒರೆ ಬಳಸಿದರೆ ನನ್ನ ಮಟ್ಟಿಗೆ ಅದು ಕನ್ನಡಕ್ಕೆ ಬಂದ ಕುತ್ತು. ಬೇರೆ ನುಡಿಯ ಒರೆಯನ್ನು ಬಳಸುವುದರಿಂದ ನಮ್ಮ ನುಡಿಯ, ನಮ್ಮತನದ ಬೆಳವಣಿಗೆ ಕುಂಟಿತವಾಗುತ್ತದೆ. ನಮ್ಮತನ ಮಣ್ಣುಮುಕ್ಕುತ್ತದೆ. ನಮ್ಮ ಕಸ್ತೂರಿ ಕನ್ನಡದ ಕಂಪು ಕಸ್ತೂರಿಯದಾಗಬೇಕಾದರೆ ನಾವು ನಮ್ಮದನ್ನು ಬೆಳಸ ಬೇಕು ಬಳಸ ಬೇಕು. ಇವತ್ತು ಕನ್ನಡನುಡಿ ಕನ್ನಡವಾಗಿ ಉಳಿದಿಲ್ಲ. ಎಲ್ಲೆಯಿಲ್ಲದೆ ಸಕ್ಕ, ಇಂಬ್ಲೀಚ್ಗಳ ಬಳಕೆಯಿಂದ ಕಲಬೆರೆಕೆಯಾಗಿದೆ. ಕನ್ನಡದ ಸೊಗಸು ಕನ್ನಡದಲ್ಲಿ ಇಂದು ಉಳಿದಿಲ್ಲ. ಕನ್ನಡದ ಬದುಕು ಅಮೇರಿಕ, ಯುರೋಪುಗಳ ಕುರುಡು ಅನುಕರಣೆಯಲ್ಲಿ ಸಿಲುಕಿ ಸಾಯುತ್ತಿದೆ. ಇವತ್ತು ಕನ್ನಡಕ್ಕೆ ಶಾಸ್ತ್ರಿಯ ಸ್ತಾನ ಮಾನ ಸಿಕ್ಕಿದೆ ಎಂದು ಎದೆಯುಬ್ಬಿಸಿ ಹೇಳುವಂತಿಲ್ಲ. ಶಾಸ್ತ್ರೀಯ ಸ್ತಾನ ಮಾನ ಸಿಕ್ಕೊಡನೆ ಕನ್ನಡ ಬೆಳೆದು ಬಿಡುವುದಿಲ್ಲ. ಆ ಸ್ತಾನ ಸಿಕ್ಕಿರುವುದರಿಂದ ಕನ್ನಡಕ್ಕೇನು ಒಳಿತಿಲ್ಲ. ಕೆಲವು ಪುಂಡ ಪೋಕರಿಗಳು ತಿಂದು, ಕುಡಿದು, ಕುಪ್ಪಳಿಸಿ ಮೆರೆದಾಡಲು ಅನುವಾಗಿದೆ. ಜೊತೆಗೆ ಕನ್ನಡತನ ಸಾಯುತ್ತದೆ ಅಶ್ಟೆ. ಇಂದು ತನ್ನದೇ ಒರೆಗಳನ್ನು ಬಳಸುವುದರಲ್ಲಿ ಕನ್ನಡ, ಕನ್ನಡಿಗರು ಸೋತಿದ್ದಾರೆ. ಕನ್ನಡವನ್ನು ಬದುಕಲ್ಲಿ ಬಳಸಲು ಕನ್ನಡಿಗರು ಮರೆತಿದ್ದಾರೆ. ಇಂದು ನಾವೆಲ್ಲ ಸೇರಿ ಕನ್ನಡವನ್ನು ಬೆಳಸಿ ಬಳಸ ಬೇಕಾಗಿದೆ. ಆಗ ನಮ್ಮ ಕನ್ನಡ ಕಸ್ತೂರಿ ಕನ್ನಡವಾದೀತು. ಬನ್ನಿ ಎಲ್ಲರು ಕೂಡಿ ಕೊಳಕಾಗಿರುವ ಕನ್ನಡವನ್ನು ತಿಳಿಯಾಗಿಸುವುದೇಗೆಂದು ಇಲ್ಲಿ ಮಾತನಾಡೋಣ. ನಮ್ಮದೇ ನಾಡನ್ನು ಕಟ್ಟಲು ಅಲ್ಲಿ ನಮ್ಮತನವನ್ನು ಬೆಳಸುವುದು ಹೇಗೆಂದು ಇಲ್ಲಿ ವಿಚಾರ ಮಾಡೋಣ ಬನ್ನಿ ಕನ್ನಾಡಿನ ಗೆಳೆಯರೆ.
ನನ್ನಿ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"
kadakolla@gmail.com
ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?
ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆಗಳುತೇಲುತಿವೆ
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ
ಎದೆ ಎದೆಗಳ ನಡುವೆ ಇದ್ದ
ಸೇತುವೆಗಳು ಮುರಿದಿವೆ
ಭಯ-ಸಂಶಯ- ತಲ್ಲಣಗಳ
ಕಂದರಗಳು ತೆರೆದಿವೆ
ಮುಕ ಮುಕವೂ ಮಕವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಗೋಡೆ
ಹಾಡಿದವರು: ಅಶ್ವತ್
ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರಿಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಉಸಿರೇಳಲಿ ನವುರಾಗಿ!
ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ,
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿ ಚೆಲು ಬೆರಳಾಗಿ!
ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೋಗರಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ
ಎಲ್ಲೋ ದೂರದಿ ಚಿಕ್ಕಿ ಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೆ,
ಬನ್ನಿ ನನ್ನೆದೆಯ ಲಾಸ್ಯವನಾಡಿರಿ
ಚಿಮ್ಮಲಿ ನಲಿವಿನ ಬುಗ್ಗೆಗಳು
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಕಾರ್ತೀಕ
ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಯ ತಲಾತಲದಿ
ನಂದುತಿಹ ಕಿಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ನೀಲಿಯಲ್ಲಿ ಮಯ್ಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮವ್ನದಲ್ಲಿ
ಅಲೆಯಂತಿಹ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ಜಲವಿಲ್ಲದ ನೆಲದಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲಿ
ಸೊರಗಿ ಹೋದ ನುಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದರಿದ
ಹೊಂಗನಿಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ
ಹಾಡಿದವರು: ಸಿ. ಅಶ್ವತ್
ಬಣ, ಮತ, ದರ್ಮದ ಗುಂಗಿನಲ್ಲಿ ಹೊತ್ತಿ ಉರಿಯುವ ಇಂದಿನ ಬದುಕಿನ ಜಂಜಾಟಗಳಿಗೆ ಬೆಟ್ಟು ಮಾಡಿ ತೋರಿಸುವಂತ ಕಬ್ಬ.
ಯಾವ ಹಾಡು ಹಾಡಲಿ
ಯಾವ ಹಾಡಿನಿಂದ ನಿನಗೆ
ನೆಮ್ಮದಿಯನು ನೀಡಲಿ
ಸುತ್ತ ಮುತ್ತ ಮನೆಮಠಗಳು
ಹೊತ್ತಿಕೊಂಡು ಉರಿಯುತಿರಲು
ಸೋತು ಮೂಕವಾದ ಬದುಕು
ನಿಟ್ಟಿಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ?
ಬರಿ ಮಾತುಗಳ ಜಾಲದಲ್ಲಿ
ಶೋಷಣೆಗಳ ಜಾಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ
ಯಾವ ಹಾಡು ಹಾಡಲಿ?
ಉರಿವ ಕಣ್ಣು ಚಿತೆಯಲ್ಲಿ
ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ
ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ?
ಬೆಳಕಿಲ್ಲದ ದಾರಿಯಲ್ಲಿ
ಪಾಳುಗುಡಿಯ ಸಾಲಿನಲ್ಲಿ
ಬಿರು ಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ?
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ
ಈ ಬರಹ ನನಗೆ ಹಾಗೆ ಈ-ಓಲೆಯಲ್ಲಿ ಸಿಕ್ಕಿತು
ಬರಹಗಾರ : ಎ.ಆರ್. ಮಣಿಕಾಂತ್ . ಈ ಬರಹ ನನ್ನನ್ನೆದೆಯನ್ನು ಆಳವಾಗಿ ನಾಟಿತು ಅದಕ್ಕೆ ನನ್ನ ಬ್ಲಾಗ್ನಲ್ಲಿ ಸೇರಿಸೋಣ ಅಂದುಕೊಂಡೆ. ಅದಕ್ಕೆ ಇಲ್ಲಿ ಸೇರಿಸಿದೆ. ಬರೆದವರ ಒಪ್ಪಿಗೆ ಕೇಳದೇ ಇಲ್ಲಿ ಹಾಕಿರುವೆ. ಕೇಳಲು ಎಲ್ಲಿರುವರೋ ನನಗೆ ತಿಳಿಯದು. ಅವರಲ್ಲೊಂದು ಕೋರಿಗೆ ಅವರ ಬರಹ ನಾನಿಲ್ಲಿ ಹಾಕಿರುವುದು ಹಿಡಿಸದಿದ್ದರೆ ಹೇಳಿ. ನಾನು ಇಲ್ಲಿಂದ ತೆಗೆದು ಹಾಕುವೆ. ಗೆಳೆಯರೆ/ಓದಗರೇ ತುಂಬಾ ಒಳ್ಳೆಯ ಬರಹ, ತಾಯ್ತನ ತಾಯಿಯ ಮುಚ್ಚಟೆಯ ಬಗ್ಗೆ ತೋರಿಸಿರುವ ಸೊಗಸಾದ ಬರಹ. ನೀವೂ ಓದಿ ನಲಿಯಿರಿ.



****ನಾನು ಆಗಷ್ಟೇ ಒಂದನೇ ತರಗತಿಗೆ ಸೇರಿದ್ದೆ. ಯಥಾಪ್ರಕಾರ ಮನೇಲಿ ಮಧಾಹ್ನದ ಬಡತನವಿತ್ತು. ಆದರೆ ಅದು ನಮಗೆ ಗೊತ್ತೇ ಆಗದಂತೆ ಅಮ್ಮ ಎಚ್ಚರ ವಹಿಸಿದ್ದಳು. ಬೆಳಗ್ಗೆ ಹೊತ್ತು ತಿಂಡಿ ತಿಂದು ನಮಗೆ ಅಭ್ಯಾಸವೇ ಇರಲಿಲ್ಲ. ಬೆಳಗ್ಗೆ ಬೆಳಗ್ಗೇನೇ ಅಮ್ಮ ಅಕ್ಕಿಯದೋ, ರಾಗೀದೋ ಗಂಜಿ ಮಾಡ್ತಿದ್ದಳು. ಅಪ್ಪ ಲಗುಬಗೆಯಿಂದ ಗಂಜಿ ಕುಡಿದು ಹೋದ ಮೇಲೆ ಉಳಿದಿದ್ದರಲ್ಲಿ ನಾನು ಅಮ್ಮ ಪಾಲು ಮಾಡ್ಕೋತಾ ಇದ್ವಿ. ತುಂಬಾ ಸಂದರ್ಭಗಳಲ್ಲಿ ಏನಾಗ್ತಾ ಇತ್ತು ಅಂದ್ರೆ, ಅಮ್ಮ ತಟ್ಟೆಗೆ ಗಂಜಿ ಹಾಕಿದ ತಕ್ಷಣ ನಾನು ಗಟಗಟನೆ ಕುಡಿದುಬಿಡ್ತಿದ್ದೆ. ಎರಡೇ ನಿಮಿಷದಲ್ಲಿ ನನ್ನ ತಟ್ಟೆ ಖಾಲಿಯಾದದ್ದು ಕಂಡು ಅಮ್ಮ, ಒಮ್ಮೆ ಮೆಲ್ಲನೆ ನಕ್ಕು ತನ್ನ ತಟ್ಟೇಲಿ ಇದ್ದುದನ್ನೂ ನನಗೇ ಕೊಡ್ತಿದ್ಲು.




ನನ್ನ ನೆಚ್ಚಿನ ಹಾಡು ಇದು. ಕೇಳಿದಂತೆಲ್ಲ ಕೇಳಬೇಕೆನಿಸುತ್ತದೆ. ನನ್ನ ಹಾಗು ನನ್ನ ಕೆಲಸಗಳನ್ನು ಯಾರಾದರು ಹುಚ್ಚುತನಕ್ಕೆ ಹೋಲಿಸಿದರೆ ಆಗ ನಾನವರ ಮುಂದೆ ಈ ಹಾಡನ್ನು ಹೇಳುತ್ತೇನೆ. ( ನನ್ನ ಒಲವಿನ ಗೆಳತಿ, ಅವಳ ಮೇಲಿನ ನನ್ನ ಒಲವನ್ನು ಬಿಸಿಲಗುದುರೆಗೆ ಓಲಿಸಿದಾಗ, ಅವಳು ನಾನು ನಿನಗೆ ಸಿಗುವುದಿಲ್ಲ..! ಯಾಕೆ ನನ್ನ ಬಗ್ಗೆ ಇಟೊಂದು ಕನಸು ಕಾಣ್ತಿಯ..? ಎಂದು ಕೇಳಿದಾಗಲೆಲ್ಲ ಅವಳಿಗೆ ನಾ ಹೇಳುವ ಹಾಡು ಇದು) ನನ್ನ ತಿಳುವಳಿಕೆಯನ್ನು ನೂರಾರು ದಿಕ್ಕಿಗೆ ಕೊಂಡೊಯ್ಯುವ ಹಾಡಿದು. ನೀವು ಕೇಳಿದರೆ ನಿಮಗೂ ಚಂದ, ಇಂಪು ಅನಿಸ ಬಹುದೇನೋ. ಆಗಲೇ ನೀವು ಕೇಳಿರಬಹುದು.....! ಆದರೂ ನಿಮ್ಮಲ್ಲಿ ಹಂಚಿಕೊಳ್ಳುವ ಹಂಬಲದಿಂದ ಇದನ್ನು ಇಲ್ಲಿ ಬರೆದಿರುವೆ. ಇಂತಹ ಸೊಗಸಾದ ಹಾಡನ್ನು ಬರೆದ ಶಿವರುದ್ರಪ್ಪನರವರಿಗೆ ನನ್ನಿ.
