ಬ್ಲಾಗ್ ಲೋಕದಲ್ಲಿ ತಿರಿಗಾಡುತ್ತಿರುವಾಗ ನನಗೊಂದು ಅನುಬವ ಬರಹ ಸಿಕ್ಕಿತು. ಆ ಬರಹಕ್ಕೆ ತಲೆನಾಮ ಕನ್ನಡ ಇಂಬ್ಲೀಚ್ ಬೆರೆಕೆಯಲ್ಲಿ ಈಗೆ ಬರೆಯಲಾಗಿತ್ತು "ನನ್ನ Some ಶೋಧನೆ!!" ಈ ಬರಹ ಓದಿದೊಡನೆಯೇ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಗ ಮಾಡಿದ ಪ್ರಯೋಗದ ನೆನಪು ಬಂತು. ಹೊಸದಾಗಿ ನನ್ನ ಪಕ್ಕದೂರಾದ ಚಿಕ್ಕಜೋಗಿಹಳ್ಳಿಯ ಹಯಸ್ಕೂಲ್ ಶಾಲೆಗೆ ಸೇರಿದ್ದೆ. ದಿನಾಲು ನಾಲ್ಕು ಹರದಾರಿ ನಡೆದು ಮತ್ತೇ ಸಂಜೆ ಅಶ್ಟೇದೂರ ನಡೆದು ಮರಳಿ ಬರುತ್ತಿದ್ದೆವು. ಮನೆಗೆ ಬರುವುದರೊಳಗೆ ಕತ್ತಲು ಕವಿಯುತ್ತಿತ್ತು. ಹೊಸದಾಗಿ ದೊಡ್ಡ ಶಾಲೆಗೆ ಸೇರಿದ ಹುರುಪು. ಹೊಸ ತರಗತಿ, ಹೊಸ ಮಾಸ್ತರು, ಹೊಸ ಊರು ಎಲ್ಲದೂ ಹೊಸದಾಗಿ ಕಾಣುತಿತ್ತು.

ಅಂದಿನ ದಿನಗಳಲ್ಲಿ ಲೆಕ್ಕದ ಜೊತೆ ವಿಗ್ನಾನವೆಂದರೆ ನನಗೆ ಹೆಚ್ಚು ಅಚ್ಚು ಮೆಚ್ಚು. ವಿಗ್ನಾನದ ಪಾಟ ಹೇಳಲು ಬರುತ್ತಿದ್ದ ಜಯಮೂರ್ತಿ ಮಾಸ್ತರು ನನ್ನ ನೆಚ್ಚಿನ ಗುರುಗಳು. ಅವರಿಗೆ ನಾನು ನೆಚ್ಚಿನ ವಿದ್ಯಾರ್ತಿ. ಹಿಂದಿನ ದಿನ ಹೇಳಿಕೊಟ್ಟ ಪಾಟದ ಬಗ್ಗೆ ದಿನಾಲು ಮೊದಲು ಪ್ರಶ್ನೆ ಕೇಳಿ ಮುಂದಿನ ಪಾಟ ಶುರುಮಾಡುತ್ತಿದ್ದರು. ಹುಡುಗರಲ್ಲಿ ಯಾರು ಉತ್ತರ ಹೇಳದಿದ್ದಾಗ ನನ್ನ ಸರದಿ ಬರುತ್ತಿತ್ತು. ಯಾವತ್ತೂ ಜಯಮೂರ್ತಿ ಮಾಸ್ತರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಹೇಳುವುದರಲ್ಲಿ ನಾನು ಸೋತಿರಲಿಲ್ಲ. ಆಗ ಉತ್ತರ ಹೇಳದಿದ್ದ ನನ್ನ ಸಹಪಾಟಿ ಹುಡುಗರಿಗೆ ಮೂಗಿಡಿದು ಕಪಾಳಕ್ಕೆ ಹೊಡೆಯುವ.....

