ಬೆಂಗಳೂರಿಗೆ ಹೋಗಿ ಯಾರನ್ನಾದರು ಮನೆಯ ವಿಳಾಸ ಅಥವ ದಾರಿ ಬಗ್ಗೆ ಕೇಳಿ. ನಿಮಗೆ ಸಿಗುವ ಉತ್ತರ, "ನೋಡಿ ಸಾರ್, ಸ್ಟ್ರೈಟ್ ಹೋಗಿಬಿಡಿ, ಸೆಕೆಂಡ್ ಲೆಫ್ಟ್ ತೊಗೊಳ್ಳಿ, ಅಲ್ಲಿಂದ ಜಷ್ಟ್ ಫೈವ್ ಮಿನಿಟ್ ವಾಕ್ ಮಾಡಿ ನೆಕ್ಸ್ಟ್ ಒಂದು ಸರ್ಕಲ್ ಸಿಗುತ್ತೆ. ಸರ್ಕಲ್ ನಿಂದ ರೈಟ್ ಟರ್ನ್ ತೊಗೊಂಡು ಟೂ ಮಿನಿಟ್ ವಾಕ್ ಮಾಡಿದ್ರೆ ನಿಮಗೆ ಒಂದು ಬಿ.ಎಮ್.ಟಿ.ಸಿ. ಬಸ್ ಸ್ಟಾಪ್ ಸಿಗುತ್ತೆ. ಅಲ್ಲಿಂದ ಟೂತರ್ಟಿ ನಂಬರ್ ಬಸ್ ಕ್ಯಾಚ್ ಮಾಡಿ. ಲಾಷ್ಟ ಸ್ಟಾಪೇ ಮೆಜೆಸ್ಟಿಕ್ ಸ್ಟಾಪ್. ಅಲ್ಲಿ ಕಂಡಕ್ಟರ್ ಅಥವ ಯಾರನ್ನಾದರು ಕೇಳಿ ನಿಮಗೆ ಜಯನಗರ ಫೋರ್ತ್ ಬ್ಲಾಕ್ ಗೆ ಹೋಗೋ ಬಸ್ ಬಗ್ಗೆ ಹೇಳ್ತಾರೆ. ಮೋಸ್ಟ್ಲಿ ಫೋರ್ತ್ ಫ್ಲಾಟ್ ಫಾರ್ಮ್ ನಿಂದ ಸಿಕ್ ಸ್ಟೀ ಟೂ ನಂಬರ್ ಹೋಗುತ್ತೆ ಅನಿಸುತ್ತೆ. ಜಸ್ಟ ಮೆಜೆಸ್ಟಿಕ್ ನಲ್ಲಿ ಒಮ್ಮೆ ಎನ್ ಕ್ವಾರಿ ಮಾಡಿ ಕನ್ಪಾರಮ್ ಮಾಡ್ಕೊಳ್ಳಿ"

ಏನಿದು ಯಾಕೆ ಇದನ್ನ ಇಲ್ಲಿ ಹೇಳ್ತೀನಿ ಅಂತ ಕೇಳ್ತೀರ. ಇದು "ನನ್ನ ನಾಡು, ಕನ್ನಡಿಗರ ನಾಡು ಕನ್ನಾಡು ರಾಜ್ಯಧಾನಿ ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನುಡಿಯುವ ಕಸ್ತೂರಿ ಕನ್ನಡ" ಮೇಲಿನ ಸಾಲಿನಲ್ಲಿ ಸಿಗುವುದು ನೂರಕ್ಕೆ ಎಂಬತ್ತರಿಂದ ತೊಂಭತ್ತರಶ್ಟು ಪದಗಳು ಅಪ್ಪಟ ಇಂಬ್ಲೀಚ್ ಪದಗಳೇ. ಕೆಲವು