ಹಾಗು ಇಂಪಾಗಿ ಎದೆ ತುಂಬಿ ಹಾಡಿರುವ ಅಶ್ವತ್ ರವರಿಗೂ ನನ್ನಿ. ಜೊತೆಗೆ ನಿಮ್ಮೆಲ್ಲರಿಗೂ.............!
ಕಾಣದ ಕಡಲಿಗೆ ಹಂಬಲಿಸಿದೇ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಕಾಣದ ಕಡಲಿದ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು
ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ
ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರನೆ ಒಂದು ದಿನ?
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ
ಸೇರಬಲ್ಲೆನೇನು
ಕಡಲೊಡಲಿನ ಆ ರತ್ನ ಗರ್ಭದಲಿ
ಮುಳುಗಬಹುದೆ ನಾನು
ಕಡಲ ನೀಲಿಯಲಿ
ಕರಗಬಹುದೆ ನಾನು
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಚೆಲುವು- ಒಲವು
ಹಾಡಿದವರು: ಅಶ್ವತ್
ಈ ಹಾಡು ಕೇಳದೇ ಇರುವ ಕನ್ನಡಿಗರೇ ಇಲ್ಲವೇನೋ. ಹಾಡು ಕೇಳಿದಾಗಲೆಲ್ಲ, ಓದಿದಾಗಲೆಲ್ಲ ಬದುಕಿನ ಬಗ್ಗೆ ಏನೋ ಒಂದು ಹೊಸ ದಾರಿ ಕಂಡಂತೆ ಅನಿಸುತ್ತದೆ. ನೇರವಾದ ಚೆಲುವಾದ ಹಾಡು. ನಿಮ್ಮಂದಿಗೆ ಹಂಚಿಕೊಳ್ಳುವ ಹಂಬಲದಿಂದ ಇಲ್ಲಿ ಬರೆಯುತ್ತಿರುವೆ.
ವೇದಾಂತಿ ಹೇಳಿದನು
ಹೊನ್ನೆಲ್ಲ ಮಣ್ಣು
ಕವಿಯೊಬ್ಬ ಹಾಡಿದನು
ಮಣ್ಣೆಲ್ಲ ಹೊನ್ನು!
ವೇದಾಂತಿ ಹೇಳಿದನು
ಈ ಹೆಣ್ಣು ಮಾಹೆ
ಕವಿಯು ಕನವರಿಸಿದನು
ಓ ಇವಳೆನ್ನ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗನೇ ಗೆಲುವೆ!
ವೇದಾಂತಿ ಹೇಳಿದನು
ಈ ಬದುಕು ಶೂನ್ಯ
ಕವಿ ನಿಂತು ಸಾರಿದನು
ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ
ನಾನೆಷ್ಟು ಧನ್ಯ!
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಕಾರ್ತೀಕ
ಹಾಡಿದವರು: ಪಿ.ಬಿ.ಶ್ರೀನಿವಾಸ

ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
ಗಂಗಾ, ಹೀಗೆ ನೇರವಾಗಿ ಹೇಳ್ತೀನಿ ಅಂತ ಬೇಸರಿಸಿಕೋ ಬೇಡ ಕಣೆ. ಏನ್ ಮಾಡ್ಲಿ ಎಷ್ಟಂತ ನಿನ್ನಲ್ಲಿ ಗೋಗರಿಯಲಿ. ನನ್ನ ಪ್ರೀತಿ ನಿನಗೆ ಅರ್ಥನೇ ಆಗ್ಲಿಲ್ಲ. ಅವಳಿಗೆ ನನ್ನ ಮನಸ್ಸು ಯಾಕೆ ಒಪ್ಪಿಸಿಬಿಟ್ಟೆ ಗೊತ್ತಾ. ಅವಳ ನಗು ನಿನ್ನಂತೇ ಇದೆ. ಆಕೆ ನಕ್ಕರೆ ತೇಟ್ ನಿನ್ನ ತರಾನೇ ಕಾಣಿಸ್ತಾಳೆ. ನಿನ್ನಷ್ಟೇ ವೈಯ್ಯಾರ ನೋಡು. ಆದರೆ ಒಂದು ಮಾತ್ರ ನಿನಗಿಂತ ಚಂದ ಇದೆ ಅದೇನ್ ಗೊತ್ತಾ ಅವಳ ನಡಿಗೆ. ನಿನ್ತರ ಈಷ್ಟ್ ವೆಷ್ಟು ಅಲ್ಲ ನೋಡು ಅವಳು ನಡೆಯೋದು. ಸೂಪರ್, ಅವಳು ನಡೆದರೆ ಹಂಸ ನಾಚಿಬಿಡಬೇಕು. ಅವಳು ನಡು ಬಳುಕಿಸಿ ನಡೆಯುವ ವೈಕರಿ ನೋಡಿದರೆ ನಿಜ ಆ ಬೇಲೂರ ಬಾಲಿಕೆ ನೆನಪಿಗೆ ಬರ್ತಾಳೆ ನೋಡು. ಅವಳಿಗೆ ನಿನಗಿಂತ ಚನ್ನಾಗಿ ಸಿಟ್ಟಾಗೋದು ಗೊತ್ತು ಕಣೆ. ತುಂಬಾ ಚನ್ನಾಗಿ ಸಿಟ್ಟಾಗ್ತಾಳೆ. ಸಿಟ್ಟಾದಾಗ ಅವಳಮುಖ ತೇಟ್ ಕಾಳಿತರ ಕಾಣಿಸ್ತಿರುತ್ತದೆ.
ನೋಡು ಬರಿ ಆಕೆ ಬಗ್ಗೆ ಹೇಳ್ತೀನಿ ಅಂತ ಹೊಟ್ಟೆ ಕಿಚ್ಚು ಪಡಬೇಡ. ಇನ್ನೊಂದೇನು ಗೊತ್ತಾ ಅವಳ ಕೆನ್ನೆ ನಿನ್ನೊಷ್ಟು ದುಂಡಾಗಿ ಮುದ್ದು ಮುದ್ದಾಗಿ ಇಲ್ಲ ನೋಡು. ಅದಕ್ಕೆ ಒಂದೊಂದು ಸಾರಿ ನಿನ್ನ ನೆನಪು ನನ್ನ ಕಾಡಿ ಬಿಡುತ್ತೆ ಏನ್ ಮಾಡ್ಲಿ. ನನ್ನ ಜೊತೆ ಮಾತಾಡ್ ಅಂತ ನಿನಗೆ ಕೇಳಿ ಕೇಳಿ ಸಾಕಾಯ್ತು. ಬೇರೆ ವಿಧಿಯಿಲ್ಲದೆ ಆಕೆ ಜೊತೆ ಮಾತಾಡ್ತೀನಿ. ಅವಳ ಕೂದಲು ಕಣೆ, ರೇಷ್ಮೆಯಷ್ಟು ನಯವಾಗಿದ್ದಾವೆ. ನಿನಗೆ ಗೊತ್ತಲ್ಲ ಉದ್ದುದ್ದ ನಯವಾದ ಕೂದಲು ಇರೋ ಹುಡುಗಿ ಅಂದ್ರೆ ನನಗೆ ತುಂಬಾ ಇಷ್ಟ ಅಂತ ಅದಕ್ಕೆ ಇರಬೇಕು ಅವಳು ನನ್ನ ಮನಸ್ಸನ್ನ ಬೇಗ ಕದ್ದು ಬಿಟ್ಲು. ಮಲಗುವಾಗ ಅವಳ ಕೂದಲು ನೆನಪಿಗೆ ಬಂದರೆ ನಿದ್ದೇನೇ ಹತ್ತೋದಿಲ್ಲಪ್ಪ. ಕಣ್ಣು ತುಂಬಾ ಅವಳ ಕೂದಲೇ ಚಾಮರ ಬೀಸಿದಂತೆ ಬಾಸವಾಗುತ್ತಿರ್ತದೆ. ಆಗ ನಿನ್ನ ನೆನಪು ಬರೋದೆ ಇರುತ್ತಾ?? ನೀನೆಲ್ಲಿ ನನ್ನ ಮನಸ್ಸಿಂದ ಹೊರೊಟೋಗ್ತೀಯ. ಅಂತು ಇಂತು ನನ್ನ ಹುಚ್ಚನನ್ನ ಮಾಡಬೇಕಂತನೇ ನಿರ್ಧಾರ ಮಾಡಿಯ ಅನಿಸ್ತೀದೆ ನನಗೆ. ಆಕೆ ನಿನ್ನಷ್ಟು ಚಂದಾಗಿ ಕಿಲಕಿಲ ಸುತ್ತೆಲ್ಲ ಕಲರವ ತುಂಬುವಂತೆ ನಗೋದಿಲ್ಲ ಆದರೆ ನಗುವಾಗ ನಿನ್ತರನೇ ಕಾಣಸ್ತಾಳೆ ಗೊತ್ತಾ. ಆಕೆಗೆ ನೀನು ಮಾತಾನಾಡುವಷ್ಟು ಸೊಗಸಾಗಿ ಮಾತಾಡೊದಕ್ಕೆ ಬರೋದಿಲ್ಲ ನೋಡು. ನಿನ್ನಷ್ಟು ಸ್ವೀಟಾಗಿರಲ್ಲ ಆವಳ ಮಾತು. ಆದ್ರುನೂ ಏನೋ ಒಂದು ಖುಷಿ ಕಣೆ ನನಗೆ ಆಕೆ ಜೊತೆ ಮಾತನಾಡುವಾಗ.
ಅವಳ ಹೆಸರು ಕೂಡ ನನ್ನ ಇಷ್ಟವಾದ ಹೆಸರೇ. ಅವಳ ಹೆಸರು ಹೇಳಿದ್ರೆ ಎಲ್ಲಿ ನೀನು ಹೊಟ್ಟೆಕಿಚ್ಚು ಪಟ್ಟುಬಿಡ್ತೀಯೋ ಅಂತ ಭಯ ಆದರುನೂ ಹೇಳಿಬಿಡ್ತೀನಿ. ಆಕೆ ಹೆಸರು ಜಯಶ್ರೀ ಕಣೆ. ಹೆಸರು ತುಂಬಾ ಮುದ್ದಾಗಿದೆ ಅಲ್ವಾ? ದಿನಾಲೂ ಅವಳ ಮುಖ ನೋಡಬೇಕೆನಿಸುತ್ತೆ ಆದರೆ ಏನು ಮಾಡ್ಲಿ ಆಕೆ ಇರುವುದು ಮುಂಬೈನಲ್ಲಿ. ನಾವಿಬ್ಬರು ದಿನಾಲು ನಿನ್ನಬಗ್ಗೆನೇ ಮಾತಾನಾಡ್ತಿರ್ತೀವಿ. ನಿನ್ಗೊಂದು ಗೊತ್ತ. ನಿನಗಾಗಿ ಒಂದು ಕವಿತೆ ಬರೆದಿದ್ದೆ. ನಿನಗೆ ನೆನಪಿದಿಯೋ ಇಲ್ಲವೋ ನನ್ಗೊತ್ತಿಲ್ಲ. ಅದೇ "ಸುಕುಮಾರಿ ಗಂಗಾ" ಅಂತ ಬರೆದಿದ್ದೆನಲ್ಲ. ನಿನಗೆ ಅದರ ನೆನಪಿರುವುದು ನನಗೆ ಸಂಶಯ. ನನ್ನ ದ್ವೇಶಮಾಡುತ್ತ ಮರೆತಿರಬಹುದು. ಇದೇ ನೋಡು ಆ ಕವಿತೆ.
