ಯಾಕೋ ಮನಸ್ಸು ಕೆರಳಿತ್ತು. ಅವಳ ಜೊತೆ ಜಗಳ ಆದಾಗಿನಿಂದ ಮನಸ್ಸು ತುಂಬಾ ಚಟಪಟಿಸುತ್ತಿದೆ, ಸಿಡುಕುತ್ತಿದೆ, ಯಾರಮೇಲೆಂದರೆ ಅವರ ಮೇಲೆ ರೇಗುತ್ತಿದೆ. ಸಮಯ ಮದ್ಯಾಹ್ನ ಮೂರಾಗಿತ್ತು. ಆಗತಾನೆ ಮುಂಗಾರಿನ ಮೊದಲ ವರ್ಷಧಾರೆ ಬಿರುಗಾಳಿಯ ಜೊತೆ ಸುರಿದು ಸುಮ್ಮನಾಗಿತ್ತು. ನನ್ನೂರಿನ ಹಳೆ ಗೆಳೆಯನ ಕಾಲ್ ಬಂತು ಮಳೆಬರ್ತಿದೆ ನಂತರ ಕರೆಮಾಡು ಎಂದೇಳಿ ಬಂದುಮಾಡಿದೆ. ಕೊನೆಯಲ್ಲಿರುವ ಆಲದ ಮರದಡಿಗೆ ಹೋಗಿ ನಿಂತೆ, ಮಳೆ ಬಿಟ್ಟಿದ್ದರೂ ಮರದಿಂದ ಹನಿ ತಟಗುಟ್ಟುತ್ತಿತ್ತು. ದಾರಿಯಲ್ಲಿ ಹೋಗುತಿದ್ದ ನೂರಾರು ವಾಹನಗಳ ಸದ್ದು ಕಿವಿಗೆ ಬಡಿತಿದ್ದರೂ ಏನನ್ನು ಕೇಳಿಸದವನಂತೆ ಎಲ್ಲೋ ನೋಡುತ್ತ ನಿಂತಿದ್ದೆ. ಸುಳಿಗಾಳಿ, ಬಿರಿಮಳೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದ ಹೂವುಗಳ ಕಡೆ ನನ್ನ ನೋಟ ನೆಟ್ಟಿತು. ವರ್ಷ ಪೂರ್ತಿ ಮಣ್ಣಿನಿಂದ ನೀರು ಸತ್ವ ಹೀರಿ, ಬಿಸಿಲು ಗಾಳಿ ಸಹಿಕೊಂಡು, ಫಲಕೊಡಲು ಹೂವರಳಿಸಿತ್ತು. ಇನ್ನೇನು ನಾಲ್ಕುದಿನ ಕಾದಿದ್ದರು ಹೂವು ಈಚಾಗಿ, ಈಚು ಬಲಿತು ಕಾಯಿಯಾಗಿ ಹಣ್ಣು ಮಾಗುತ್ತಿತ್ತು. ಹಣ್ಣು ಯಾರೇ ತಿಂದರು ಬೀಜ ತನ್ನ ವಂಶ ಬೆಳೆಸುತ್ತದೆ ಎಂಬ ಬಯಕೆಯಲ್ಲಿ ಮರ ಜೀವಿಸುತ್ತಿತ್ತು. ಆದರೆ ಮುಸಲಧಾರೆ ಮರದ ಕನಸಿಗೆ ಮಸುಕು ಹಾಕಿ ನಗುತ್ತಿತ್ತು. ಮರ ಬದುಕನ್ನೇ ಕಳೆದುಕೊಂಡ ಭಾವದಿಂದ ನರಳುತ್ತಿತ್ತು. ಆದರೆ ಬಿದ್ದ ಹೂವುಗಳು ನಗುತ್ತಲೇ ಇದ್ದವು. ಮೈಯಲ್ಲ ಸುಂದರ ಬಣ್ಣ ಹೊತ್ತು ಎಲ್ಲರನ್ನ ಸೆಳೆಯುತ್ತಿದ್ದವು. ಅವಳ ಮುಡಿಗೇರಲೇ, ದೇವರ ಪೂಜೆಗೆ ಅರ್ಪಿಸಿ ಕೊಳ್ಳಲೇ ಎಂಬ ತುಡಿತ ನನಗೆ ಇನ್ನೂ ಆ ಹೂವಲ್ಲಿ ಕಾಣಿಸುತ್ತಿತ್ತು. ಮಳೆಯ ಹನಿಗಳು ಹೂವಿನ ಪಕಳೆಯ ಮೇಲೆ ಮುತ್ತಂತೆ ಜೊಡಿಸಿದ್ದರಿಂದ ಸೊಗಸಾಗಿ ಕಾಣುತ್ತಿದ್ದವು. ನೋಟ ಆ ಹೂವುಗಳಲ್ಲೇ ನೆಟ್ಟಿತು. ಮನಸ್ಸು ತನ್ನ ವಾಸ್ತವವನ್ನು ಆ ಹೂವಿನ ಜೊತೆ ತುಲನೆ ಮಾಡವುದರಲ್ಲಿ ತೊಡಗಿತು. ವರ್ಷಗಳ ಹಿಂದೆ ಮುಂಗಾರಿನ ಸಮಯ ಮೇಘಗಳು ನಭವನ್ನು ಮುತ್ತಿ ಕವಿಯುವ ಜೋರು. ನಾನೊಂದು ಸ್ನೇಹದ ಸಸಿ ನೆಟ್ಟಿದ್ದೆ. ಅವಳ ಮತ್ತು ನನ್ನ ಭಾವದ ನೀರೆರೆದು ನೆಟ್ಟ ಸಸಿ. ಮಾತು, ಮುನಿಸು, ಕಷ್ಟ, ಸುಖ, ನೋವು, ನಗು, ಬದುಕಿನ ಎಲ್ಲಾ ಆಯಾಮಗಳನ್ನು ಆ ಸ್ನೇಹದ ಸಸಿಯ ನೆರಳಲ್ಲಿ ಸೇರಿಸಿದ್ದೆವು. ಆ ಸಸಿ ಹೂವನ್ನು ಬಿಟ್ಟು ಎಲ್ಲರನ್ನೂ ಸೆಳೆದಿತ್ತು ಮೋಹವನ್ನು ತನ್ನಲ್ಲಿ ಸೇರಿಸಿಕೊಂಡಿತ್ತು. ಆ ಸುಂದರ ಮಕರಂದ ತುಂಬಿಕೊಂಡು ಅರಳಿದ ಹೂವು ದುಂಬಿಗಳನ್ನ ಕರೆಯುತ್ತಿತ್ತು. ಪಾತರಗಿತ್ತಿಗಳನ್ನ ಅಣಕಿಸುತ್ತಿತ್ತು. ಸ್ನೇಹದ ಹೂವು ನೋಡಿ ಎಲ್ಲರ ಮತ್ಸರ ಹೆಚ್ಚಿತು. ಸುಂದರ ಹೂವು ಬೀಗುತ್ತಿತ್ತು. ಬಿರುಗಾಳಿ ಬರಬಹುದೆಂದು ಮರೆತು ಹಾಯಾಗಿ ತೂಗೋ ಗಾಳಿಗೆ ತಲೆದೂಗುತ್ತಿತ್ತು. ಆದರೆ ವಿಧಿಯ ಆಟ ಏನಿತ್ತೊ, ಎತ್ತಲಿಂದಲೋ ಬಂದ ಶಂಕೆ ಎಂಬ ಬಿರುಗಾಳಿ ಸುಳಿಸುಳಿದು ಬೀಸಿ ಹೂವುನ್ನು ನೆಲಕ್ಕುರುಳಿಸಿದೆ. ಹೂವು ನರಳತ್ತ ವೇದನೆಯಲ್ಲಿ ಬಾಡುತ್ತಿದೆ. ಭಾವನೆಗಳ ಮಿಲನದಿಂದ ಅರಳಿದ ಹೂವು ಇನ್ನಲ್ಲವಾಗಿದೆ. ಆದೋ ಇಲ್ಲಿರುವ ಮರ ಮತ್ತೊಮ್ಮೆ ಹೂವನ್ನು ಅರಳಿಸುವ ಆಸೆ ಹೊತ್ತು ಬಿಸಿಲು ಮಳೆಗೆ ಮೈಯೊಡ್ಡಿ ನಿಂತಂತೆ ನಾನೆಟ್ಟ ಆ ಸ್ನೇಹದ ಸಸಿಯಲ್ಲಿ ಮತ್ತೊಮ್ಮೆ ಭಾವ ನಂಟಿನ ಹೂವುನ್ನು ನೋಡುವ ನಿಚ್ಚಿತ ನಿರೀಕ್ಷೆಯಲ್ಲಿ ಬಂದ ನೋವು, ಕಷ್ಟ, ದುಃಖ, ನಿಂದನೆಗಳನ್ನು ಸಹಿಸುತ್ತ ಜೀವ ಸಾಗಿಸುತ್ತಿದೆ. ಇದೇನಾ ನಂಬಿಕೆ?


**ಕುಕೂ**
19/04/08

Newer Posts Older Posts Home

Blogger Template by Blogcrowds