ಒಂದು ದಿನ ಜಯಮೂರ್ತಿ ಮಾಸ್ತರು ವಿದ್ಯತ್ ಬಗ್ಗೆ ಪಾಟ ಮಾಡುತ್ತಿದ್ದರು. ವಾಹಕ, ಅರೆವಾಹಕ, ನಿರೋದಕ, ಕರೆಂಟ್, ವೋಲ್ಟೇಜ್ ರೆಜಿಶ್ಟೆಂಟ್ ಇನ್ನೇನನ್ನೋ ಬಿಡಿಸಿ ಹೇಳುತ್ತಿದ್ದರು. ಮನೆಯಲ್ಲಿ ತುಂಬಾ ಮೊಸರು. ಬೆಳಿಗ್ಗೆಯ ಊಟಕ್ಕನೇ ಮೊಸರು ಮುದ್ದೆ, ಮೊಸರು ಬಾನ(ಅನ್ನ) ಹೊಟ್ಟೆ ಬಿರಿಯುವಂತೆ ಹಣಿದು ಬಂದಿದ್ದೆ. ಜೊಗೆತೆ ಒಂದು ಅಚ್ಚುಂಡೆ ಬೆಲ್ಲ ಒಣಕೊಬ್ಬರಿ ಹಾದಿಗುಂಟ ತಿನ್ನುತ್ತ ಬಂದಿದ್ದೆ. ಮೊಸರಿನ ಪ್ರಬಾವವೇ ಇರಬೇಕು ಜೊತೆಗೆ ಸುಯ್ಯಂದು ಮರದ ನೆರಳನ್ನು ಸೀಳಿ ಬೀಸುತ್ತಿದ್ದ ತಣ್ಣನ ತಂಗಾಳಿ ಕಿಟಕಿಯಿಂದ ಒಳಗೆ ನುಗ್ಗಿ ನನ್ನ ಸವರಿಕೊಂಡು ಹೋಗುತ್ತಿದ್ದುದ್ದರಿಂದ ಹಾಯ್ ಎನಿಸುತ್ತಿತ್ತು. ಮೂರನೆ ಬೆಂಚಿನಲ್ಲಿ ತೂಕಡಿಸುತ್ತ ಕೂತಿದ್ದೆನೋ ಎನೋ. ಮಾಸ್ತರು ನನ್ನ ಕಡೆ ಅಲ್ಲಾಡಿಸುತ್ತ ಕೋಲು ತೋರಿಸಿದರು. ಮಾಸ್ತರ ಕಯ್ಯಲ್ಲಿ ಅಲ್ಲಾಡುತ್ತಿದ್ದ ಕೋಲು ನಿದ್ದೆ ತುಂಬಿದ ಅರೆಗಣ್ಣಿನಲ್ಲಿ ನೋಡಿದೊಡನೆಯೇ ಇದ್ದಕ್ಕಿದ್ದಂತೆ ಯಾಕೋ ಒಂದ್ತಾರ ಆಯ್ತು. ಅವರು ಎಲ್ಲರ ನಡುವೆ ನನ್ನನ್ನು ಎಬ್ಬಿಸಿದರೆ ಅವಮಾನವಾಗುವುದೆಂದೆನಿಸಿರಬೇಕು ನನಗಾಗ. ನನ್ನ ನೆಚ್ಚಿನ ಮಾಸ್ತರು ತರಗತಿಯಲ್ಲಿ ಎಬ್ಬಿಸಿ ಎಲ್ಲರೆದುರು ಅವಮಾನಮಾಡಿದರೆ? ತುಂಬಾ ಅವಮಾನದ ಮಾತಿದು. ಇದನ್ನು ಏಗಾದರು ಏನಾದರು ಮಾಡಿ ತಪ್ಪಿಸ ಬೇಕು!!! ತಡಮಾಡದೆ ಮರುಗಳಿಗೆಯಲ್ಲಿ ತಟ್ಟನೆ ಎದ್ದು ನಿಂತು ನಾನು ಮಾಸ್ತರಿಗೆ ಒಂದು ಪ್ರಶ್ನೆ/ಸಂಶಯ ಕೇಳಿ ಆಗುವ ಅವಮಾನದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ.

ನಾನು ಕೇಳಿದ ಪ್ರಶ್ನೆಯಿಂದ ತರಗತಿಯಲ್ಲಿರುವ ಹುಡುಗರೆಲ್ಲರಿಗೂ ಗಾಬರಿನೇ. ಗಾಬರಿಯಾಕೆ ಗೊತ್ತ ಇದುವರೆಗು ತರಗತಿಯಲ್ಲಿ ಎದ್ದು ಮಾಸ್ತರಿಗೆ ಪ್ರಶ್ನೆ ಕೇಳಿ ಸಂಶಯ ಬಗೆಹರಿಸಿಕೊಳ್ಳುವ ಎದೆಗಾರಿಕೆ ಯಾರಿಗೂ ಇರಲಿಲ್ಲ ಅತವ ಯಾರಿಗೂ ಈಬಗೆ ಪ್ರಶ್ನೆಕೇಳುವಂತ ಸಂಶಬ ಬರುತ್ತಿತ್ತೋ ಇಲ್ಲವೋ.. ನನಗಂತು ಬರುತ್ತಿರಲಿಲ್ಲ. ನನ್ನ ಬದುಕಲ್ಲೇ ಇದೇ ಮೊದಲ ಹಾಗು ಕೊನೆಯ ಪ್ರಶನ್ಎ. ಮೊದಲನೆಯ ಪ್ರಶ್ನೆಗೆ ಮಾಸ್ತರು ಸೊಗಸಾಗಿ ಉತ್ತರಿಸಿದರು. ಎಲ್ಲರಿಗೂ ಚನ್ನಾಗಿ ತಿಳಿಯಿತು ಆದರೆ ನಾನು ಕುತೂಹಲದಿಂದ ಅವರ ವಿವರಣೆಗೆ ಎದುರಾಗಿ ಇನ್ನೊಂದು ಪ್ರಶ್ನೆ ಕೇಳಿದೆ. ಮೊದಲನೆಯ ಪ್ರಶ್ನೆ ಈಗಿತ್ತು. ಕರೆಂಟ್ ಇರೋ ವಯರು ಮುಟ್ಟಿದರೆ ಯಾಕೆ ಶಾಕ್ ಹೊಡೆಯುತ್ತೆ? ಜೊತೆಗೆ ಕರೆಂಟು ಹಿಡಿದ ಜೀವಿ ಯಾಕೆ ಸಾಯುತ್ತದೆ? ಜಯಮೂರ್ತಿ ಮಾಸ್ತರು ಸೊಗಸಾಗಿ ಎಲ್ಲರಿಗೂ ತಿಳಿಯುವಂತೆ ಬಿಡಿಬಿಡಿಸಿ ಹೇಳಿದರು. ನಮ್ಮ ಮೈಯ್ಯೊಳಗೆ ನರನಾಡಿ ಇರುತ್ತಾವೆ. ಅದರಲ್ಲಿ ವಿದ್ಯತ್ ಹರಿಯುತ್ತಿರುತ್ತದೆ. ಅದು ಅತಿ ತುಸು ಮಾತ್ರ. ಹೆಚ್ಚಿನ ಕರೆಂಟ್ ನಮ್ಮ ಮೈಯ್ಯೋಳಗೆ ಹರಿದಾಗ ನಮ್ಮ ಮಯ್ಯಲ್ಲಿ ಇರುವ ವಿದ್ಯತ್ತಿನ ಬಲೆ ಶಾರ್ಟ್ ಆಗಿ ಎಲ್ಲಾ ಕೆಲಸಗಳನ್ನು ನಿಲ್ಲಿಸಿ ಬಿಡುತ್ತದೆ. ಈಗೆ ಆಗದಿರಲೆಂದು ನಮ್ಮ ಮೆದುಳು ಕರೆಂಟಿರುವ ತಂತಿ ಮುಟ್ಟಿದಾದ ತಪ್ಪಿಸಿಕೊಳ್ಳಲು ಕೈಗೆ ಒಂದು ಮಾತನ್ನು ಹೇಳಿಕಳಿಸುತ್ತದೆ. ಕೊಸರಿ ತಂತಿಯಿಂದ ದೂರವಾಗು ಎಂದು ಅದೇ ಶಾಕ್ ಎಂದು ಬಿಡಿಸಿ ಹೇಳಿದರು. ಸರಿಯೆಂದು ಸೋಜಿಗದಿಂದ ಎಲ್ಲರೂ ತಲೆತೂಗಿದೆವು.

ಆದರೆ ಇದ್ದಕ್ಕಿದ್ದಂತೆ ನನ್ನ ಕೊಳಕು ತಲೆಯಲ್ಲಿ ಇನ್ನೇನೋ ನೆನಪಿಗೆ ಬಂತು. ಬೆಳಗಾದರೆ ಸಾಕು ನಮ್ಮ ಮನೆಯ ಮುಂದೆ ಲೈಟ್ ಕಂಬಕ್ಕೆ ಬಿಗಿದು ಕಟ್ಟಿರುವ ಕರೆಂಟ್ ತಂತಿಯ ಮೇಲೆ ನೂರಾರು ಗುಬ್ಬಚ್ಚಿ, ಬೆಳ್ಳಕ್ಕಿ, ಕಾಗೆ, ಬೆಳವ, ಪಾರಿವಾಳ ಕೂರುತ್ತಾವೆ. ಅದರ ಮೇಲೆನೇ ಜಗಳವಾಡುತ್ತಾವೆ. ಕಾ,... ಕೀ, ....ಪೀ,... ಚೀ.... ಮಾಡ್ತಾವೆ. ಕೆಲವು ಅದರ ಮೇಲೆ ಕುಳಿತೇ ನಿದ್ದೆ ಮಾಡ್ತಾವೆ ಆದರೆ ಆ ಯಾವಾ ಬೆಳ್ಳಕ್ಕಿಗೂ, ಗುಬ್ಬಚ್ಚಿಗೂ, ಕಾಗೆ, ಪಾರಿವಾಳಕ್ಕೆ ಇದುವರೆಗೆ ಕರೆಂಟ್ ಶಾಕೇ ಹೊಡೆದಿಲ್ಲ! ನಮ್ಮೂರಿನ ಮಾತು ಬಾರದ ಕಿವಿಯೂ ಕೇಳಿಸದ ಮೂಕ ಚಂದ್ರ ಯಾವಾಗಲು ಬರಿಗಯ್ಯಿಂದಲೇ ತಂತಿ ಮುಟ್ಟುತ್ತಾನೆ. ನಮ್ಮೂರಿನವರೆಲ್ಲ ಮನೆಯಲ್ಲಿ ಏನಾದರು ವಿದ್ಯತ್ತಿನ ತೊಂದರೆಯಾಗಿದ್ದೆರೆ ಅವನನ್ನೇ ಕರೆದುಕೊಂಡು ಹೋಗ್ತಾರೆ. ಅವನಿಗೆ ಯಾವತ್ತೂ ಶಾಕ್ ಹೊಡೆದಿಲ್ಲ. ಮಾತಾಡುವ ನಮಗೊಂದೇ ಯಾಕೆ ಶಾಕ್ ಹೊಡೆಯುತ್ತೆ ಎಂದು ತಲೆಯಲ್ಲಿ ಸುಳಿದಿದ್ದೇ ತಡ. ಮತ್ತೆ ಮೇಲೆದ್ದು ಮಾಸ್ತರಿಗೆ ನನ್ನ ಕೊರಗು ಹೇಳುತ್ತ ಸಾರ್ ಕರೆಂಟ್ ಬರೀ ಮಾತಾನಾಡುವ ಮನುಶ್ಯರಿಗೋಂದೇನ ಹೊಡೆಯೋದು?? ಎಂದು ಕೇಳಿದೆ.