*** ಸುಕುಮಾರಿ ಗಂಗಾ ***
ಕುಮುದ ಕೋಮಲ ಪದದಳ ಗಂಗಾ
ಕೋಕಿಲ ಕೊರಳ ಹಾಡು ಇಂಚರ ಗಂಗಾ
ಚಂದ್ರಿಕೆಯ ತಂಪು ಕಿರಣ ಬಾಣ ಗಂಗಾ
ಸೃಷ್ಠಿಯ ಸೊಭಗಿನ ಸುಕನ್ಯೆ ನನ್ನ ಗಂಗಾ
ಮೈಬಳುಕಿಸುವ ನಾಗಲತೆಯ ಕುಡಿ ಗಂಗಾ
ದುಂಬಿ ಝೇಂಕಾರ ಲಹರಿ ಗಂಗಾ
ನೀಲೋತ್ಪಲ ನಗೆಯ ತೆರೆ ತರಂಗ ಗಂಗಾ
ಕೊಳದ ನೀರ ತಿಳಿ ಬಿಂಬ ಗಂಗಾ
ಕಣ್ಣ ಕನಸಿನ ಕಂಪನ ಛಾಯೆ ಗಂಗಾ
ನನ್ನ ಪ್ರೀತಿಯ ಪೂಜೆಗೆ ಜಪನಾಮ ಗಂಗಾ
ಮನದ ಅನುರಾಗದ ಚಿಲುಮೆ ಗಂಗಾ
ಕೋಟಿ ಕನಸುಗಳಿಗೆ ಮೂರ್ತವಿಟ್ಟ ಗಂಗಾ
ನನ್ನ ಧಮನಿಯ ಬಡಿತದ ಶಬ್ಧ ಗಂಗಾ
ನನ್ನುಸಿರು ಹಾಡುವ ಮುರಳಿ ಗಾಯನ ಗಂಗಾ
ನನ್ನೆದೆಯ ಕವಿಯ ಕಾವ್ಯಕೆ ಸ್ಫೂರ್ತಿ ಗಂಗಾ
ನನ್ನ ಬದುಕಿನ ಕಾವ್ಯದ ಪದ ಚರಣ ಗಂಗಾ
ನಸುಗುಂಗರು ಕೇಶ ತುರುಬಿನ ನಾಗವೇಣಿ ಗಂಗಾ
ಮಧುರ ಸ್ಪುಟ ಮಾತಿನ ಸುಭಾಷಿಣಿ ಗಂಗಾ
ಮಂದಾರವನ್ನೆ ನಾಚಿಸುವ ಸುಹಾಸಿನಿ ಗಂಗಾ
ಸ್ನೇಹದ ಹೊಸ ರೂಪಾಂತರ ಸುಮಿತ್ರೆ ನನ್ನ ಗಂಗಾ
ಕಂಪಿತ ಕೋಮಲ ಕಪೋಲ ಸುಂದರಿ ಗಂಗಾ
ತುಂಬು ಕುಚ ಶೋಭಿತ ಕುಮಾರಿ ಗಂಗಾ
ಬಿರಿದ ಸಂಪಿಗೆಯ ತಟಿ ಸುಶೋಭಿತ ಗಂಗಾ
ನನ್ನ ಹೃದಯದ ಒಡತಿ ಚಂದುಳ್ಳಿ ಚೆಲುವೆ ಗಂಗಾ
ಬಿದಿಗೆ ಚಂದ್ರನ ಬೊಗಸೆ ಕಣ್ಣ ಸುನಯನ ಗಂಗಾ
ನಿಟೀಲ ನಡುವೆ ಬಿಂದಿಯದಾರೆ ಸುಕುಮಾರಿ ಗಂಗಾ
ಕವಿಯ ವರ್ಣನೆಗೆ ನಿಲುಕದ ಸುವರ್ಣೆ ಗಂಗಾ
ನನ್ನ ಪ್ರೇಮ ಪಯಣಕೆ ದೃವತಾರೆ ಗಂಗಾ
ಆರ್ದ ಹೃದಯದಲಿ ಸ್ವಾತಿ ಮುತ್ತಾದ ಗಂಗಾ
ಒಲವಿನ ದಾರಿಗೆ ಬೆಳಕಾದ ಸುತೇಜ ಗಂಗಾ
ಸಪ್ತ ಸಾಗರದಾಚೆಯ ಕಲ್ಪನೆ ಸುನೀಲ ಗಂಗಾ
ನನ್ನ ಪ್ರೇಮ ದೇವತೆ ಸುಶೀಲ ಗಂಗಾ
ಈ ಕವಿತೆ ಕೇಳಿ ಆಕೆ ತುಂಬಾ ಹೊಟ್ಟೆ ಕಿಚ್ಚು ಪಟ್ಲು. ಎರಡು ದಿನ ನನ್ನ ಕೂಡೆ ಮಾತನಾಡ್ಲೇ ಇಲ್ಲ. ಅದಕ್ಕೆ ಆಕೆಯನ್ನು ಸಮಧಾನ ಮಾಡಲು ಸಾಕು ಸಾಕಾಗಿ ಹೋಯ್ತು. ಎರಡು ದಿನ ಹರಸಾಹಸ ಮಾಡಿದ ನಂತರ ಮಾತನಾಡಿಡ್ಲು. ನಿನ್ನಷ್ಟೊಂತೂ ಹಟವಿಲ್ಲ ಬಿಡು ಎರೆಡೇ ದಿನದಲ್ಲಿ ದಾರಿಗೆ ಬಂದುಬಿಟ್ಲು. ನೀನಾದ್ರೆ ಒಂದು ವರ್ಷ ಆದ್ರು ಮುಖ ಊದಿಸಿಕೊಂಡೇ ಇದ್ದೀಯ.
ಬದುಕೆಂದರೆ ಈಗೆ ನೋಡು ಎಷ್ಟು ಆಕಸ್ಮಿಕ ಅಲ್ವ? ಯಾಕೆ ಈ ಮಾತು ನಿನ್ನತ್ತಿರ ಹೇಳ್ತೀನಿ ಅಂದ್ರೆ. ನನಗೆ ಜಯಶ್ರೀ ಇದ್ದಾಳಲ್ಲ ಅವಳು ಸಿಕ್ಕಿದ್ದೆ ಆಕಸ್ಮಿಕ. ಅವತ್ತೊಂದಿನ ನಿನ್ನ ನೋಡುಬೇಕೆನ್ನಿಸಿತು ವಿಮಾನ ಹತ್ತಿಕೊಂಡು ಆಸೆಯಿಂದ ಬೆಂಗಳೂರಿಗೆ ಬಂದಿದ್ದೆ. ನೆನಪಿದೆಯ.!!! ನಿನಗೆ ಫೋನ್ ಮಾಡಿ ಗೋಗರೆದು ಅತ್ತು, ಬೆಟ್ಟಿಯಾಗು ಅಂತ ಕೇಳಿಕೊಂಡೆ. ಹೃದಯನೇ ಇಲ್ಲದವಳ ತರ ಮಾತಾಡಿ ಬೆಟ್ಟಿ. ಹಠಬಿಡದೇ ನೀನು ಕೊನೆಗೂ ನನ್ನ ಬೆಟ್ಟಿ ಆಗ್ಲೇ ಇಲ್ವಲ್ಲ. ಅವತ್ತು ತುಂಬಾ ದುಃಖ ಆಗಿತ್ತು ನೋಡು. ಅವತ್ತು ನನಗಾಗಿದ್ದು ಎಂತಹ ನೋವು ಅಂತಿಯಾ ಎರಡು ದಿನ ಒಂದಗಳು ಕೂಳು ತಿನ್ನಲಿಕ್ಕೆ ಸಹನು ಆಗಲಿಲ್ಲ. ಸುಮ್ಮನೆ ಒಬ್ಬನೆ ಕುಳಿತು ಅತ್ತುಬಿಟ್ಟೆ.
ಅವತ್ತು ಯಾರ ಮುಂದೆನೂ ನನ್ನ ನೋವನ್ನು ಹೇಳಿಕೊಳ್ಳಲಿಲ್ಲ. ಹೇಳಿಕೊಂಡ್ರೆ ನನ್ನ, ಜೊತಗೆ ನಿನ್ನ ಸೇರಿಸಿ ಇಬ್ಬರನ್ನೂ ನನ್ನ ಗೆಳೆಯರು ಬೈದ್ಬಿಡ್ತಾರೆ. ಅವಳೊಬ್ಬ ರಂಕ್ಲಿರಾಣಿ, ನೀನೊಬ್ಬ ಹುಚ್ಚ ಏನಾದ್ರು ಮಾಡ್ಕೋ ನಿಮ್ಮ ಜಗಳ ಯಾವತ್ತು ಇರಲ್ಲ ಹೇಳು ಅಂತ ನನಗೆ ಚೀಮಾರಿ ಹಾಕ್ತಾರೆ. ನನಗೆ ಬೈದ್ರೆ ಓಕೆ ಆದ್ರೆ ನಿನಗೆ ಬೈದ್ರೆ ನನಗೆ ಸಹಿಸೊಕೆ ಆಗಲ್ಲ ಕಣೆ. ಅದಕ್ಕೆ ಯಾರತ್ರನೂ ನಾನು ಈ ವಿಷಯ ಹೇಳ್ಲಿಲ್ಲ ನೋಡು. ಸುಮ್ಮನೆ ಮಂಗನ ತರ ಪುಣೆಗೆ ಮರಳಿ ಬಂದೆ. ಅದೇ ಅವತ್ತು ವಾಪಾಸ್ ಬರುವಾಗ ರೈಲು ಹತ್ತಿ ಕೂತೆ. ನಾನಿದ್ದ ಡಬ್ಬಿಯಲ್ಲೇ ಆ ಹುಡುಗಿ ಇದ್ಲು. ಅವರಪ್ಪ ಅಮ್ಮನ ಜೊತೆ ಕೆಳಗಿನ ಸೀಟ್ ಮೇಲೆ ಕುಂತಿದ್ಲು. ನಂದು ಸೀಟ್ ಮೇಲಿಂದಿತ್ತು. ಅದ್ಯಾಕೋ ಗೊತ್ತಿಲ್ಲ, ಆಕೆನೂ ಮೇಲೆ ಬರ್ತೀನಿ ಅಂತ ಗೋಗರೆದು ರಂಪಾಟ ಮಾಡಿ ಕೊನೆಗೂ ಅಪ್ಪ ಅಮ್ಮನ್ನ ಒಪ್ಪಿಸಿ ನನ್ನ ಜೊತೆ ಬಂದು ಕುಂತ್ಲು. ಆಗಿಂದನೇ ನಮ್ಮಿಬ್ಬರ ಗೆಳೆತನ ಸುರುವಾಗಿದ್ದು. ಅವಾಗ್ಲೆ ನಿನ್ನ ಬಗ್ಗೆ ಎಲ್ಲಾನೂ ಹೇಳಿಬಿಟ್ಟೆ ಆಕೆಗೆ. ಯಾಕಂದ್ರೆ ಬೇರೆಯವರು ನನ್ನ ನಿನ್ನ ವಿಷಯ ಕೇಳೋದಿಲ್ಲ. ಅವರಿಗೆಲ್ಲ ನಮ್ಮಿಬ್ಬರ ವಿಷಯ ವಾಕರಿಕೆ ಬರುವಂತಾಗಿದೆ. ಅದಕ್ಕೆ ಅವಳತ್ತಿರ ಮನಸ್ಸು ಬಿಚ್ಚಿ ಎಲ್ಲಾನೂ ಹೇಳಿಬಿಟ್ಟೆ. ಇವತ್ತಿಗೂ ಅವಳೊಬ್ಬಳತ್ತಿರ ಏನೂ ಮುಚ್ಚಿಡದೇ ಹೇಳ್ತನೇ ಇರ್ತೀನಿ.
ಇವತ್ತಿಗೆ ನಾಲ್ಕುದಿನದ ನಂತರ ಅವಳ ಹದಿನಾಲ್ಕನೆ ಹುಟ್ಟು ದಿನವಿದೆ. ಅವತ್ತು ಅವಳಿಗೆ ನಿನ್ನ ಹುಟ್ಟು ದಿನದಂದು ನಿನಗೆ ಕೊಟ್ಟಂತೆ ಅವಳಿಗೂ ಏನೇನೋ ಉಡುಗೊರೆ ಕೊಡಬೇಕೆನ್ನುವ ಆಸೆ ಕಣೆ. ಆದರೆ ಅವಳು ಏನನ್ನೂ ತೊಗೋಳ್ಳದಿಲ್ಲವಂತೆ. ಆಕೆಗೆ ನನ್ನ ಗೆಳೆತನ ನನ್ನ ಪ್ರೀತಿ ಅಷ್ಟೇ ಸಾಕಂತೆ. ನಾವಿಬ್ಬರು ಕೊನೆಯವರೆಗೂ ಅಣ್ಣತಂಗಿಯಾಗಿ ಪ್ರೀತಿಯಿಂದ ಇರೋಣ, ಆ ಪ್ರೀತಿನೇ ನನಗೆ ನಿನ್ನಿಂದ ಉಡುಗೊರೆ ಸಾಕು ಅಂತಿದ್ದಾಳೆ. ನಾನು ನಿನ್ನ ಪ್ರೀತಿಸ್ತೀನಿ ಎಂದು ನನ್ನ ಪ್ರೀತಿ, ನನ್ನ ಬದುಕನ್ನು ನಿನಗೆ ಧಾರೆಯರೆದೆ. ಆದರೆ ನನ್ನ ಪ್ರೀತಿ ನಿನಗೆ ಅರ್ಥವಾಗ್ಲೇ ಇಲ್ಲ. ಅವತ್ತು ನಾನು ನನ್ನ ಪ್ರೀತಿಯನ್ನು ಇನ್ನೊಬ್ಬರಿಗೆ ಕೊಡೋದಿಕ್ಕೆ ಪ್ರಯತ್ನ ಪಟ್ಟೆ, ಆದರೆ ವಿಧಿಯಾಟ ಬಲ್ಲವರಾರು ಇವತ್ತು ನನ್ನ ಪ್ರೀತಿನಾ ಕೇಳ್ತದ್ದಾರೆ. ಇವತ್ತು ಇನ್ನೊಬ್ಬರು ನನ್ನ ಪ್ರೀತಿ, ಗೆಳತನ ಕೇಳ್ತಿದ್ದಾರೆ ಅದು ಖುಷಿಯಿಂದ ಅದಕ್ಕೆ ಕೊಟ್ಟುಬಿಡ್ತಿನಿ ಕಣೆ. ನಾನೆಷ್ಟು ಧನ್ಯ ಅಲ್ವಾ?
ನಿನ್ನೆ ರಕ್ಷಬಂದನ ಇತ್ತಲ್ಲ ಅವತ್ತು ನನಗೆ ರಾಖಿ ಕಳಿಸಿದ್ದಾಳೆ. ನನಗೆ ಏನು ಕೊಡ್ತೀಯಾ ಅಂತನೂ ಕೇಳಿದ್ದಾಳೆ. ನಾನು ಅವತ್ತು ಕರೆ ಮಾಡಿ ನಿನಗೆ ಏನ್ ಬೇಕು ಹೇಳು ಅಂತ ಕೇಳಿದೆ. ಅದಕ್ಕೆ ಅವಳು ಏನು ಕೇಳಿದಲು ಗೊತ್ತಾ... ನಾನು ನಿನ್ನ ಗಂಗಾ ಜೊತೆ ಮಾತನಾಡಬೇಕು ಯಾವತ್ತು ಮಾತನಾಡಿಸ್ತೀಯಾ ಅಂತ ಕೇಳಿದ್ಲು. ನನಗೆ ಆಗ ಅವಳಿಗೆ ಏನ್ ಹೇಳಬೇಕೋ ಗೊತ್ತಾಗಲಿಲ್ಲ. ನೀನು ಬೇರೆ ಮುನಿಸಿಕೊಂಡು ಮುಖ ಊದಿಸಿಕೊಂಡೋಳು ಅಂಗಲಾಚಿದ್ರೂ ಮಾತನಾಡ್ತಿಲ್ಲ, ಅಂತಹುದರಲ್ಲಿ ಆಕೆಗೆ ಏನ್ ಹೇಳಬೇಕೋ ತಿಳಿಯದೆ ತಬ್ಬಿಬ್ಬಾಗಿ ಬಿಟ್ಟೆ ನೋಡು. ಆಕೆಗೆ ನಿನ್ನ ಬಗ್ಗೆ ತುಂಬಾ ಹೇಳಿಬಿಟ್ಟಿದ್ದೆ. ಅದಕ್ಕೆ ನಿನ್ನ ಜೊತೆ ಮಾತನಾಡಬೇಕು ಅಂತ ಆಶೆ ಆಯ್ತಂತೆ. ಅವಳಿಗೆ ನಿನ್ನಜೊತೆ ಮಾತನಾಡಿಸಿದ್ರೆ ಅದೇ ರಕ್ಷಬಂಧನದ ಉಡುಗೊರೆಯಂತೆ. ಆಯಿತು ಮಾತನಾಡ್ಸತಿನಿ ಅಂತನೂ ಮಾತುಬೇರೆ ಕೊಟ್ಟು ಬಿಟ್ಟೀನಿ ಆಕೆಗೆ. ಈಗ ನೀನೇ ಹೇಳು ನಾನು ಹೇಗೆ ಅವಳ ಮಾತು ಉಳಿಸಿಕೊಳ್ಳಲಿ? ನೀನು ನೋಡಿದರೆ ಏಳೇಳು ಜನ್ಮ ನನ್ನ ಜೊತೆ ಮಾತನಾಡುವುದಿಲ್ಲ ಅನ್ನೋತರ ಆಡ್ತೀಯ. ನಿನ್ನ ನಂಬಿ ಎಲ್ಲಿ ಅವಳತ್ತಿರ ಮಾತಿಗೆ ತಪ್ಪಿ ಬಿಡ್ತೀನೋ ಅಂತ ತುಂಬಾ ಭಯ ಆಗ್ತಿದೆ ನನಗೆ.