ಪ್ರತ್ಯಯ ಹಾಗು ಜೋಡಿಸುವ ಒರೆಗಳನ್ನು ಬಿಟ್ಟು ಮತ್ತೆಲ್ಲ ಒರೆಗಳು ಬೇರೆ ಬಾಷೆಯ ಪದಗಳೆ. ಇದು ಇವತ್ತು ಬೆಂಗಳೂರಿನ ಕನ್ನಡಿಗರ ಬಾಯಲ್ಲಿ ನಲಿಯುವ ಕನ್ನಡದ ಪಾಡು. ದಿನಪತ್ರಿಕೆಗಳಲ್ಲಿ ಇವತ್ತಿನ ದಿನಗಳಲ್ಲಿ ಕೇಳಿಬರುತ್ತಿರುವುದೇನೆಂದರೆ ಬೆಂಗಳೂರಿನಲ್ಲಿರುವ ಕನ್ನಡಿಗರ ಬಲ ಕೇವಲ ಮೂವತ್ತೆಂಟರಿಂದ ನಲವತ್ತರಷ್ಟು ಎಂದು. ಆ ಮೂವತ್ತು ನಲವತ್ತರಷ್ಟು ಕನ್ನಡಿಗರ ಬಾಯಲ್ಲಿ ನುಲಿಯುವ ಕನ್ನಡದ ಪಾಡು ಇದು. ಅಂದರೆ ನೀವೇ ಊಹಿಸಿಕೊಳ್ಳಿ ನಮ್ಮ ಕಸ್ತೂರಿ ಕನ್ನಡದ ಪಾಡನ್ನು.

ಇನ್ನೂ ಕನ್ನಡದ ಕಣ್ಣೀರಿನ ಕತೆ ಕೇಳಬೇಕೆ ಇಗೋ ಇಲ್ಲಿ ನೋಡಿ
ಜಷ್ಟ್ ಟೂ ಮಿನಿಟ್ ವಾಕ್ ಹೊಡೆದಕ್ಕೆ ಕನ್ನಡದ "ಎರಡು ಗಳಿಗೆಯ ದಾರಿ" ಇಲ್ಲವೆ "ಎರಡು ಹರದಾರಿ", " ಕಣ್ಣಳತೆಯ ದಾರಿ" ಸೆಟ್ಟಹೇರಿ ಸುಡುಗಾಡಿಗೆ ಹೋಗಲು ಕೂತಿದೆ.
"ಹಾಲಲ್ಲಿ ಸೋಫಾದ ಮೇಲೆ ಟೀವಿ ರಿಮೋಟ್ ಇದೆ" ಈ ಸಾಲಲ್ಲಿ ಇರುವ ಕನ್ನಡದ ಒರೆಗಳೆಷ್ಟು? ಮೊಗದೊಂದು "ಮಾರ್ಕೆಟಿಗೆ ಹೋಗಿ ಬೀನ್ಸ್ ತಂದು ಅದನ್ನು ವಾಶ್ ಮಾಡಿ, ಚೆನ್ನಾಗಿ ಕಟ್ ಮಾಡಿ, ಸ್ಟವ್ ಮೇಲಿಟ್ಟು ಸರಿಯಾಗಿ ಫ್ರೈ ಮಾಡಿ ತಿಂದರೆ ಏನ್ ಟೇಸ್ಟ್ ಅಂತೀರಿ... " ಜೊತೆಗೆ ಕನ್ನಡವನ್ನೂ ಸುಟ್ಟು ಬಿಡು ಎಂದೇಳಿಬಿಡೋಣವೇ ಈಗೆ ಕನ್ನಡ ಮಾತನಾಡುವವರಿಗೆ?

ಕೃಷ್ಣೇಗೌಡ್ರು ಎಲ್ಲೋ ಹೇಳಿದಂತೆ..