ಮತ್ತೇ ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರ್ ತಮ್ಮ ಬಹು ಸೊಗಸಾದ ತಾಳ್ಮೆಯ ಶೈಲಿಯಲ್ಲಿ ಬಿಡಿಬಿಡಿಯಾಗಿ ಬಿಚ್ಚಿ ಬಿಡಿಸಿ ಮುಂದುವರಿಸಿ ಹೇಳಿದರು. ಕರೆಂಟ್ ನಮ್ಮ ಮಯ್ಯಯಿಂದ ಹರಿದು ಇನ್ನೊಂದು ವಾಹಕಕ್ಕೆ ನಂಟಾಗಿ ಹರಿದಾಗ ನಮಗೆ ಹೊಡೆಯುತ್ತದೆ. ಇಲ್ಲದಿದ್ದರೆ ಹೊಡೆಯುವುದಿಲ್ಲ. ನೋಡು ತಂತಿಮೇಲೆ ಕೂಡೋ ಹಕ್ಕಿ ಬೇರೆ ಯಾವುದೇ ವಾಹಕ್ಕಕ್ಕೆ ಅಂಟಿಕೊಂಡಿರುವುದಿಲ್ಲ. ಅದಕ್ಕೆ ಅವಕ್ಕೆ ಹೊಡೆಯುವುದಿಲ್ಲ. ನಾವು ಕರೆಂಟ್ ಇರುವ ತಂತಿ ಹಿಡಿದಾಗ ನಮಗೂ ಕೂಡ ಯಾವುದೇ ವಾಹಕದ ನಂಟು ಇಲ್ಲದಿದ್ದರೆ ಹೊಡೆಯುವುದಿಲ್ಲ. ಉದಾಹರಣೆಗೆ ಒಣಮರದ ಹಲಗೆಯ ಮೇಲೆ ನಿಂತಾಗ ಪ್ಲಾಸ್ಟಿಕೂ, ರಬ್ಬರೂ ಮೆಟ್ಟು ಹಾಕಿಕೊಂಡಾಗ ನಾವು ಕರೆಂಟ್ ತಂತಿ ಹಿಡಿದರೆ ಹೊಡೆಯಲ್ಲ. ಆಗ ನನಗೆ ನೆನಪಾಯಿತು ಮೂಕ ಚಂದ್ರ ಯಾವಾಗಲು ಪ್ಯಾರಗಾನ್ ಮೆಟ್ಟು ಹಾಕಿಕೊಂಡಿರುತ್ತಿರುವುದು ಇಲ್ಲವೆ ಹಲಗೆಯ ಮೇಲೆ ನಿಂದು ವಯರ್ ಮುಟ್ಟುವುದು. ಕೊನೆಗೆ ಮಾಸ್ತರು ಒಂದು ಎಚ್ಚರಿಕೆಯನ್ನೂ ಕೊಟ್ಟರು. ಮಯ್ ಬೆವರೊಡೆದಿದ್ದರೆ ಕರೆಂಟು ಹೊಡೆಯುತ್ತದೆ. ಯಾಕೆಂದರೆ ಬೆವರಿನಲ್ಲಿ ನೀರಿದೆ, ನೀರು ವಾಹಕ ಅಂದರೆ ನೀರಿಗೆ ನಮ್ಮ ಮುಕಾಂತರ ಕರೆಂಟ್ ಹರಿದಾಗ ನಮಗೆ ಹೊಡೆಯುತ್ತೆ ಎಂದು ಹೇಳಿದರು.

"ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಮಾಸ್ತರ ಈ ಮಾತು ನನ್ನ ತಲೆಯಲ್ಲಿ ಮಾರುಲಿಯ(ಮಾರ್ದನಿ) ತೊಡಗಿತು. ಅದೇ ಗುಂಗು ನನ್ನ ತಲೆಯಲ್ಲಿ ನಿಂತಲ್ಲಿ ಕುಂತಲ್ಲಿ ಕೊರೆಯ ತೊಡಗಿತು. ಕರೆಂಟು ಕಂಬ, ಅದಕ್ಕೆ ಕಟ್ಟಿದ ತಂತಿ ನೋಡಿದರೆ ಸಾಕು ಮುಟ್ಟಿ ನೋಡೋಣವೇ ಎನ್ನಿಸುತ್ತಿತ್ತು. ಹಾಗೆಂದುಕೊಂಡು ಕರೆಂಟು ಕಂಬಕ್ಕೆ ಕಟ್ಟಿದ್ದ ಗಯ್ವಯರನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದೆ. ಉದ್ದವಾದ ಜೋಟಿ ಬಡಿಗೆಯಂತ ಒಣ ಕಟ್ಟಿಗೆಯನ್ನು ಹಿಡಿದು ತಂತಿಗೆ ತಾಗಿಸುತ್ತಿದ್ದೆ. ಹತ್ತಾರು ಬಗೆಯ ಪಲುಕು(ಕಲ್ಪನೆ) ನನ್ನಲ್ಲಿ ಬಂದೋಗುತ್ತಿದ್ದವು. ಪಲುಕಿನ ಮಿಡಿತ್ತಕ್ಕೆ ಹೊಂದುವ ಹಾಗೆ ಬಗೆ ಬಗೆಯಲ್ಲಿ ಏನೇನೋ ಮಾಡತೊಡಗಿದೆ. ಒಣ ಕಟ್ಟಿಗೆಯ ತುದಿಗೆ ತಂತಿ ಕಟ್ಟಿ ಜೋತಾಡುವ ತಂತಿಗೆ ತಾಗಿಸುತ್ತಿದ್ದೆ. ಏನು ಮಾಡಿದರೂ ತಣಿಯದ ಹುಳ ತಲೆಯನ್ನು ಚನ್ನಾಗಿ ತಿನ್ನ ತೊಡಗಿತು.