ಆಕೆ ನಿನ್ನೊಷ್ಟು ಚೆಲುವಾಗಿ ಇಲ್ಲ ಕಣೆ. ಆದರೆ ತುಂಬಾ ಹೃದಯವಂತೆ ನೋಡು. ನನ್ನೆಲ್ಲಾ ನೋವಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಾಳೆ. ನನಗೆ ಸಮಧಾನ ಮಾಡ್ತಾಳೆ. ಇವತ್ತು ಅವಳ ಮಾತೇ ನನ್ನ ನೊಂದ ಹೃದಯಕ್ಕೆ ಔಷದಿ ನೋಡು. ಬಿಡು ನೀನಂತು ದ್ವೇಶದ ನಂಜನ್ನೇ ಕಾರ್ತೀಯ. ನಿನಗೆ ಏನು ಹೇಳಿದ್ರು ಅರ್ಥವಾಗೋದಿಲ್ಲ. ನನಗೆ ಒಂದೇ ಚಿಂತೆ ಅವಳು ಇವತ್ತು ಫೋನ್ ಮಾಡಿದ್ರೆ ಮತ್ತೇ ನನ್ನ ಕೇಳ್ತಾಳೆ ಗಂಗಾ ಜೊತೆ ಮಾತಾಡಿದ್ಯಾ ಅಂತ. ಎಂದು ಅವಳ ಜೊತೆ ಮಾತನಾಡಸ್ತೀಯಾ ಅಂತ ಕೇಳ್ತಾಳೆ. ಇವತ್ತು ಏನು ಸುಳ್ಳು ಹೇಳಬೇಕೋ ಯೋಚಿಸಬೇಕು. ಬರ್ಲಾ...
**ಕುಕೂಊ.....
೧೭/೦೮/೨೦೦೮
ಬೆಳಿಗ್ಗೆಯಿಂದ ಸಿಂಹಗಢ ಹತ್ತಿ ಇಳಿದು ತಿರುಗಾಡಿ ಸುಸ್ತಾಗಿ ಬಂದು ಸಂಜೆ 6 ಗಂಟಗೆ ಮಲಗಿದ್ದೆ.
ಅವತ್ತು ನನ್ನ ಆತ್ಮೀಯ ಗೆಳೆಯ, ರೂಮ್ ಮೆಟ್ ಮಹದೇವನ ಹುಟ್ಟುಹಬ್ಬದ ದಿನ. ಪಾರ್ಟಿಗೆ ಹೋಗೋಣ ಅಂತ ಮಹದೇವ ಪದೇ ಪದೇ ಹೇಳುತ್ತಿದ್ದ. ಯಾವುದನ್ನು ಕೇಳಿಕೊಳ್ಳದವನಂತೆ ಮಲಗಿದ್ದೆ. ಹೊಟ್ಟೆ ತುಂಬಾ ಹಸಿದಿತ್ತು. ಏನಾದರು ಮಾಡಿಕೊಂಡು ತಿನ್ನೋಣವೆಂದರೆ ಸುಸ್ತು. ಬಾಲು, ಮಹದೇವರಿಗೇ ಏನಾದರು ಮಾಡ್ರೋ ಅಂತ ಹೇಳಿದರೆ ನಾವು ಪಾರ್ಟಿಗೆ ಹೋಗ್ತೀವಿ ಬರುವುದಾದರೆ ಬಾ ಇಲ್ಲ ಮಾಡಿಕೊಂಡು ತಿನ್ನು ಎಂದರು. ಬೇರೆದಾರಿಯಿಲ್ಲದೆ ಸುಮ್ಮನೆ ಮಲಗಿದೆ. ಬೆಳಿಗ್ಗೆಯಿಂದ ಮಳೆಯಲ್ಲಿ ತೋದಿದ್ದರಿಂದ ಚಳಿಯಿಂದ ಮೈ ಗಡಗಡ ನಡುಗುತಿತ್ತು. ದಪ್ಪನಾದ ದುಪ್ಪಡಿ ಹೊದ್ದು ಕಣ್ಣು ಮುಚ್ಚಿದ್ದೆ. ಪುಟತೆರೆದ ಸಂಧ್ಯಾರಾಗ ಪುಸ್ತಕ ಕೈಯಲ್ಲಿತ್ತು.
ನನಗೆ ಸುಸ್ತಾಗಿ, ಹಸಿವಾಗಿರುವುದು ತಿಳಿದ ಮಹದೇವ ಪಾರ್ಟಿಗೆ ಹೋಗುವ ಮೊದಲು ನನಗೆ ಏನಾದರು ತಂದು ಕೊಡಲಾ ಅಂತ ಕೇಳಿದ ಹೂಂ... ಅಂತ ನಿದ್ದೆಯಲ್ಲೇ ಹೇಳಿದೆ. ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ತರುತ್ತೇನೆಂದು ಹೇಳಿ ಬಾಲು ಮಹದೇವ ಇಬ್ಬರೂ ಹೊರಟರು. ನನ್ನ ಮೈ ಸುಸ್ತಿನಿಂದ ತುಂಬಿತ್ತು, ಕಣ್ಣು ನಿದ್ದೆಯಲ್ಲಿ ಮುಳಿಗಿದ್ದವು.
ಹೊರಗಡೆ ಏನೋ ಸಪ್ಪಳ. ಯಾರೋ ಕೂಗಿದಂತೆ ಅನ್ನಿಸುತ್ತಿತ್ತು. ಏನೆಂದು ಗೊತ್ತಾಗಲಿಲ್ಲ. ಮಳೆ ಸಣ್ಣಗೆ ಹನಿಯುತ್ತಿತ್ತು. ಕಣ್ಣೊರೊಸಿಕೊಳ್ಳುತ್ತ ಕಿಟಕಿಯಿಂದ ಹೊರಗಡೆ ಇಣುಕಿದೆ. ಅಷ್ಟೊತ್ತಿದೆ ನನ್ನ ಮೂಗಿಗೆ ಏನೋ ವಾಸನೆ ಸುಳಿವುಸಿಕ್ಕು ದೀರ್ಗವಾಗಿ ಗಾಳಿ ಎಳೆದುಕೊಳ್ಳುತ್ತಿತ್ತು. ಕೈ ಕಣ್ಣುಜ್ಜುತ್ತಿತ್ತು. ನೋಡಿದರೆ ನಮ್ಮ ಮನೆಯ ಮಾಲಿಕರ ಯಜಮಾನಿಯವರು ಓಣಿಯಲ್ಲಿನ ಹೆಂಗಸರನ್ನು ಕರೆದು ಕರೆದು ಏನೋ ತೋರಿಸುತ್ತಿದ್ದರು. ನನಗೆ ಕುತೂಹಲ ಪ್ರಾರಂಬವಾಯಿತು. ಯಾಕೆ ಇವರು ಎಲ್ಲರನ್ನು ಕರೆಯುತ್ತಿದ್ದಾರೆ ಅದೂ ಇಷ್ಟೊಂದು ಏರು ದ್ವನಿಯಲ್ಲಿ? ಅಸ್ತವ್ಯಸ್ತವಾಗಿದ್ದ ಲುಂಗಿ ಸುತ್ತಕೊಳ್ಳುತ್ತ ನಾನು ಕೆಳಗಿಳಿದು ಬಂದೆ. ನನ್ನ ನೋಡಿದೊಡನೆಯೇ ಆ ಯಜಮಾನಿ ಕುಮಾರ್ ನೋಡಿಲ್ಲಿ ಬ್ರಹ್ಮ ಕಮಲ ಅರಳಿದೆ, ವರ್ಷಕ್ಕೊಂದೇ ಬಾರಿ ಅರಳುವುದು. ಇವತ್ತು ಜೇಷ್ಠ ಮಾಸದ ಏಕಾದಶಿ ತಾನೆ ಅದಕ್ಕೆ ಇವತ್ತು ಅರಳಿದೆ. ಎಲ್ಲರಿಗೂ ತೋರಿಸೋಣ ಅಂತ ಕರಿತಿದ್ದೆ.
ನಮ್ಮ ಮನೆಯ ಯಜಮಾನಿ ಕನ್ನಡದವರಾಗಿದ್ದರಿಂದ ನನ್ನ ಜೊತೆ ಇಷ್ಟೆಲ್ಲವನ್ನೂ ಒಂದೇ ಉಸುರಿನಲ್ಲಿ ಕನ್ನಡದಲ್ಲೇ ಹೇಳಿದರು. ನಾವು ಕನ್ನಡ ಮಾತನಾಡುತ್ತಿದ್ದುದ್ದರಿಂದ ಅಷ್ಟೊತ್ತಿದೆ ಅಲ್ಲಿ ಬಂದು ಸೇರಿದ್ದ ಮರಾಠಿ ಹೆಂಗಸರು ನಮ್ಮನ್ನೇ ನೋಡುತ್ತಿದ್ದರು. ಮಳೆ ಸ್ವಲ್ಪ ಜೋರಾಗಿ ಹನಿಯಲು ಶುರುವಾಯಿತು. ಒಮ್ಮೆ ಹೂವಿನ ಕಡೆ ಕಣ್ಣಾಡಿಸಿ ಬಂದೇ ಎಂದೇಳಿ ಮೆಟ್ಟಿಲತ್ತತೊಡಗಿದೆ. ಕ್ಯಾಮರವನ್ನು ಚಾರ್ಜಮಾಡಲು ಮಹದೇವ ಇಟ್ಟಿದ್ದ. ಕ್ಯಾಮರವನ್ನು ವೈರಿನಿಂದ ಬಿಡಿಸಿಕೊಂಡು ಒಂದೇ ಉಸಿರಿನಲ್ಲಿ ಕೆಳಗಿಳಿದು ಬಂದು ಅರಳಿದ್ದ ರಾತ್ರಿ ರಾಣಿಯನ್ನು ನನ್ನ ಕ್ಯಾಮರದಲ್ಲಿ ಸೆರೆಯಿಡಿಯ ತೊಡಗಿದೆ. ಮನೆಯ ಅಂಗಳದಲ್ಲಿ ಗೋಡೆಗುಂಟ ಅಡರಿ ಬೆಳೆದಿರುವ ಎರಡು ಗಿಡಗಳಿವೆ. ಮೈ ತುಂಬಾ ಹಾಲುಬಿಳುಪಿನ ಹೂವು ಬಿಟ್ಟು ಸುತ್ತೆಲ್ಲ ಕಂಪು ಸೂಸಿ ಆ ಗಿಡಗಳು ಬೀಗುತಿದ್ದವು. ಬಿಳಿ ಪಕಳೆಗಳನ್ನು ನೋಡಿದ ನನ್ನ ಮನಸ್ಸಿನಲ್ಲಿ ಒಲವಿನ ಗೆಳತಿಯ ನಗೆಗುಳಿಯ ಕೆನ್ನೆಯ ಚಿತ್ರ ನುಸುಳದೇ ಇರಲು ಸಾದ್ಯವೇ?
ಹಬ್ಬ! ಎಸ್ಟೊಂದು ಸುಂದರವಾಗಿದ್ದವು ಆ ಹೂವು! ಬಿರಿದು ಅರಳಿದಾಗ ಹೊಮ್ಮುವ ಸುವಾಸನೆಯನ್ನು ಸವಿದೇ ಅನುಭವಿಸಬೇಕು. ಆ ಕಂಪಿನ ಸೊಗಸನ್ನ ಮಾತಿನಲ್ಲಿ ಹೇಳುವುದು ಕಷ್ಟಸಾಧ್ಯ. ಎಲೆಯನ್ನು ಸೀಳಿಕೊಂಡು ಅರಳುವ ಹೂವು ರಾತ್ರಿರಾಣಿ (ಬ್ರಹ್ಮ ಕಮಲ) ಸೃಷ್ಠಯ ಒಂದು ಅದ್ಭುತ.