"ರೀ... ಮದುವೇಗೆ ಹೋಗ್ತಿದೀವಿ... ಗೋಲ್ಡ್ ಜೆವೆಲ್ಸ್... ಅದ್ರಲ್ಲೂ ಆ ದೊಡ್ಡ ನೆಕ್‌ಲೇಸ್ ಹಾಕ್ಕೋಬೇಕೂಂತ ಆಸೆ... ಅವೆಲ್ಲಾ ಇವತ್ತು ನಾನು ಹಾಕ್ಕೋತೀನಿ... ಮ್ಯಾರೇಜ್ ಹಾಲ್‌ನ ಡೋರ್‌ನಲ್ಲೇ ನಿಂತ್ಕೊಂಡು ಎಲ್ರನ್ನೂ ರಿಸೀವ್ ಮಾಡ್ತೀನಿ... ಯಾಕಂದ್ರೆ ಎಲ್ರೂ ನನ್ನ "ನೆಕ್ಲೆಸ್" ನೋಡಿಯೇ ಒಳಹೋಗ್ಬೇಕೂಂತ ಆಸೆ ಕಣ್ರೀ" ಈಗೆ ನೆಕ್, ನೆಕ್ಲೆಸ್ಸ್ ನಮ್ಮ ಬಾಯಲ್ಲಿ ಉಲಿಯುತ್ತಿದ್ದರೆ ಕನ್ನಡ ನೆಕ್ಕಿ ನೆಲಸಾರುವುದಂತೂ ದಿಟ.

ಇದು ಒಂದು ಪಾಡಾದರೆ ಕನ್ನಡದ ಇನ್ನೊಂದು ಪಾಡೇನಪ್ಪಾ ಅಂದ್ರೆ ಬೇಡವಿಲ್ಲದ ಜಾಗದಲ್ಲಿ ಸಂಸ್ಕೃತ ತುರುಕುವುದು. ಹೆಚ್ಚು ಹೆಚ್ಚು ಸಂಸ್ಕೃತ ಒರೆಗಳನ್ನ ಬಳಸುವುದನ್ನೇ ದೊಡ್ಡಸ್ತಿಕೆಯ, ಹಿರಿಮೆಯ ಸಂಕೇತವಾಗಿ ಮಾಡಿಕೊಂಡಿರುವ ಇನ್ನೊಂದು ಹಿಂಡು. ಇಂತಹ ಸಕ್ಕದ ಹಿಂದೆ ಬಿದ್ದಿರುವ ಹಿಂಡಿನಲ್ಲೊಬ್ಬನ ತಿಳಿವಂತನ ಮಾತನ್ನೊಮ್ಮೆ ಕೇಳಿ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ? ಅಯ್ಯೋ ನನ್ನ ಸುಲಿದ ಬಾಳೆ ಹಣ್ಣಿನಂತ ಕನ್ನಡವೇ..ಈ ಜಾಣನಿಗೆ ಅಪ್ಪಟ ಕನ್ನಡ ನುಡಿಬಳಸುವುದಕ್ಕೆ ಏನು ದಾಡಿ. ಅಂಜಿಕೆಯೆ? ಅಳುಕೇ? ಮುಜುಗರವೇ? ಕೀಳರಿಮೆಯೇ? ನಿಧನರಾದರು ಅನ್ನುವ ಪದಕ್ಕೆ ಕನ್ನಡದಲ್ಲಿ ನುಡಿಗಳಿಲ್ಲವೇ? ಇನ್ನೊಬ್ಬ ನನ್ನ ಗೆಣೆಯ ಹೇಳುವಂತೆ ನಿಧನರಾದರು ಎಂಬುದಕ್ಕೆ ಈಗೆಲ್ಲಾ ಒರೆಗಳನ್ನು ಬಳಸಬಹುದಲ್ಲ. ಸತ್ತರು =ತೀರಿಹೋದರು = ಕೊನೆಯುಸಿರೆದರು = ಕಣ್ಮಿದರು=ಶಿವನಡಿಸೇರಿದರು ಮುಂತಾದ ಕನ್ನಡದ ಪದಗಳೇ ಇವೆ.. ಇವನ್ನು ಬಳಸ ಬಹುದಲ್ಲ. ಇದರ ಬದಲು ಸಕ್ಕದ(ಸಂಸ್ಕೃತದ) ನಿಧನ, ಮೃತ, ದಿವಂಗತ, ಇಲ್ಲವೇ ಉರ್ದು ಪದಗಳಾದ ’ಗುಜರ್ ಜಾನ’. ’ಇಂತಿಕಾಲ್’ ಇಲ್ಲವೇ ಇಂಗ್ಲೀಶಿನ ’ಪಾಸ್ ಅವೇ’ ’ಎಕ್ಸ್‌ಪಯಿರ್ಡು’ ಯಾವುದನ್ನೇ ಬಳಸಿದರೂ ಅದು ಕನ್ನಡವಲ್ಲ... ಅದು ಅನ್ಯಬಾಶೆಯ ಪದವೇ. ಈ ಗೆಳೆಯನ ಮಾತು ದಿಟವಾಗಿ ಸರಿ ಅಲ್ಲವೇ?