ಈ ಪ್ರಯೋಗ ಸಿದ್ದ ಮಾಡಲು ಒಂದು ನಲ್ ದಿನ ಬಂದೇ ಬಿಟ್ಟಿತು. ನನಗಿಂತ ಹಿರಿಯ ಗೆಳೆಯ ಹುಳ್ಳೇರ ಮಲ್ಲಿ ಹಾಗು ನಾನು ಒಮ್ಮೆ ನಮ್ಮ ತೊಟಕ್ಕೆ ಹೋಗಿದ್ದೆವು. ಮೋಟರು ಯಾಕೋ ನಡೆಯದೆ ಮನಿಸಿಕೊಂಡಿತ್ತು. ಪ್ಯೂಜ್ ಜೋಡಣೆ ತಪ್ಪಿರಬಹುದೇ ಎಂದು ನೋಡಲು ಮಲ್ಲಿ ತೋಟದ ಮನೆಯಲ್ಲಿ ಮೋಟರು ಸುರುಮಾಡಲು ಇರುವ ಸ್ಟಾಟರ್ ಹಲಗೆಯಮೇಲೆ(ಬೋರ್ಡ್) ಜೋಡಿಸಿದ ಪ್ಯೂಜ್ ಕಿತ್ತ. ಪ್ಯಾರಗಾನು ಅವಾಯಿ ಚಪ್ಪಲಿ ಹಾಕಿಕೊಂಡು ಬರಿ ಕೈಯಲ್ಲೇ ಎಲ್ಲಾ ತಂತಿಗಳನ್ನು ಮುಟ್ಟಿ ನೋಡುತ್ತ ತಿರುವುತ್ತ ತನ್ನ ಎದೆಗಾರಿಕೆಯನ್ನು ತೋರಿಸ ತೊಡಗಿದ. ನಾನು ಅವನ ಹಿಂದೆ ಸುಮ್ಮನೆ ಕಣ್ಣರಳಿಸಿ ಹೊರಳಿಸಿ ನೋಡುತ್ತ ನಿಂತಿದ್ದೆ. ಮತ್ತೆ ಅದೇ ಮಾತು, ನನ್ನ ನೆಚ್ಚಿನ ಜಯಮೂರ್ತಿ ಮಾಸ್ತರು ಹೇಳಿದ ಮಾತು ತಟ್ಟನೆ ತಲೆಯಲ್ಲಿ ಸುಳಿಯಿತು. "ಕರೆಂಟು ಹರಿದಾಡುವ ಮನುಶ್ಯನಿಂದ ಇನ್ನೊಂದು ವಾಹಕಕ್ಕೆ ನಂಟು ಇಲ್ಲದಿದ್ದಾಗ ಕರೆಂಟು ಹೊಡೆಯುವುದಿಲ್ಲ" ಈ ಮಾತು ನೆನಪಾದೊಡನೆಯೇ ಸರಿ ನೋಡೋಣ ಮಲ್ಲಿಗೆ ಈಗ ಯಾವುದೇ ವಾಹಕಕ್ಕೆ ನಂಟಿಲ್ಲ ಅದಕ್ಕೆ ಕರೆಂಟು ಹೊಡೆಯುತ್ತಿಲ್ಲ. ಈಗ ನಾನು ಅವನನ್ನು ಮುಟ್ಟಿದರೆ? ಎಂಬ ಪಲುಕು ನನ್ನ ತಲೆಯಲ್ಲಿ ಬಂದೊಡನೆಯೇ..... ಮೆಲ್ಲನೆ ಕೈ ಎತ್ತಿ ಅವನ ಬುಜದ ಮೇಲಿಡಲೋದೆ. ಕೊಂಚ ಅಳುಕೆನಿಸಿತು. ಸರಕ್ಕನೆ ಕೈ ಹಿಂದಕ್ಕೆಳೆದುಕೊಂಡೆ. ಕಕ್ಕಾಬಿಕ್ಕಿಯಾದವನಂತೆ ಆಕಡೆ ಈಕಡೆ ನೋಡುತ್ತ ಕೂತೆ. ಹಾಗೆ ಕೊಂಚಹೊತ್ತು ಸಾವರಿಸಿಕೊಂಡು ಹೊಂಚುಹಾಕಿ ಕುಂತುಕೊಂಡು ಕಣ್ಣು ಮುಚ್ಚಿ ದೈರ್ಯ ತಂದುಕೊಂಡು ಮೆಲ್ಲನೆ ಕೈ ಎತ್ತುತ್ತ ಅವನ ಬುಜದ ಮೇಲೆ ಇಟ್ಟೆ. ಇಟ್ಟೊಡನೆಯೇ ಮಲ್ಲಿ ಸರಕ್ಕನೆ ಪ್ಯೂಜಿನೊಳಗಿಟ್ಟಿದ್ದ ಕೈಯನ್ನು ಜಾಡಿಸಿ ಕಿತ್ತುಕೊಂಡು ನನ್ನ ಹಿಂದಕ್ಕೆ ನೂಕಿ ಎನೋ ಕಿರುಚುತ್ತ ಒಂದೇ ಓಟ.... ಮನೆಯಿಂದ ಹೊಲದ ಬಯಲವರೆಗೆ. ಆಗಲೆ ನನಗೂ ಶಾಕು ಹೊಡೆದಿತ್ತು. ಮುಂಗುಸಿ ನೋಡಿದ ಹಾವಿನಂತೆ ಕಂಗೆಟ್ಟು ಹೋಗಿದ್ದೆ. ಮೆಲ್ಲನೆ ಎದ್ದು ನಾನು ಹೊರಗೆ ಓಡಿದೆ. ಮುಂದೆ ಅವನೂ ಏನೂ ಹೇಳಲಿಲ್ಲ ನಾನು ನನ್ನ ಪ್ರಯೋಗದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