ಹಾಲು ಬಿಳುಪಿನ ಆ ಹೂವನ್ನು ನಾನು ಹಿಂದೆ ಕೊಟ್ಟೂರಿನಲ್ಲಿ ಪಿ.ಯು.ಸಿ ಓದುವಾಗ ನೋಡಿದ್ದೆ. ಈಗ ಈ ಹೂವನ್ನು ನೋಡಿದಕೂಡಲೇ ಅವತ್ತಿನ ಒಂದು ಮಾತು ನನ್ನ ನೆನಪಿಗೆ ಬಂತು. ಈ ಹೂವು ಅರಳುವುದು ವರ್ಷದಲ್ಲಿ ಒಮ್ಮೆ ಮಾತ್ರ ಅಂತ ಯಾರೋ ಆ ದಿನ ಆಡುತಿದ್ದರು. ಅದನ್ನು ನಾನು ಕೇಳಿಸಿಕೊಂಡಿದ್ದೆ. ಮಳೆ ಸಣ್ಣದಾಗಿ ಹನಿಯುತ್ತಿದ್ದರಿಂದ ಬಿಳಿ ದಳಗಳ ಮೇಲೆ ಬಿದ್ದ ಮಳೆಯ ಹನಿ ಮುತ್ತು ಮೆತ್ತಿದಂತೆ ಕಾಣುತಿದ್ದವು. ಆ ರಾತ್ರಿ ರಾಣಿಯನ್ನು ಸಾಕಾಗುವವರೆಗೆ ನನ್ನ ಕ್ಯಾಮರದಲ್ಲಿ ಕ್ಲಿಕ್ಕಿಸಿದ್ದೆ. ಮತ್ತೆ ಕಣ್ಣು ನಿದ್ದೆಯನ್ನು ಅರಸುತ್ತಿದ್ದವು. ಪೋಟೊವನ್ನು ಯಜಮಾನಿಗೆ ತೋರಿಸಿದೆ. ಅವರು ಪಕ್ಕದ ಓಣಿಯಲ್ಲಿರುವ ಶಿವಮಂದಿರದ ಕಡೆ ಕೈತೋರಿಸುತ್ತ ಕುಮಾರ್ ಬೆಳಗ್ಗೆ ಈ ಹೂವನ್ನು ಶಿವನಿಗೆ ಅರ್ಪಿಸ ಬೇಕು ಎಂದೇಳಿದರು. ಅಷ್ಟೊತ್ತಿಗ್ಗೆ ನನ್ನ ಮೈ ಪೂರ್ತಿಯಾಗಿ ಒದ್ದೆಯಾಗಿತ್ತು. ತಲೆಯ ಮೇಲೆ ಬಿದ್ದ ನೀರನ್ನು ಕೊಡವಿಕೊಳ್ಳುತ್ತ ಹಸಿದು ಚುರು ಚುರು ಎನ್ನುತ್ತಿದ್ದ ಹೊಟ್ಟಯ ಮೇಲೆ ಕೈಯಾಡಿಸುತ್ತ ಮಹದೇವನ ಬರುವಿಗಾಗಿ ಕಾಯುತಿದ್ದೆ. ವಿಷಯ ಸೂಚಿ : ಈ ಹೂವಿನ ಬಗ್ಗೆ ನನಗೆ ಆ ಯಜಮಾನಿತಿ ಹೇಳಿದ್ದಷ್ಟೆ ಗೊತ್ತಿರುವುದು. ಅದನ್ನೇ ಬರೆದಿರುವೆ. ನಿಮಗೆ ಯಾರಿಗಾದರು ಹೆಚ್ಚಿನ ಮಾಯಿತಿ ತಿಳಿದಿದ್ದರೆ ನನಗೂ ತಿಳಿಸಿ. ತಿಳಿದುಕೊಳ್ಳುವ ಕುತೂಹಲವಿದೆ.
**ಕುಕೂಊ....
ಹಾಗೆ ಮಿಂಚು ಅಂಚೆಯಲ್ಲಿ ನನಗೆ ಸಿಕ್ಕಿತು. ಹುಬ್ಬೇರಿಸಿ ನೋಡಿದೆ. ಕಣ್ಣರಳಿಸಿ ನೋಡಿದೆ. ಮತ್ತೆ ಮತ್ತೆ ನೋಡಿದೆ.
ಕೊನೆಗೆ ಸೃಷ್ಠಿಯ ಮುಂದೆ ನಾನೊಂದು ಯಕೋಚಿತನೆಂದುಕೊಂಡು ಸುಮ್ಮನಾದೆ.
ಆದರೆ ಈ ಚಿತ್ರ-ವಿಚಿತ್ರ ಎಲ್ಲರಿಗೂ ಕಾಣಿಸುವ ಆಸೆ, ಅದಕ್ಕೆ ಈ ಚಿತ್ರವನ್ನು ಇಲ್ಲಿ ಹಾಕಿರುವೆ.
ಬಾಳೆಯ ತಳಿ ಯಾವುದು? ಯಾವ ಊರಿನಲ್ಲಿ ಬೆಳಿದಿರುವುದು ನನಗೇನು ತಿಳಿದಿಲ್ಲ.
ಯಾರಿಗಾದರು ಗೊತ್ತಿದ್ದರೆ ನೀವು ಖಂಡಿತ ತಿಳಿಸ ಬೇಕು.
*ಕುಕೂಊs....
12/06/08
**ಕುಕೂ**
19/04/08
ಮುಂಬೈಯ ಹೊರಗಡೆಯ ಎಸ್ಸೆಲ್ ವರ್ಲ್ಡ ಎನ್ನೋ ಕೃತಕ ನೀರಿನ ಆಟದ ತಾಣ. ಬೇಸಿಗೆಯ ರಜೆ ಇದ್ದರಿಂದ ತಾಣ ಕಾಲೆಜ್ ಮತ್ತು ಶಾಲಾ ಮಕ್ಕಳಿಂದಲೇ ತುಂಬಿ ತುಳುಕಾಡುತ್ತಿತ್ತು. ಮಂಗಳವಾರದ ದಿನವಾದ್ದರಿಂದ ಅಷ್ಟೊಂದ ಜನನಿಬಿಡ ಎನ್ನಿಸ್ಸುತ್ತಿರಲಿಲ್ಲ. ಒಳಗೆ ರಸ್ತೆಯ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕುಳಿತ ನಾನು ಯಾವುದೋ ಕಲ್ಪನೆಯಲ್ಲಿ ವಿಹರಿಸುತ್ತಿದ್ದೆ. ಕಲ್ಪನೆಯ ವಿಷಯವೇನೆಂದು ನೆನಪಿಗೆ ಬರುತ್ತಿಲ್ಲ. ಕಟ್ಟೆಯ ಎದುರುಗಡೆ ಇಳಿಜಾರಿನ ರಸ್ತೆ ಇತ್ತು. ಅಲ್ಲಿ ದೊಡ್ಡದಾದ ನಾಲ್ಕು ಮೆಟ್ಟಿಲುಗಳಿದ್ದವು. ಅದರಮೇಲೆ ಸುಮಾರು ಇಪ್ಪತ್ತರಿಂದ ಇಪ್ಪತ್ತೆರೆಡು ಹುಡುಗರು ಜೊತೆಗೆ ನಾಲ್ಕು ಹುಡುಗಿಯರು ಕುಳಿತಿದ್ದರು. ಎಲ್ಲರೂ ತಮಾಷೆಯ ಗುಂಗಿನಲ್ಲಿ ಹರಟುತ್ತಿದ್ದರು.
ಒಮ್ಮೊಮ್ಮೆ ನನ್ನ ಕಲ್ಪನಾ ಲಹರಿಯಿಂದ ಹೊರಬಂದು ಅವರನ್ನು ನೋಡುತ್ತಿದ್ದೆ. ಅವರ ಚಲನವಲನಗಳ ಮೇಲೆ ನಿಗಾವಹಿಸಿ ನೋಡುತ್ತಿದ್ದೆ. ಆಧುನಿಕ ಶೋಕಿಯಿಂದ ತುಂಬಿರುವ ಮುಂಬೈಯ್ ವಾಸಿಗಳಾಗಿದ್ದ ಆ ಹುಡುಗ ಹುಡುಗಿಯರ ಎಲ್ಲಾ ಚಟುವಟಿಕೆಗಳು ಮುಕ್ತವಾಗಿದ್ದವು. ಯಾರ ಹಂಗಿಲ್ಲದೆ ಎಲ್ಲಾ ಕಪಿ ಚೇಷ್ಟೆಗಳಲ್ಲಿ ತಲ್ಲೀನರಾಗಿದ್ದರು. ಅಲ್ಲಲ್ಲಿ ತೂತು ಮಾಡಿದ್ದ ಜೀನ್ಸ್ ಫ್ಯಾಂಟ್, ತುಂಡು ತುಂಡಾದ ಮೈಗಂಟಿಕೊಳ್ಳುವ ಅಂಗಿ ಅವರ ಉಡುಪುಗಳು, ಕೆಲವರು ಟೋಪಿಯನ್ನೂ ಹಾಕಿಕೊಂಡಿದ್ದರು. ಇನ್ನೂ ಕೆಲವರು ಕೂದಲುಗಳನ್ನು ಬಿಟ್ಟುಕೊಂಡು ಹೊಸಶೋಕಿಯನ್ನ ಬಿತ್ತರಿಸುತ್ತಿದ್ದರು. ಹದಿನಾರರ ಗಡಿ ದಾಟಿತ್ತೋ ಇಲ್ಲವೊ ಇನ್ನು ಎಳೆವಯಸ್ಸು. ಹೆಚ್ಚಿನ ಹುಡುಗಿಯರು ಪ್ಯಾಂಟ್ ಹಾಕಿಕೊಂಡಿದ್ದರು. ತೋಳುಗಳೇ ಇಲ್ಲದ ಕುಪ್ಪಸನೋ ಅಥವ ತುಂಡು ಅಂಗಿನೋ ಯಾವುದು ಎಂದುಗೊಂದಲಮೂಡಿಸುವಂತ ಮೇಲಿನ ಉಡುಪು. ಆದಷ್ಟು ಎದೆ ಕಾಣಿಸುವಂತೆ ನೀಳವಾಗಿ ಕತ್ತರಿಸಿದ ಹುಡುಗಿಯರ ಮೇಲಿನ ಉಡುಪುಗಳು ದಾರಿಹೋಕರನ್ನು ಅವರ ಕಡೆ ತಿರುಗಿ ನೋಡುವಂತೆ ಮಾಡುತ್ತಿದ್ದವು. ಇನ್ನೊಬ್ಬ ಹುಡುಗಿ ಮುಕ್ಕಾಲು ಉದ್ದದ ಪ್ಯಾಂಟ್ ತೊಟ್ಟಿದ್ದಳು. ಆದಷ್ಟು ಸೊಂಟ ಹಾಗು ಹೊಕ್ಕಳಿನ ಭಾಗದ ಹೊಟ್ಟೆ ಕಾಣುವಂತೆ ಇತ್ತು ಆ ಹುಡುಗಿಯರ ವಸ್ತ್ರವಿನ್ಯಾಸ. ರಸ್ತೆಯ ಮಧ್ಯ ಇರುವ ಮೆಟ್ಟಿಲ ಮೇಲೆ ಕುಳಿತ ಅವರನ್ನ ದಿಟ್ಟಿಸಿ ನೋಡದೇ ಹೋದವರಿಲ್ಲ.
ಇನ್ನು ಯೌವ್ವನದ ಹೊಸ್ತಿಲಲ್ಲಿರುವ ಆ ಯುವಕರು ಹರಟುವ ವಿಷಯ ಕೇಳಿ ನನ್ನ ಮೈ ಬೆಚ್ಚಿತು. ಹಾಗೆ ನೋಡುತ್ತ, ಕೇಳುತ್ತ ಅಲ್ಲೇ ಕುಳಿತೆ. ನೀರಿನಲ್ಲಿ ಆಟವಾಡಿ ನೇರವಾಗಿ ಅಲ್ಲಿಗೆ ಬಂದು ಕುಳಿತಿದ್ದೆ. ಅಂಗಿ ಉಟ್ಟಿರಲಿಲ್ಲ. ಅರೆಬೆತ್ತಲೆಯ ಮೈಯಲ್ಲಿ ನೀರಿಳಿಯುತ್ತಿತ್ತು. ದೂರದಲ್ಲಿ ದ್ವನಿವರ್ದಕಗಳು ಕಿರಚಿಕೊಳ್ಳುತ್ತಿದ್ದವು. ಸೆಕ್ಸ್, ಅವರು ಹರಟಲು ಆರಿಸಿಕೊಂಡ ವಿಷಯ. ಅಲ್ಲಿದ್ದ ಹುಡುಗಿಯರೂ ಸಹ ಅದರಲ್ಲಿ ಭಾಗಿಯಾಗಿದ್ದರು. ನಾಲ್ಕು ಹುಡುಗಿಯರಲ್ಲಿ ಒಬ್ಬಳು ತೀರಾ ಎಳೆವಯಸ್ಸಿನವಳು ಎನ್ನುವಂತೆ ಅವಳ ಮುಖದಲ್ಲಿ ಕಾಣಿಸುತ್ತಿತ್ತು. ಎದೆಯ ಮೇಲೆ ಅವಳ ಹೆಣ್ಣುತನ ಆಗತಾನೆ ಚಿಗಿಯುತ್ತಿತ್ತು. ಆದರೆ ಅವಳ ಚಟುವಟಿಕೆ ನೋಡಿ ನನ್ನ ಮನಸ್ಸು ಬೆಚ್ಚಿತು. ಅಂಜಿತು.
ಹುಡುಗರೆಲ್ಲರೂ ಫೋಸ್ಟರ್ ಬಿಯರ್ ಟಿನ್ ಹಿಡಿದು ಹೀರುತ್ತಿದ್ದರು. ಮಧ್ಯಾಹ್ನ ೧.೩೦ ರ ಸಮಯ. ವಸಂತ ಮಾಸದ ತೀಕ್ಷ್ಣ ಬಿಸಿಲು. ಮುಂಬೈಯ ಸೆಕೆ ಮೈಯಲ್ಲಿ ಬೆವರೂರಿಸುತ್ತಿತ್ತು. ಆದರೂ ಅವರೆಲ್ಲರು ಬೀಯರ್ ಹೀರುವ ಆತುರ ಸಡಗರದಲ್ಲಿದ್ದರು. ನಿಂತಲ್ಲೇ ಕುಣಿಯುತ್ತಿದ್ದರು, ವಿಚಿತ್ರವಾಗಿ ಓಲಾಡುತ್ತ ಮೋಜಿನ ಗುಂಗಿನಲ್ಲಿದ್ದರು. ಮುಕ್ಕಾಲು ಉದ್ದದ ಫ್ಯಾಂಟ್ ಹುಟ್ಟಿದ್ದ ಹುಡುಗಿ ಹುಡುಗನ ಕೈಯಲ್ಲಿದ್ದ ಬೀಯರ್ ಟಿನ್ನನ್ನು ಕಸಿದುಕೊಂಡು ಹೀರತೊಡಗಿದಳು. ಕ್ಷಣದಲ್ಲಿ ಹೀರಿ ಖಾಲಿಮಾಡಿ ಮುಗಿಸಿದಳು. ಅದಾದ ನಂತರ ಇನ್ನೊಬ್ಬನ ಹತ್ತಿರ ಹೋದಳು. ಅವನು ಕೊಡುವುದಿಲ್ಲ ಎಂದು ಕೊಸರಿದರೂ ಬಿಡದೆ ಅವನ ಬೆನ್ನಮೇಲೆ ಅಡರಿ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡು ಅವನು ಬೀಯರ್ ಹೀರಲು ಅನುವಾಗದಂತೆ ಅಡ್ಡಿಯಾದಳು. ಅವನ ಕಿವಿಗೆ ಬಾಯಿಯಿಂದ ಕಚ್ಚಿದಳು. ಬೆನ್ನಿಗೆ ಎರಡು ಗುದ್ದಿದಳು. ಕೊನೆಗೆ ಅವನೇ ಸೋತು ಟಿನ್ ಅವಳ ಕೈಗಿಟ್ಟು ಕುಳಿತನು. ಎವೆ ಮುಚ್ಚಿ ತೆಗೆಯುವುದರೊಳಗಾಗಿ ಅವಳು ಟಿನ್ನಲ್ಲಿದ್ದ ಬೀಯರನ್ನೆಲ್ಲಾ ಹೀರಿಬಿಟ್ಟಳು.