ಮೇಲೇ ಹೇಳಿದ ಮಾತನ್ನೇ ಒಂದು ಮಾದರಿಯಾಗಿ ನೋಡೋಣ "ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು" ಎನ್ನುವ ಹೆಡ್ ಲೈನ್ ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ ಹೆಡ್ ಲೈನ್ ಕೊಡುವದು ಚಂದ ಕಂಡೀತೆ?
ಇದರಲ್ಲಿ ಚಂದ ಕಾಣುವುದಕ್ಕೂ ಕಾಣದೇ ಇರುವುದಕ್ಕೂ ಮತ್ತು ನಿಧನಕ್ಕು ಇರುವ ನಂಟೇನು? ಸಕ್ಕ ಬಲ್ಲವರಿಗೆ, ಸಕ್ಕವನ್ನು ತಾಯಿನುಡಿಯಾಗಿ ಮಾತನಾಡುವವರಿಗೆ ಸಕ್ಕದಲ್ಲಿ ನಿಧನ ಏನು ತಿಳಿಸುವುದೊ ಕನ್ನಡದ ಬಲ್ಲ ಜನಕ್ಕೆ ತೀರಿದರು, ಕಣ್ಮಿದರು, ಕೊನೆಯುಸಿರೆಳೆದರು, ಅಗಲಿದರು, ದೂರವಾದರು, ಶಿವನಡಿ ಸೇರಿದರು ಇನ್ನು ಹತ್ತು ಹಲವು ನುಡಿಗಳು ತಿಳಿಸುವುದು ಸತ್ತರು ಎನ್ನುವುದನ್ನೇ. ಇಶ್ಟೊಂದು ಕನ್ನಡ ಪದಗಳ ಗಂಟೇ ನಮ್ಮಲ್ಲಿ ಇರುವಾಗ ಬಿಂಕಕ್ಕೋ ಹೆಚ್ಚುಗಾರಿಕೆಗೊ ಸೋತು ಸಕ್ಕಕ್ಕೋ, ಇಂಬ್ಲೀಚಿಗೋ ಇನ್ಯಾವುದೋ ನುಡಿಗೆ ಮಾರು ಹೋಗಿ ಅದಕ್ಕೆ ಅಂಟಿಕೊಂಡರೆ ನಮ್ಮ ಕನ್ನಡದ ಗತಿ? ನಮ್ಮಲ್ಲಿ ತೀರಿದರು ಅನ್ನೋ ನುಡಿಗೆ ಬದಲಿ ಪದ ಇರಲಿಲ್ಲ ಅಂದರೆ ಸಕ್ಕದ ಬಗ್ಗೆ ಅವರು ಕೊಡುವ ಹಂಚಿಕೆ (ತರ್ಕ) ಒಪ್ಪಬಹುದಿತ್ತು. ಹೀಗೇ ಸಕ್ಕದ ಅಟ್ಟಹಾಸ ಮುಂದುವರಿದರೆ ನಮ್ಮ ಕನ್ನಡದ ಪದಗಳು ನಮ್ಮವು ನಮ್ಮ ಕನ್ನಡದವು ಅಂತ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುವುದು ಹೇಗೆ? ಇದು ಕೀಳರಿಮೆಯೋ ಇಲ್ಲ ಅಡಿಯಾಳುತನವೋ ಒಟ್ಟಿನಲ್ಲಿ ನಮ್ಮ ಕನ್ನಡವಂತು ಸಕ್ಕ, ಇಂಬ್ಲೀಚು