ಇಶ್ಟಾದರು ನನ್ನ ತಲೆಯೊಳಗೆ ಕೊರೆಯುತ್ತಿದ್ದ ಹುಳ ನನ್ನ ನಿದ್ದೆ ಕೆಡಿಸಿತು. ಮಾಸ್ತರು ಹೇಳಿದ ಮಾತು ದಿಟವೊ ಸುಳ್ಳು ಎಂದು ಪಕ್ಕ ಮಾಡಿಕೊಳ್ಳ ಬೇಕಿತ್ತು. ಇನ್ನೊಮ್ಮೆ ದಿಟ ಎಂದು ಪ್ರಯೋಗದ ಮೂಲಕ ಕಂಡುಕೊಳ್ಳುವವರೆಗೆ ನನಗೆ ನೆಮ್ಮದಿ ಇಲ್ಲದಾಯಿತು. ಅಂತಹ ನಲ್ಹೊತ್ತಿಗಾಗಿ ಕಾಯತೊಡಗಿದೆ. ದಿನ ಉರುಳತೊಡಗಿದವು. ಒಂದುದಿನ ಶನಿವಾರ ಬಂತು. ಶನಿವಾರದ ಮುಂಜಾನೆಯ ಶಾಲೆ ಮುಗಿಸಿಕೊಂಡು ಹಾದಿಗುಂಟ ಕಡ್ಲೆಕಾಯಿ ಕದ್ದು ತಿನ್ನುವುದಕ್ಕೆ, ಜಿನ್ನಿನವರ ಕಬ್ಬಿನ ತೋಟಕ್ಕೆ ನುಗ್ಗಿ ಕಬ್ಬು ಕದಿಯುವುದಕ್ಕೆ ರಜ ಹೇಳಿ ಓಡೋಡಿ ಮನಗೆ ಬಂದೆ. ಆತುರ ಆತುರದಲ್ಲೇ ಒಂದೊಶ್ಟು ಕೂಳು ತಿಂದು ಒಬ್ಬನೇ ತೋಟಕ್ಕೆ ಹೋದೆ. ಯಾರಿಗೂ ಏನೂ ಹೇಳಲಿಲ್ಲ. ನನ್ನ ಗೆಳೆಯರು ಜೊತೆಗೆ ತೋಟಕ್ಕೆ ನಾವು ಬರುತ್ತೇವೆ ಎಂದು ಹಿಂದೆ ಬಿದ್ದರೂ ಅವರಿಗೆಲ್ಲಾ ಚಳ್ಳೆಹಣ್ಣು ತಿನ್ನಿಸಿ ಕಣ್ಣು ತಪ್ಪಿಸಿ ಒಬ್ಬನೇ ಹೊರಟೆ. ಆಗಲೆ ನನ್ನ ಅರಿವಿನಲ್ಲಿ ಏನೇನು ಪ್ರಯೋಗ ಮಾಡಬೇಕೆಂದು ನೂರಾರು ಪಲುಕು(ಕಲ್ಪನೆ) ಬರತೊಡಗಿದವು. ನನ್ನ ಪ್ರಯೋಗಕ್ಕೆ ಬೇಕಾದ ಮೆಟ್ಟು, ಒಣಮರದ ಹಲಗೆ, ತಂತಿ ಎಲ್ಲಾ ನನ್ನ ಹೊಲದಲ್ಲಿ ಬೇಕಾದಶ್ಟು ಸಿಗುತ್ತಿದ್ದವು. ಹೋದೆ. ನಾನೂರಹತ್ತು ವೋಲ್ಟನ ಮೂರರಲ್ಲಿ ಒಂದು ಪ್ಯೂಜ್ ಕಿತ್ತೆ. ಕಾಲಲ್ಲಿ ಮೆಟ್ಟು ಹಾಕಿಕೊಂಡು ಹಲೆಗೆಯ ಮೇಲೆ ನಿಂತೆ. ಮೆಲ್ಲ ಮೆಲ್ಲನೆ ಅಂಜಿಕೆ ಅಳುಕು ಏನೂ ಇಲ್ಲದೆ ಒಂದು ಗೇಣಿನಶ್ಟು ಉದ್ದದ ತಾಂಬ್ರದ ತಂತಿಯನ್ನು ಹಿಡಿದು ಎಲ್ಲೂ ನನಗೂ ಬೇರಾವುದೆ ವಾಹಕಕ್ಕೂ ನಂಟಾಗದಂತೆ ಎಚ್ಚರವಹಿಸುತ್ತ ಕರೆಂಟ್ ಇದ್ದ ಪ್ಯೂಜಿನ ಕಡೆ ಸೇರಿಸಿದೆ. ಶಾಕ್ ಹೊಡೆಯಲಿಲ್ಲ. ನಾನೂರ ಹತ್ತು ವೋಲ್ಟ್. ಗುಂಡಿಗೆ ತುಸು ಹೆಚ್ಚಾಯಿತು. ಆದರೆ ಒಂದುಕಡೆ ಸಂಶಯ ಬರತೊಡಗಿತು. ನಾನು ತಂತಿ ಇಟ್ಟ ಕಡೆ ಕರೆಂಟು ಇದೆಯೋ ಇಲ್ಲವೋ? ನೋಡಿ ಪಕ್ಕಮಾಡಿಕೊಳ್ಳ ಬೇಕೆನಿಸಿತು. ಟೆಸ್ಟರ್ ತೆಗೆದುಕೊಂಡು ಪ್ಯೂಜೊಳಗೆ ಇಟ್ಟೆ. ಟೆಸ್ಟರ್ ದೀಪ ಹೊತ್ತಿತು. ಅಲ್ಲಿ ಕರೆಂಟು ಇರುವುದು ದಿಟವಾಯಿತು. ಮತ್ತೊಮ್ಮೆ ದಪ್ಪ ತಂತಿ ಇಟ್ಟು ನೊಡಿದೆ. ಈಗಲೂ ಕರೆಂಟ್ ಹೊಡೆಯಲಿಲ್ಲ. ಹತ್ತಾರು ಬಾರಿ ತಂತಿ ಇಟ್ಟು ತೆಗೆದು ನೋಡಿದೆ. ಆಗ ನನಗೆ ಜಯಮೂರ್ತಿ ಸಾರು ಹೇಳಿದ ಮಾತು ದಿಟವಂದನಿಸತೊಡಗಿತು.