ಮೆಟ್ಟಿಲ ಮೇಲೆ ಕೊನೆಯಲ್ಲಿ ಕೂತಿದ್ದ ಒಬ್ಬ ದಡಿಯ ಹುಡುಗ ಅಲ್ಲಿದ್ದವರಲ್ಲೆಲ್ಲಾ ದಪ್ಪ ಅವನೆ. ಬಿಯರ್ ಹೀರುತ್ತ ಜೊತೆಗೆ ಗತ್ತಿನಿಂದ ಗೇಣುದ್ದ ಸಿಗರೇಟ್ ಹಿಡಿದು ಸೇದುತ್ತಿದ್ದ. ಇದ್ದ ಇಪ್ಪತ್ತೆರಡು ಹುಡುಗರಲ್ಲಿ ಹತ್ತರಿಂದ ಹನ್ನೆರಡು ಹುಡುಗರ ಕೈಯಲ್ಲಿ ಸಿಗರೇಟ್ ಇದ್ದವು. ಸುತ್ತೆಲ್ಲ ಮುಸುಕುವಷ್ಟು ಧೂಮ ಹೊರಬರುತ್ತಿತ್ತು. ಅದೇ ಹುಡುಗಿ, ಕೆಂಪು ಬಣ್ಣದ ಎಳೆ ಕೆನ್ನೆಗಳು, ನೋಡಿದರೆ ಅಯ್ಯೋ ಅನ್ನಿಸುತ್ತಿತ್ತು. ನಾನು ಅವಳ ಎಲ್ಲಾ ಚಟುವಟಿಕೆಗಳನ್ನ ತೀಕ್ಷ್ಣಿಸಿ ನೋಡತೊಡಗಿದೆ. ದಾರಿ ಹೋಕರಿಗೆ ನಾನು ಅವಳನ್ನ 'ಕಾಮಾತುರದಲ್ಲಿ' ನೋಡುತ್ತಿರುವೆನೇನೋ ಅನ್ನಿಸುವಷ್ಟು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದೆ.
ಮತ್ತೇ ಅವಳು ಇನ್ನೊಬ್ಬ ಹುಡುಗನ ಹತ್ತಿರ ಹೋಗಿ ಬೀಯರ್ ಕೊಡಲು ಅಂಗಲಾಚಿದಳು. ಅವನು ಕೊಡದೆ ದೂರ ಸರಿದ. ಆದರು ಅವಳು ಬಿಡಲಿಲ್ಲ. ಎದುರಿಗೆ ನಿಂತು ಅಪ್ಪಯ್ಯ ದಮ್ಮಯ್ಯ ಎಂದು ಅಂಗಲಾಚಿದರು ಅವನು ಕೊಡಲಿಲ್ಲ. ಹೆಣ್ಣು ಹುಡುಗಿ ಕೊಡಬಾರದು ಅಂತನೊ ಅಥವ ವ್ಯಸನಿಯಾಗಿದ್ದ ಅವಳನ್ನು ಗೋಳೈಯಿಸಿಕೊಳ್ಳ ಬೇಕಂತನೊ ಒಟ್ಟಿನಲ್ಲಿ ಅವನು ಅವಳನ್ನ ಸತಾಯಿಸುತ್ತಿದ್ದುದರ ಉದ್ದೇಶ ನನಗೆ ಅರ್ಥವಾಗಲಿಲ್ಲ. ಹಠಮಾರಿ ಸ್ವಭಾವವೋ ಅಥವ ಅಂಟಿದ ವ್ಯಸನವೋ ಅವಳು ಬಿಡದೆ ಬೀಯರ್ ಕೊಡುವಂತೆ ಅವನನ್ನ ಕಾಡತೊಡಗಿದಳು. ಅವನನ್ನ ಹಿಡಿದು ಬಿಗಿದಪ್ಪಿದಳು, ಕೂದಲಿಡಿದು ಹಿಗ್ಗಿದಳು. ಮುಖವನ್ನು ಕಚ್ಚಿದಳು ಕೆನ್ನೆಗೆ ಮುತ್ತಿಟ್ಟಳು. ಕೊನೆಗೆ ಅವನ ಕುತ್ತಿಗೆಯ ಸುತ್ತ ಕೈ ಬಳಸಿ ಹಿಡಿದು ಅವನ ಸೊಂಟದ ಸುತ್ತ ಕಾಲಾಕಿ ಅವನಿಗೆ ಜೋತು ಬಿದ್ದಳು.
ನಾನು ಬೆಚ್ಚಿದೆ, ನೆಟ್ಟ ನೋಟ ಬೆದರಿತು, ಸಣ್ಣಗೆ ಎದೆ ಝಲ್ ಎಂದಿತು. ಚಕ್ಕಲುಮಕ್ಕಲು ಹಾಕಿ ಕುಳಿತಿದ್ದ ನಾನು ಕಾಲು ಬಿಚ್ಚಿ ಕುಳಿತೆ. ಅವಳ ಆಟ ನೋಡಿ ಮನಸ್ಸು ಮುದುಡಿತು. ಬಿಯರ್ ಟಿನ್ ಕಸಿದುಕೊಂಡು ಗಟಗಟನೆ ಕುಡಿದಳು. ನಂತರ ಅಲ್ಲಿಂದ ಓಡಿಬಂದು ದಡಿಯನ ರಾಶಿಗೆ ಸೇರಿದಳು. ಸಿಗರೇಟ್ ಕೊಡಲು ಒತ್ತಾಯಿಸಿದಳು. ಅವನು ಸಹ ಕೊಡದೆ ಸತಾಯಿಸ ತೊಡಗಿದ. ಅವನತ್ತಿರನೂ ಕೊಸರಾಟದಲ್ಲಿ ತೊಡಗಿದಳು. ಅವರಿಬ್ಬರ ಕೊಸರಾಟದಲ್ಲಿ ಸಿಗರೇಟ್ ತುಂಡಾಯಿತು. ದಡಿಯ ಮತ್ತೊಂದು ಸಿಗರೇಟ್ ಹೊರತೆಗೆದ ಮತ್ತೇ ಅವಳು ಅವನ ಹಿಂದೆ ಬಿದ್ದಳು. ತಾನೇ ಹೊತ್ತಿಸುವುದಾಗಿ ಹಠಹಿಡಿದಳು ಲೈಟರ್ ಕಿತ್ತುಕೊಂಡು ಸಿಗರೇಟ್ ಹೊತ್ತಿಸಲು ಸಿದ್ದಳಾದಳು. ಅವನು ಸಿಗರೇಟ್ ತುಟಿಯಲ್ಲಿ ಕಚ್ಚಿ ಹಿಡಿದ. ಅವಳು ಲೈಟರ್ ಹೊತ್ತಿಸಿ ಸಿಗರೇಟಿಗೆ ಅಗ್ನಿ ಸ್ಪರ್ಶ ಮಾಡಿದಳು. ಅವನು ಒಂದೆರಡು ಉಸುರು ಹೀರಿ ಎಳೆದು ಅವಳಿಗೆ ಕೊಟ್ಟ. ಸಿಗರೇಟ್ ಸಿಕ್ಕ ಅವಳು ಹಿಂದೆ ದೂರ ಸರಿದಳು. ಒಂದೇ ಉಸುರಿನಲ್ಲಿ ಅರ್ದ ಸಿಗರೇಟ್ ಮುಗಿಯುವಂತೆ ಹೀರಿದಳು. ಅವನು ಕೇಳಿದರೂ ಕೊಡದೆ ದೂರ ದೂರ ಸರಿಯುತ್ತಿದ್ದಳು. ಅವಳ ಹೊಗೆ ಹೀರುವ ಭಾವಭಂಗಿ ನನ್ನ ತಬ್ಬಿಬ್ಬಾಗುವಂತೆ ಮಾಡಿತು. ಅವನು ಅವಳಿಂದ ಸಿಗರೇಟ್ ಮರಳಿ ಕಿತ್ತುಕೊಳ್ಳಲು ಹರ ಸಾಹಸ ಮಾಡಬೇಕಾಯಿತು. ಕೊನೆಗೆ ಅವಳಿಂದ ಕಿತ್ತುಕೊಳ್ಳುವಲ್ಲಿ ಜಯಶಾಲಿಯಾದ.
ಅವಳು ಮರಳಿ ಇನ್ನೊಬ್ಬನ ಹತ್ತಿರ ಹೊರಟಳು. ಅವನೂ ಸಹ ಅವಳಿಗೆ ಸಿಗರೇಟ್ ಕೊಡಲು ಮೀನಾಮೇಷ ಎಣಿಸತೊಡಗಿದ. ಬಿಡದ ಬೇತಾಳನಂತೆ ಅವನ ಬೆನ್ನತ್ತಿದಳು. ಈ ಬಾರಿಯ ಅವಳ ಆಟ ತಾರಕಕ್ಕೇರಿತ್ತು. ಅವನ ಅಂಗಿಯ ಗುಂಡಿ ಬಿಚ್ಚಿ ಅಂಗಿ ಕಿತ್ತೆಗೆದಳು. ಕೊಡದ ಅವನ ಮೈಮೇಲೆ ಬಿದ್ದಳು, ಅಟ್ಟಿಸಿಕೊಂಡು ಹೋದಳು. ಅವನ ಸೊಂಟದ ಸುತ್ತ ಕಾಲುಗಳನ್ನ ಸುತ್ತುಹಾಕಿ ಅವನ ದೇಹಕ್ಕೆ ಜೋತುಬಿದ್ದಳು. ಅಲ್ಲೇ ಜೋಲಿ ಹೊಡೆಯುತ್ತ ಸಿಗರೇಟ್ ಕಿತ್ತುಕೊಂಡು ಹೊಗೆ ಎಳೆದುಕೊಳ್ಳತೊಡಗಿದಳು. ಹೀರಿದ ಹೊಗೆಯನ್ನ ಅವನ ಮುಖದ ಮೇಲೆ ಊದಿದಳು. ಜೋಲಿ ಹೊಡೆಯುತ್ತ ಜೋತುಬಿದ್ದ ಅವಳನ್ನ ಬಿಗಿಯಾಗಿ ಹಿಡಿದುಕೊಂಡು ಸಾವರಿಸಿಕೊಳ್ಳುತ್ತ ನನ್ನ ಎದುರಿಗಿದ್ದ ಕಟ್ಟೆಯ ಮೇಲೆ ಕೂತ. ಸಿಗರೇಟ್ ತುದಿಯಲ್ಲಿದ್ದ ಬೂದಿಯನ್ನು ಅಲ್ಲೇ ಪಕ್ಕದಲ್ಲಿ ಕೂತಿದ್ದ ತನ್ನೊಬ್ಬ ಗುಂಪಿನವನ ನೆತ್ತಿಯ ಮೇಲೆ ಕೊಡವಿ ಕೆಡುವತೊಡಗಿದಳು. ಅವಳು ಸಿಗರೇಟ್ ಸೇದುವ ಗತ್ತು ಎಂತಹುದು! ಅವಳನ್ನ ಆವರಿಸಿದ ಉನ್ಮಾದ ಎಂತಹುದು! ಎಷ್ಟು ಬೀಯರ್ ಹಿರಿದಳು! ಎಷ್ಟೂ ಸಿಗರೇಟ್ ಹೊಗೆ ಸೇದಿದಳು! ಅಬ್ಬಾ.! ನೆಟ್ಟ ನೋಟದಲ್ಲಿ, ಯಾವುದೋ ಅಗೋಚರ ಆತಂಕದಲ್ಲಿ ನೋಡುತ್ತಲೇ ಇದ್ದೆ. ಒಮ್ಮೆ ದಿಗಿಲೆನಿಸಿತು.
ಇನ್ನೂ ಬೆಳೆಯುತ್ತಿರುವ ದೇಹ, ಹೆಣ್ಣುತನ ಚಿಗುರೊಡೆಯುವ ವಯಸ್ಸು. ಏನಾಗಬಹುದು ಅವಳ ಭವಿಷ್ಯದ ಬದುಕು. ಯಾಕೆ ಈ ಉದ್ದಟತನ? ಯಾವ ಸಂಸ್ಕಾರದ ಫಲವಿದು? ಯಾವ ಅಭಿವೃದ್ದಿ ಇದು? ಹದಿನೈದು ಹದಿನಾರರ ಹೊಸ್ತಿಲಲ್ಲಿರುವ ಈ ಹೆಣ್ಣಿನ ಜೀವನ ಇದೆ ದಾರಿಯಲ್ಲಿ ಸಾಗಿದರೆ ಅವಳ ಮುಂದಿನ ಬದುಕಿನ ಚಿಂತೆ ನನ್ನ ಕಾಡತೊಡಗಿತು.
ಮೂರು ಹುಡುಗಿಯರು ಆ ಕಡೆಯಿಂದ ನಡೆದು ಬರುತ್ತಿದ್ದರು. ಅದರಲ್ಲಿ ಒಬ್ಬಳು ಈಜು ಉಡುಗೆ ಉಟ್ಟಿದ್ದಳು. ದೇಹದ ಮುಕ್ಕಾಲು ಬಾಗ ಕಾಣಿಸುವಂತಹ ಆ ಉಡುಗೆಯ ಅಳತೆ. ಅದನ್ನು ನೋಡಿದ ಗುಂಪಿನ ಒಬ್ಬ ಹುಡುಗ ನನ್ನ "ಮರ್ಮ ಬಿಸಿ ಏರತೊಡಗಿತೋ ಅವಳ ಮೈಮಾಟನೋಡಿ" ಎಂದು ಹಿಂದಿಯಲ್ಲಿ ಎಲ್ಲರಿಗು ಕೇಳಿಸುವಂತೆ ಕೂಗಿದ. ಬೀಯರ್ ಹೀರಿ ಕೊಂಚ ಮತ್ತೇರಿದ್ದ ಆ ಎಳೆ ಕಣ್ಣುಗಳ ಬಾಲೆ ಚಪ್ಪಾಳೆ ತಟ್ಟುತ್ತ ಕುಣಿದು ಕುಪ್ಪಳಿಸತೊಡಗಿದಳು. ಅವಳು ಹೆಣ್ಣು ಅನ್ನುವುದನ್ನು ಮರೆತು ಇನ್ನೇನನ್ನೋ ಅಲ್ಲಿ ಈಜುಡುಗೆಯಲ್ಲಿ ನಡೆದು ಹೋಗುತ್ತಿದ್ದವಳ ಮೇಲೆ ಹೇಳುತ್ತಿದ್ದಳು. ಅವನ ಜೊತೆ ಸೇರಿಕೊಂಡು ಅಸಹ್ಯವಾಗುವಂತ ಮಾತುಗಳಿಂದ ಕೊಂಕು ಮಾಡುತ್ತಿದ್ದಳು.
ಆಧುನಿಕ ಬದುಕಿನ ಅಟ್ಟಹಾಸದ ಬಗ್ಗೆ ಕೇಳಿದ್ದೆ, ಸಿನಿಮಾ ಪ್ರಪಂಚದಲ್ಲಿ ವೀಕ್ಷಿಸಿದ್ದೆ, ಪುಸ್ತಕಗಳಲ್ಲಿ ಓದಿದ್ದೆ. ಅದರ ನೇರ ಅನುಭವವಿರಲಿಲ್ಲ. ಆದರೆ ಇವತ್ತು ಅಂತಹ ಘಟನೆಯ ನೋಡಿದ ಮನಸ್ಸು ವಿಚಿತ್ರವಾದ ತೊಳಲಾಟದಲ್ಲಿ ಯಾವುದೋ ದೀನ ಭಾವದಲ್ಲಿ ಏನೇನೋ ಪ್ರಶ್ನೆಗಳನ್ನ ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತ, ತನ್ನಷ್ಟಕ್ಕೆ ತಾನೇ ಉತ್ತರ ಹುಡುಕುತ್ತಿತ್ತು. ಆ ಎಳೆ ಹುಡುಗಿಯ ಮುಂದಿನ ಬದುಕಿನ ಬಗ್ಗೆ ನೆನೆದು ಮರುಗಿತು. ಅವಳ ತಂದೆ ತಾಯಿಯರಿಗಾದರು ಮಕ್ಕಳ ಬಗ್ಗೆ ಕೊಂಚ ಕಾಳಜಿ ಬೇಡವೇ? ಕಳವಳಿಸುತ್ತ ಮನಸ್ಸು ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿತ್ತು, ಯಾರ ತಪ್ಪು ಇದು? ಇದರ ಪರಿಣಾಮವೇನು? ಇದೇನಾ ಆಧುನಿಕ ಜಗತ್ತು? ಇದೇನ ನಮ್ಮ ಮುಂದುವರಿದ ಬದುಕು? ಇದೇನಾ ನಮ್ಮ ಶಿಕ್ಷಣದ ಸಾಧನೆ? ಯಾವ ಸಂಸ್ಕಾರದ ಮರದಲ್ಲಿ ಅರಳಿದ ಹೂ ಗೊಂಚಲಿದು? ಇದರ ಫಲ ಹೇಗಿರಬಹುದು? ಹೀಗೆ ವಿಚಿತ್ರ ಯಾತನೆಯಲ್ಲಿ ಅವಳನ್ನ ನೆಟ್ಟ ದೃಷ್ಟಿಯಲ್ಲಿ ನೊಡುತ್ತಲೇ ಇದ್ದೆ.
ಆಟಗಳೆನ್ನೆಲ್ಲಾ ಮುಗಿಸಿಕೊಂಡು ಆಕಡೆಯಿಂದ ಗೆಳೆಯರಾದ ಅನಿಲ್ ಹಾಗು ಪ್ರಶಾಂತ್ ಬಂದು ನನ್ನ ಕಡೆ ನೋಡಿ "ಏನು ಸ್ವಾಮಿಗಳೆ ತುಳಿಸಿ ಮಾಲೆ, ರುದ್ರಾಕ್ಷಿ ಧರಿಸಿಕೊಂಡು ತಪಸ್ಸು ಮಾಡುತ್ತಿದ್ದಿರೋ ಅಥವ ಇನ್ನೇನನ್ನಾದರು" . . . ಎಂದಾಗ ನನ್ನ ನೋಟ ಅವಳ ಕಡೆಯಿಂದ ವಿಚಲಿತವಾಯಿತು. ಆ ಜಾಗ ಬಿಟ್ಟು ಎಲ್ಲರು ಹೊರಟೆವು. ಸ್ವಲ್ಪ ಮುಂದೆ ಹೋದ ನಂತರ ತಡೆಯಲಾರದೆ ಒಮ್ಮೆ ಹಿಂತಿರುಗಿ ಅವಳಕಡೆ ನೋಡಿದ ನನ್ನ ಮನಸ್ಸಿನಲ್ಲಿ ಮತ್ತೇ ಅದೇ ಪ್ರಶ್ನೆ ಮೂಡಿತು, ಅವಳ ಮುಂದಿನ ಬದುಕು?
** ಕುಕೂ...
೧೪/೦೪/೦೮
ಪುಣೆ.
ಓ.! ದೇವರೆ,ಯಾಕೆ ನನಗೆ ಈ ಶಿಕ್ಷೆ? ಒಂದು ಕಡೆ ಬಿಡಲಾರದ ಸ್ನೇಹ ಸಂಬಂಧದ ಬೆಸುಗೆ. ಬಿಟ್ಟೆನೆಂದರು ಅಲ್ಲೇ ಸುತ್ತಿ ಸುತ್ತಿ ಸಾಯುವ ಮನಸ್ಸು. ಇನ್ನೊಂದು ಕಡೆ ಸೇಡಿನ ಸೆಲೆ. ದ್ವೇಶದ ಜ್ವಾಲೆ, ನೋವಿನ ನುಡಿ.ಅಸಯ್ಯ ಪಡುವ ಸಿಡುಕು.ಅಪನಂಬಿಕೆ. ಯಾಕೆ ಈ ಪರೀಕ್ಷೇ?ಕೇಡಿಲ್ಲ ನನ್ನ ಮನದಲ್ಲಿ. ಹುಟ್ಟಿಸಿದೆ ಪ್ರೀತಿ.ಬಿಟ್ಟು ಬಿಡದೆ ಬೆಳಸಿದೆ ಸ್ನೇಹ, ಈಗ ಬಿಟ್ಟುಬಿಡು ಎಂದರೆ ಹೇಗೆ ಬಿಡಲಿ?ಯಾವ ಪಾಪಕ್ಕೆ ಈ ಶಿಕ್ಷೆ? ನಾನೆಂದರೆ ಅವಳಿಗೆ ಕಿರುಕುಳ, turture, ಅಸಯ್ಯ.
ನಾಬಯಸುತ್ತಿರುವುದು ಅವಳ ಸ್ನೇಹ. ಒಲವು, ಅವಳ ಗೆಲುವು, ಅವಳ ನಗು,ಅವಳ ಖುಷಿ ಆದರು ನಾನೆಂದರೆ ಯಾಕೆ ಈ ಮುನಿಸು ಅವಳಲ್ಲಿ ??? ಯಾಕೆ ಈ ದ್ವೇಷ? ಯಾಕೆ ಈ ದ್ವೇಶ ದೇವರೆ..ಸಾವಿರ ಜನರಲ್ಲಿ ಸ್ನೇಹ ಗಳಿಸಿದೆ, ನಂಬಿಕೆಯ ಕೋಟೆ ಕಟ್ಟಿದೆ. ಅವಳಲ್ಲಿ ಯಾಕೆ ನಂಬಿಕೆ ಕಳೆದುಕೊಂಡು ಅಡವಿ ಪಾಲಾದೆ? ಎಲ್ಲರಗಿಂತ ಹೆಚ್ಚಿಗೆ ನಂಬಿಕೆಯನ್ನ ಅವಳ ಜೊತೆ ಉಳಿಸಿಕೊಂಡು ಹೋಗುವ ನನ್ನ ಸ್ವಾರ್ಥಕ್ಕೇನು ಈ ಶಿಕ್ಷೆ??
ಯಾಕೆ ಅವಳಿಗೆ ನೊವುತಂದಿಟ್ಟೆ? ಯಾಕೆ ಅವಳಿಗೆ ಅವಮಾನವಾಗುವಂತೆ ಮಾಡಿದೆ? ಯಾಕೆ ಅವಳಿಗೆ ಕಷ್ಟದ ಸುಳಿಯಲ್ಲಿ ನೂಕಿದೆ? ನಾನೆಂದಾದರು ಅವಳಿಗೆ ಕೇಡು ಬಯಸಿದೆನೇ? ನಾನೇಂದಾದರು ನಂಬಿಕೆ ದ್ರೋಹ ಮಾಡಿದೆನೇ??? ಯಾಕೆ ಅವಳ ಜೊತೆ ಸುಳ್ಳು ಹೇಳುವ ನಾಟಕವಾಡಿಸಿದೆ? ನನ್ನನ್ನು ಸುಳ್ಳು ಹೇಳುವ ಪಾತ್ರದಾರಿ ಮಾಡಿದ್ದು ಅವಳ ಒಳಿತಿಗಾಗಿ ತಾನೆ? ಆ ನಂಬಿಕೆ ನನ್ನಲ್ಲಿ ಹುಟ್ಟುಹಾಕಿದ್ದು ಯಾಕೆ? ಸುಳ್ಳು ಹೇಳಿಸಿದ್ದು ಅವಳಿಗೆ ಒದಗಬಹುದಾದ ದುಃಖ ತಪ್ಪಿಸಲೆಂದು ತಾನೆ! ಮತ್ಯಾಯಾಕೆ ನನ್ನ ಹೆಸರಲ್ಲೇ ಅವಳಿಗೆ ದುಃಖವಾಗುವಂತೆ ಮಾಡಿದೆ? ಯಾಕೆ ಅವಳಿಗೆ ನನ್ನಿಂದ ಸಹಾಯ ಮಾಡಿಸಿದೆ? ಯಾಕೆ ಅವಳಿಗೆ ದುಃಖವಾದರೆ ಸಹಿಸದವನ್ನಾಗಿ ಮಾಡಿರುವೆ? ಯಾಕೆ ಅವಳ ಅಳುನೋಡಿ ನನ್ನನ್ನೂ ಅಳುವಂತೆ ಮಾಡಿದೆ? ಯಾಕೆ ಅವಳೆಂದರೆ ಅನುರಾಗ ಉಕ್ಕುವಂತೆ ಮಾಡುತ್ತಿರುವೆ? ಯಾಕೆ ನನ್ನ ಮಾತುಗಳೆಂದರೆ ಅವಳಿಗೆ ನಾಟಕಿಯವಾಗಿ ತೋರುತ್ತಿವೆ ಸುಳ್ಳಾಗಿ ಯಾಕೆ ತೋರುತ್ತಿವೆ, ಸಹಿಸದಾಗುತ್ತಿವೆ? ಯಾರ ಒಳಿತಿಗಾಗಿ ನನ್ನನ್ನು ಸುಳ್ಳೇಳುವ ಪಾತ್ರದಾರಿಯನ್ನಾಗಿಸಿದೆ? ಯಾವ ಸಾರ್ಥಕಕ್ಕೆ? ಯಾಕೆ ನನ್ನಿಂದ ಸ್ವಾಭಿಮಾನ ಹೊತ್ತೆ ಇಟ್ಟು ಸುಳ್ಳು ಹೇಳುವ ಹಾಗೆ ಮಾಡಿದೆ? ಯಾವ ಉದ್ದೇಶಕ್ಕೆ?
ಯಾಕೆ ಯಾವುದೋ ಅಗೋಚರ ಅಸ್ಪಷ್ಟ ನಂಬಿಕೆಯ ಮೇಲೆ ನಂಬಿಕೆ ಇಡುವಂತೆ ಮಾಡಿದೆ? ಯಾಕೇ ಅದೇ ನಂಬಿಕೆಯ ಮೇಲೆ ಸುಳ್ಳೇಳುವಂತೆ ಮಾಡಿದೆ? ನಾಮಾಡುವ ಸಹಾಯಕ್ಕೆ ಮೋಹವನ್ನೇಕೆ ಮೆತ್ತುತ್ತಿರುವೆ ದೇವರೇ? ಯಾಕೆ ಅವಳು ಬೇಡವೆಂದರು ನನ್ನ ಮನಸ್ಸು ಅವಳಲ್ಲಿ ಸ್ನೇಹ ಅರಸುತಿದೆ? ಯಾಕೆ ಅವಳೆಂದರೆ ಬಣ್ಣದ ಕನಸು ಕಟ್ಟುವೆ? ಯಾಕೆ ಅವಳಿಗೆ ನಾನೆಂದರೆ ಮುಳ್ಳಿನ ಬಲೆ ಯಾಗುತಿದೆ? ಯಾಕೆ ನಾನೆಂದರೆ ಅವಳಿಗೆ ನೋವಾಗಿ ಬಿಡುವೆ? ಯಾಕೆ ಅವಳಿಗೆ ನನ್ನ ನೆನಪು ಕಹಿಯಾಗುತಿದೆ? ಯಾಕೆ ಅವಳ ನೆನಪೆಂದರೆ ನನಗೆ ಸಿಹಿಯಾಗಿದೆ?ಯಾಕೆ ಯಾಕೆ ಯಾಕೆ ಯಾಕೆ ಯಾಕೆ ????????