ಪ್ರಯೋಗದ ಒಂದನೆ ಬಾಗ ಮುಗಿಯಿತು. ತೋಟದ ಮನೆಯಿಂದ ಹೊರಬಂದೆ. ಯಾರಾದರು ಇತ್ತ ಸುಳಿದರೆ? ಹತ್ತಿರದಲ್ಲಿದ್ದ ತೆಂಗಿನ ಮರವೇರಿ ಸುತ್ತೆಲ್ಲ ನೋಡಿದೆ. ಯಾರೂ ಇಲ್ಲ. ನನ್ನ ಮುಂದಿನ ಬಾಗವಾದ ಶಾಕ್ ಹೊಡೆಯುವುದನ್ನು ಅನುಭವಿಸಿ ತಿಳಿದುಕೊಳ್ಳ ಬೇಕಿತ್ತು. ಯಾಕೋ ಈ ಮಾತು ನೆನಸಿಕೊಂಡೊಡನೆಯೇ ಎದೆ ಅಳ್ಳೊಡೆಯತೊಡಗಿತು. ಕೊಂಚ ಅಂಜಿಕೆ ಅನಿಸತೊಡಗಿತು. ಆದರೂ ಬಿಟ್ಟುಕೊಡುವ ಮನಸ್ಸಿಲ್ಲ. ಸರಿ ನೋಡೋಣವೆಂದು ಮನೆಯ ಹೊಳಹೊಕಕ್ಕೆ. ಮತ್ತೆ ಮೆಟ್ಟು ಮೆಟ್ಟಿ ತಂತಿಯನ್ನು ಪ್ಯೂಜ್ ನಲ್ಲಿ ಸಿಕ್ಕಿಸಿದೆ. ಎರಡು ಮೂರು ಬಾರಿ ಇಟ್ಟು ತೆಗೆದು ಮಾಡಿದೆ. ಇನ್ನೊಮ್ಮೆ ಟೆಸ್ಟರ್ ಇಟ್ಟೆ. ದೀಪ ಹತ್ತಿತು. ಕರೆಂಟು ಇರುವುದು ಪಕ್ಕವಾಯಿತು. ಒಣ ಹಲಗೆಯ ಮೇಲೆ ಒಂದು ಕುಡುಗೋಲನ್ನು ಇಟ್ಟೆ. ಮೆಟ್ಟು ಮೆಟ್ಟಿ ತಂತಿ ಹಿಡಿತು ಸರಿ ಎಂದು ಪ್ಯೂಜಿನಲ್ಲಿ ಇಟ್ಟೆ. ನಾನೂರ ಹತ್ತು ವೋಲ್ಟ್. ಕೊಂಚ ಏರುಪೇರಾದರೂ ಏನಾಗುವುದೋ ಗೊತ್ತಿಲ್ಲ. ಏನಾದರು ಹೆಚ್ಚು ಕಡಿಮೆಯಾದರೆ ಪ್ಯೂಜಿನಲ್ಲಿರುವ ಹರಿದಾಡುವ ನಾರೂರ ಹತ್ತು ವೋಲ್ಟನ ಕರೆಂಟ್ ಸಾವಗಿ ನನ್ನ ಹೆಣವಾಗಿಸಿಬಿಡುತ್ತದೆ. ಒಳಗೆ ಅಂಜಿಕೆ ಆದರೂ ಎಲ್ಲೋ ಇನ್ನೊಂದಡೆ ಒಣ ಕೆಚ್ಚು. ಜೊತೆಗೆ ಮೆಲ್ಲ ಕಯ್ನಡುಗಿಸುವ ತುಜು ಹೆದರಿಕೆ. ಮೈಯ ಬಿಸಿ ಮೆಲ್ಲನೆ ಕೊಂಚ ಹೆಚ್ಚಾಯಿತು. ಸಾವಿನ ನೆರಳು ತಲೆಯಲ್ಲಿ ಸುಳಿದರೂ ಬಿಡುವ ಪಿಂಡ ನಾನಲ್ಲ. ಯಾವಗಲು ಹಟಮಾರಿ ನಡವಳಿಕೆಗೆ ನನ್ನದು. ಹಟಮಾರಿತನದ ದಗ್ವಿಜಯಕ್ಕೆ ನಮ್ಮ ಮನೆಯಲ್ಲಿಯೇ ಹೆಸರುವಾಸಿಯಾದ ತ್ರಿವಿಕ್ರಮ ನಾನಾಗಿದ್ದೆ. ಈಗ ನಾನೂರ ಹತ್ತು ವೋಲ್ಟ ನನ್ನ ಮೈಯಲ್ಲಿ ಹರಿಯುತ್ತಿದೆ. ಅದರ ಯಾವುದೇ ಇರುವಿಕೆಯ ಅರಿವು ನನಗಾಗುತ್ತಿಲ್ಲ. ಕೊನೆಗೆ ಅಂಜುತ್ತಲೇ ಪಕ್ಕದಲ್ಲಿ ಇಟ್ಟಿದ್ದ ಕುಡುಗೋಲಿನ ತುದಿ ಮುಟ್ಟಿದೆ ಮುಟ್ಟಿದೊಡನೆಯೇ......