ಅಯ್ಯೋ !!!! ಓ ದೇವರೆ ಈ ಹುಚ್ಚು ನನಗೇಕೆ? ಅವಳ ಮಾತು ಕೇಳುವ ಹಂಬಲ ನನಗೇಕೆ? ಅವಳ ಜೊತೆ ಮತ್ತೇ ಸ್ನೇಹ ಬೆಳಸುವ ಆಸೆ ಉಕ್ಕುತ್ತಿದೆ ಯಾಕೆ? ಅವಳ ಬೇಕುಗಳೆನ್ನೆಲ್ಲ ನಾನೇ ಈಡೇರಿಸುವ ಕೆಚ್ಚು ನನಗೇಕೆ? ಬೇಡವೆಂದರು ಅವಳಿಗೆ ನೆರವಾಗುವ ಬಯಕೆಯ ಜ್ವಾಲೆ ನನ್ನ ದಹಿಸುತ್ತಿದೆಯಾಕೆ? ದೂರದೂಡಿದಷ್ಟು ಅವಳ ನೆನಪು ಅಡರಿ ಹಬ್ಬಿ ನನ್ನ ಮುಚ್ಚುತ್ತಿವೆ ಯಾಕೆ? ಅವಳಿಗಾಗಿ ಈ ಪ್ರಾಣವನ್ನೂ ಕೊಟ್ಟುಬಿಡುವ ಭಾವವೇಕೆ? ಸೇಡಿನ ಕಿಚ್ಚು ಅವಳಿಗ್ಯಾಕೆ? ನನ್ನ ದೂರವಿಡುವ ಇಚ್ಚೆ ಏರಿಬರುತಿದೆಯಾಕೆ?
ನಾನು ಅರಸುತ್ತಿರುವುದು ಅವಳ ಸ್ನೇಹ, ಅವಳ ಸನಿಹ, ಅವಳ ಜೊತೆಗಿನ ನಂಬಿಕೆ, ಅವಳ ಪ್ರೀತಿಯ ಸೊಲ್ಲು. ನನ್ನಿಂದ ಅವಳಿಗೆಂದು ಕೇಡು ಬಯಸಿಲ್ಲ ಬಯಸುತ್ತಿಲ್ಲ, ಆದರು ಯಾಕೆ ಅವಳಿಗೆ ಕೇಡಾಗಿ ಕಾಣಿಸುತ್ತಿದೆ? ದುಃಖವನ್ನು ನಾನೆಂದು ಅವಳಿಂದ ನೋಡಬಯಸಿಲ್ಲ, ಅವಳ ಬದುಕಿನಲಿ ನನ್ನ ಹೆಸರಲ್ಲೇ ದುಃಖ ತುಂಬಿ ಬರುತ್ತಿದೆ ಯಾಕೆ? ನಾನು ಕ್ರೂರಿಯಲ್ಲ. ಅವಳೊಂದಿಗೆಂದೂ ನಾನು ಕ್ರೂರವಾಗಿ ನಡೆದುಕೊಂಡಿಲ್ಲ ಯಾಕೆ ನಾನು ಅವಳಿಗೆ ಹಿಂಸೆ ಕೊಡುವ ಕ್ರೂರಿಯಾಗಿ ಕಾಣುವೆ? ಅಯ್ಯೋ ನಾನು ಕ್ರೂರಿಯಲ್ಲ ಕಣೆ. ಯಾಕೆ ನನ್ನ ಒಲವ ಸುಮ ದುಃಖದಿಂದ ನರಳುವಹಾಗೆ ಮಾಡುತ್ತಿರುವೆ? ನಾನೆಷ್ಟು ಅವಳ ಒಳಿತನ್ನು ಬಯಸಿದೆ? ಆದರೆ ನನ್ನಲ್ಲೇ ಯಾಕೆ ಅವಳ ಮನಸ್ಸು ಕೆಡುಕು ಕಾಣುತ್ತಿದೆ?
ಓ..! ದೇವರೆ ನಾನು ಅದೇ ಭಾವತುಂಬಿ ಕೊಂಡವನು.ಅಂದಿನಿಂದಲೂ ಇಂದಿಗೂ ಅದೇ ಭಾವವೇಷವಿರುವವನು. ಅದೇ ಮನೋಭಾವದಿಂದ ಬದುಕು ನಡೆಸುತ್ತಿರುವವನು. ಅದೇ ಮನಸ್ಸು. ಅವಳ ದುಃಖವನ್ನು ಸಹಿಸದವನು. ಅದೇ ಗೆಳತನಕ್ಕಾಗಿ ಹಂಬಲಿಸುತ್ತಿರುವವನು. ಅವಳಿಂದ ನುರಾರು ಮಿಸ್ ಕಾಲ್ ಬರುತಿದ್ದ ಅದೇ ಗೆಳೆಯ ನಾನು. ಅದೇ ಭಾವತುಂಬಿದವನು. ಅವಳ ಜೊತೆ ನೂರಾರು ತಾಸುಗಟ್ಟಲೆ ಫೋನಲ್ಲಿ ಮಾತನಾಡಿದವನು. ಅವಳ ನೆನಪಲ್ಲಿ ಬದುಕನ್ನೇ ಮರೆತವನು. ಅವಳ ನೆನಪಲ್ಲಿ ನೂರಾರು ಕವಿತೆ ಬರೆದವನು. ಕವಿತೆ ಬರೆದು ಮೊದಲು ಅವಳಿಗೆ ಹೇಳುತ್ತಿದ್ದವನು. ಇವತ್ತಿಗೂ ಬರೆದ ಕವಿತೆಯನ್ನ ಮೊದಲು ಅವಳಿಗೆ ಹೇಳುವ ತುಡಿತದಲ್ಲಿರುವವನು. ಅದೇ ಸ್ನೇಹ ಅರಸುತ್ತಿರುವವನು.
ಅವಳ ನೋವು ನಲಿವಲ್ಲಿ ಜೊತೆಗಿದ್ದವನು, ಜೊತೆಗಿರಬಯಸುವವನು. ಅವಳು ಕೇಳದಿದ್ದರೂ ಸಹಾಯ ಮಾಡಿದವನು. ಈಗಲೂ ಅದೇ ಅದಮ್ಯ ಇಚ್ಛೆವುಳ್ಳವನು. ಅವಳ ಜೊತೆ ಕೋಟಿ ಕೋಟಿ ಮಾತುಗಳನ್ನಾಡಿದವನು. ಕೋಟಿ ಕನಸುಗಳನ್ನು ಕಟ್ಟಿದವನು. ಅವಳನ್ನ ನಿಸ್ವಾರ್ಥವಾಗಿ ಪ್ರೀತಿಸಿದವನು. ಅವಳಿಚ್ಚೆಗೆಂದೂ ವಿರುದ್ದವಾಗಿ ನಡೆದುಕೊಳ್ಳಬಾರದೆಂದುಕೊಂಡನು. ಅದೇ ಇಚ್ಛೆ ಇಂದಿಗೂ ಉಳಿಸಿಕೊಂಡು ಬಂದಿರುವವನು.
ಉತ್ತರವಿರಲಾದ ಪ್ರಶ್ನೆಗಳೇನು ಇವು? ನನಗೆ ಉತ್ತರಿಸು ದೇವರೆ? ನಾನೆಂದು ನಿನ್ನಲ್ಲಿ ಏನು ಕೇಳಲಿಲ್ಲ ಅದಕ್ಕೇನು ಈ ಶಿಕ್ಷೆ? ಹೇಳು ಅರಿಯದ ಈ ಪ್ರೆಶ್ನೆಗೆ ಉತ್ತರ. ನನಗೆ ಉತ್ತರ ಹೇಳು. ನನ್ನ ಮನದ ಭಾವವನ್ನು ಅವಳಿಗೆ ಅರ್ಥವಾಗುವ ಹಾಗೆ ಮಾಡು ದೇವರೇ.. ಅವಳೆದೆಯ ದ್ವೇಷ ಹಿಂಗುವಂತೆ ಮಾಡು.
ನಾನೇಗೆ ಇರಲಿ, ನನಗೇನೇ ಕಷ್ಟಬರಲಿ, ನನಗಾಗಿ ನಿನ್ನಲ್ಲಿ ಏನನ್ನು ಬೇಡುವುದಿಲ್ಲ ಅವಳ ಸ್ನೇಹ ಹೊರತಾಗಿ. ಆದರೆ ಅವಳಿಗೆ ದುಃಖವಾಗದ ಹಾಗೆ ನೋಡಿಕೋ ದೇವರೆ. ನಾನು ಅವಳಿಗೆ ಯಾವ ಸಹಾಯಕ್ಕೂ ಸಿದ್ದನಿರುವೆ ಆದರೆ ಅಸಯ್ಯವೆನಿಸಿದ ಮೇಲೆ ಅವಳು ನನ್ನಿಂದ ಸಹಾಯ ಕೇಳಳು. ನೀನೇ ಅವಳಿಗೆ ಸಹಾಯ ಮಾಡು. ನೀನೆ ಅವಳಿಗೆ ದಾರಿ ತೋರಿಸು. ಅವಳಿಗೆಂದು ಕಷ್ಟ ಬರದಹಾಗೆ ನೋಡಿಕೋ. ಬಂದ ಕಷ್ಟಗಳನ್ನ ಮೆಟ್ಟಿಬಿಡುವ ಧೀರೆಯನ್ನಾಗಿಸು. ಅವಳಿಗೆಂದೂ ನೋವಾಗದಾಗೆ ನೊಡಿಕೋ. ಅವಳಿಚ್ಛೆಯನ್ನು ಈಡೇರಿಸುವ ಶಕ್ತಿಕೊಡು. ಅವಮಾನದಿಂದ ನೊಂದಿರುವ ನನ್ನ ಗೆಳತಿಗೆ ಸಾಂತ್ವಾನ ನೀನೇಳು. ಅವಳನ್ನ ನೋವನ್ನು ಸಹಿಸುವ ದಿಟ್ಟೆಯನ್ನಾಗಿ ಮಾಡು.
ಅವಳಿಗೆ ನಾನು ದೂರ ಹೋಗುವುದರಿಂದ ದುಃಖದೂರವಾಗುವುದಾದರೆ ಮತ್ತೆಂದು ನಾನು ಅವಳ ಸನಿಹ ಸುಳಿಯುವುದಿಲ್ಲ. ನನ್ನ ಆಸೆಯನ್ನೆಲ್ಲ ಕೊಂದು ದೂರವಾಗಿಬಿಡುವೆ. ಅಂತಹ ಶಕ್ತಿ ನನಗೆ ಕೊಡು. ನನ್ನ ಪ್ರೀತಿ ನಿಸ್ವಾರ್ಥವಾದದ್ದಾದರೆ ನಾನು ನಿಜವಾಗಲು ಪ್ರೀತಿಸುತಿದ್ದರೆ ಅವಳಿಂದ ದೂರವಾಗುವ ಭಾವ ನನ್ನಲ್ಲಿ ಮೂಡಿಬರಲಿ. ಅವಳಿಗೆ ನನ್ನಿಂದ ದುಃಖವಾಗದೆ ಇರಲಿ. ನನ್ನ ಒಲವ ಸುಮ ನಳನಳಿಸುತ ಅರಳುತ್ತಿರಲಿ ಅದೇ ನನ್ನ ಬಯಕೆ. ಅವಳಿಗಾಗಿರುವ ಅವಮಾನವನ್ನು ಅವಳ ಯಶಸ್ಸಿನಲ್ಲಿ ಕರಗಿಬಿಡುವಂತೆ ಆಶಿರ್ವದಿಸು. ಅವಳು ಮತ್ತೆ ಮೊದಲಿನಂತೆ ಒಳ್ಳೆಯ ಮಾರ್ಕ್ಸ ತೆಗೆದುಕೊಂಡು ಅವಳ ಬದುಕು ಅಸನವಾಗಿರುವಂತೆ ಮಾಡು. ಮತ್ತೆ ಅವಳ ನಗುವು ಹೊಮ್ಮಿ ಬರುವಂತೆ ಮಾಡು. ನಾನು ಬೇರೇನು ಬೇಡೆನು ನಿನ್ನಲ್ಲಿ. ಅವಳ ಯಶಸ್ಸು ನನ್ನ ಬದುಕಿನ ದಾರಿ.
ನೀನು ನನ್ನ ಗೆಳತಿಯನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂಬ ಅದಮ್ಯ ನಂಬಿಕೆಯಲ್ಲಿ ನಾನು ಅವಳ ಜೊತೆಗಿನ ಸ್ನೇಹ, ಒಲವಿನ ಪಯಣಕ್ಕೆ ವಿಧಾಯವಾಡುವೆ. ಎಂದಾದರು ಮತ್ತೆ ಅವಳಿಗೆ ನನ್ನ ಮೇಲೆ ನಂಬಿಕೆ ಬಂದರೆ ಮತ್ತೆ ಆ ಸುಮವನ್ನು ನೋಡುವ ಇಚ್ಛೆಯಲ್ಲಿ ಬದುಕುವೆ. ಅವಳ ನೆನಪನ್ನೇ ನನ್ನ ಬೆಳಕಾಗಿಸಿಕೊಂಡು ಬದುಕನ್ನು ನಡೆಸುವೆ. ಅವಳ ಒಳಿತಿಗೆ ನನ್ನ ಸಹಾಯ ಅಗತ್ಯಬಿದ್ದರೆ ದಯವಿಟ್ಟು ನನಗೇಳು ಅದೇ ನಿಸ್ವಾರ್ಥದಿಂದ ಸಹಾಯ ಮಾಡುವೆ. ನನ್ನ ಗಂಗ ಜಯಶೀಲಳಾಗಿ ಜಯಶ್ರಿಯಾಗಲೆಂದು ನಿನ್ನ ಪ್ರಾರ್ಥಿಸುತ್ತ.
ನಿನ್ನ ಸೃಷ್ಠಿಯ ಒಂದು ಕೊಂಡಿ.