ಮರುಗಳಿಗೆಯಲ್ಲಿ ಜಯಮೂರ್ತಿ ಮಾಸ್ತರು ಹೇಳಿದ್ದ ಮಾತು ದಿವಾಗಿ ಸಿದ್ದವಾಗಿತ್ತು. ಶಾಕ್, ಎಶ್ಟು ಬಿರುಸಾದ ಶಾಕ್..! ಶಾಕ್ ನ ಜೋರಿಗೆ ಕೈಜಾಡಿಸಿದೆ. ಜಾಡಿಸಿದ ಕೈ ಅಲ್ಲೇ ಇದ್ದ ಗೋಡಗೆ ಹೊಡೆಯಿತು. ಎಂತಹ ಹೊಡೆದ. ಕೈ ಮರ ಮರ ಎನ್ನುತ್ತಿದ್ದರೆ ಸ್ವಾದೀನ ಕಳೆದುಕೊಂಡಿತೇನೋ.. ಅನ್ನಿಸುತಿತ್ತು. ಕರೆಂಟು ಹರಿದಾಟ ನಿಂತಿದ್ದರೂ ಮೈಯಲ್ಲಿನ ಜುಮು ಜುಮು ಜುಮು ನಿಂತಿರಲಿಲ್ಲ. ನಡುಕ .....ಜಿನುಗಿದ ಬೆವರು, ಜೋರಾದ ಉಸಿರಾಟ ಬೆಚ್ಚಿದ ನೋಟ. ಮೆಲ್ಲ ಮೆಲ್ಲನೆ ಸಾವರಿಸಿಕೊಂಡು ಎದ್ದು ಸುತ್ತೆಲ್ಲ ನೋಡಿದೆ. ಯಾರು ಇರಲಿಲ್ಲ. ಉಸುರಿನ ಜೋರು ಕೊಂಚ ಇಳಿಯಿತು ಅಂತು ಬದುಕುಳಿತು ಜೀವ ಎಂದುಕೊಂಡು ಹೊರಬಂದು ಬಾವಿ ಮಣ್ಣಿನ ದಿಬ್ಬದ ಮೇಲೆ ಕುಡುಗೋಲಿನಿಂದ ದಿಬ್ಬದ ಮಣ್ಣು ಹಗೆಯುತ್ತ ಕುಳಿತಿದ್ದೆ. ಮರದ ದಡದಲ್ಲೇ ಬೆಳೆದು ನಿಂತಿರುವ ಕರಿಜಾಲಿ ಹೆಮ್ಮರ ಬಾವಿಯ ಕಡೆವಾರಿ ನಿಂತಿದೆ. ನೀರಿನ ಮೇಲೆ ಚಾಚಿರುವ ಕೊಂಬೆಗಳಿಗೆ ಜೋತು ಬಿದ್ದಿರುವ ಗೀಜಗನ ಗೂಡು. ಚಿಮ್ ಚಿಮ್ ಗೀಜಗನ ಕೊರಳ ಸದ್ದು ಬರುತ್ತಿದ್ದು. ಇದ್ದಕ್ಕಿದ್ದ ಹಾಗೆ ಜೋರು ಚೀರಾಟ ಅಂಜಿಸುವಂತ ಕೊರಳ ಚೀರು, ಯಾಕೆ ಈ ಚೀರು ಎಂದುದು ಆಕಡೆ ತಲೆಯೆತ್ತಿ ನೋಡಿದೆ. ಮಾರುದ್ದದ ಕೇರೆಹಾವು ಗೀಜಗ ಹಕ್ಕಿ ಹಿಂಡಿನ ಮೇಲೆ ಬೇಟೆಯ ಸವಾರಿ ನಡೆಸಿತ್ತು. ನೋಡಿದೊಡನೆಯೇ ಹಾವಿನ ಮೇಲೆ ಕೋಪ ಬಂತು ಸಿಕ್ಕ ಕಲ್ಲು ತೆಗೆದುಕೊಂಡು ಹಾವಿನಕಡೆ ಕಲ್ಲು ಬೀಸಿತೊಡಗಿದೆ. ಕೊಂಚ ಹೊತ್ತಾದಮೇಲೆ ಅಕ್ಕ ಅಮ್ಮ ಬಟ್ಟೆ ತೊಳೆಯಲು ತೋಟಕ್ಕೆ ಬಂದರು. ನಾನೊಬ್ಬನೆ ಮರದ ಕಡೆ ಕಲ್ಲುಬೀಸುತ್ತಿದ್ದಿದ್ದು. ನನ್ನ ಜೊತೆಗೆ ಬರುವ ವಾನರ ಗೆಳೆಯ ಬಳಗ ಬೇರೆ ಇಲ್ಲ. ನನ್ನ ಮುಕ ಶಾಕ್ ಹೊಡೆತಕ್ಕೆ ಇಂಗುತಿಂದ ಮಂಗನಂತೆ ಸಂಣದಾಗಿತ್ತು. ನನ್ನ ಕೀಟಲೆ ತರಲೆ ಬಗ್ಗೆ ಚನ್ನಾಗಿ ತಿಳಿದಿದ್ದ ಅಕ್ಕ ನನ್ನ ಮುಕ ನೋಡಿದೊಡನೆಯೇ ...ಏನೋ ಅವಾಂತರ ನಡೆಸಿದ್ದಾನೆ ಎಂದು ದಿಟವಾದ ನಂಬುಗೆಯಲ್ಲಿ ಇವತ್ತಿನ ಪುರಾಣ ಏನು ಎಂದು ನನ್ನಡಗೆ ನೋಡಿ ಕೇಳುವಲ್ಲಿಗೆ. ....... ಅವನದೆಲ್ಲಿ ಮುಗಿಯುತ್ತೆ ದಿನಾ ಇದ್ದದ್ದೇ ರಾಮಾಯಣ ಬಾ ಎಂದು ಅಮ್ಮ ಅಕ್ಕನನ್ನು ಕರೆಯುವಲ್ಲಿಗೆ........

ನನ್ನಂತೆ ಈ ಬಗೆಯ ಸಾವಿನೊಡನೆ ಆಟವಾಡುವ ಪ್ರಯೋಗ ಯಾರು ಮಾಡದಿರಲೆಂದು...ಈ ಬರಹದೊಂದಿಗೆ ಬೇರೆಯವರಿಗೆ ಬರೆದು ತಿಳಿಸಲೆಂದು....ದೇವರು ನನ್ನ ಬದುಕಿಸಿದನೆಂದು ನಂಬಿ ದೇವರಲ್ಲಿ ಪಡಮಟ್ಟು ಬರಹ ಮುಗಿಸುವಲ್ಲಿಗೆ.......!


ಕುಕೂಊ...
(ಕುಮಾರಸ್ವಾಮಿ. ಕಡಾಕೊಳ್ಳ)
ಪುಣೆ

1 comments:

Kumaranna, baraha eno tumbanesogasagide...aadre nee madiro experiment edella, bhayanakavagide...

September 28, 2011 at 4:51 AM  

Newer Post Older Post Home

Blogger Template by Blogcrowds