ಹೊರೆಯಲ್ಲಿ ಸಿಕ್ಕು ನೆತ್ತರುಕಾರಿ ನಲುಗುತ್ತ ಬಿಕ್ಕುತ್ತಿರುವುದಂತೂ ನೂರರಶ್ಟು ದಿಟ. ಬೇರೆ ನುಡಿಗಳ ಬೇಡಿಯಿಂದ ನಾವು ಜೊತೆಗೆ ನಮ್ಮ ಕನ್ನಡವನ್ನು ಬಿಡುಗಡೆ ಗೊಳಿಸುವುದನ್ನು ನಾವು ತಿಳಿದುಕೊಂಡು ಮುನ್ನಡೆಯಬೇಕು ತಾನೆ? ಹೌದು ಹತ್ತಾರು ಜನರು ಹತ್ತಾರು ಬಗೆಯಲ್ಲಿ ತಮ್ಮ ಹಂಚಿಕೆಯನ್ನು ಕೊಡುತ್ತಾರೆ. ನುಡಿ ನಿಂತ ನೀರಾಗಬಾರದೆಂದರೆ ಬೇರೆ ನುಡಿಯ ಪದಗಳನ್ನು ಬಳಸಬೇಕು. ಆಗ ನಮ್ಮ ನುಡಿ ಬೆಳೆಯುತ್ತದೆ ಎನ್ನುವ ತರ್‍ಕ ಮುದಿಡುತ್ತಾರೆ. ಬೇರೆ ನುಡಿಯ ಪದಗಳನ್ನು ಬಳಸಲೇ ಬಾರದೆಂಬ ಗೊಡ್ಡು ನಮ್ಮದಾಗಬಾರದು. ಆದರೆ ಅದಕ್ಕೊಂದು ಎಲ್ಲೆ ಬೇಕಲ್ಲವೆ? ಈಗೇ ಬೇರೆಯದನ್ನು ಪಡೆಯುತ್ತಲೇ ಹೋದರೆ ನಮ್ಮದು ಬೆಳೆಯುವುದು ಹೇಗೆ? ನಮ್ಮದನ್ನು ಬೆಳೆಸುವ ಬದಲು ಇನ್ನೊಂದಕ್ಕೆ ಯಾವಾಗಲು ಕಯ್ಚಾಚುತ್ತ ಕೂತರೆ ನಮ್ಮದು ಬೆಳೆಯದೆ ನಿಲ್ಲುವುದಿಲ್ಲವೆ? ಆಗ ನಮ್ಮತನ ಉಳಿಯುವುದೆಲ್ಲಿ? ಅದೆಲ್ಲ ಅಲ್ಲಿರಲಿ ಕನ್ನಡದ ಕೊರಗಂತೂ ಮುಗಿಲು ಮುಟ್ಟಿದೆ ಎನ್ನುವುದನ್ನು ಕನ್ನಡಿಗನಾದವನು ಇಂದು ಅರಿಯಲೇ ಬೇಕು.

ಒಮ್ಮೆ ನಾನು ಗುರುನಾಥ ಜೋಶಿಯವರ ’ಒರೆಗಂಟು’(ಶಬ್ದಕೋಶ)ನಲ್ಲಿ ಕನ್ನಡ ಪದ ಹುಡುಕುತ್ತಿದ್ದೆ. ಅದರಲ್ಲಿ ನನಗೆ ತಿಳಿದಿದ್ದೇನಪ್ಪ ಅಂದ್ರೆ ಆ ನುಡಿಗಂಟಿನಲ್ಲಿರುವ ನೂರಕ್ಕೆ ನಲವತ್ತಕಿಂತ ಹೆಚ್ಚು ಪದಗಳು ಸಕ್ಕದ ಪದಗಳೇ. ನನಗೆ ಬೇಕೆಂದಿರುವ ಕನ್ನಡ ಒರೆ ಆ ಹೊತ್ತಿಗೆಯಲ್ಲಿ ಸಿಗುತ್ತಿಲ್ಲ, ಅತವ ಆ ಒರೆಗಂಟಿನಲ್ಲಿ ನನಗೆ ಬೇಕಾಗಿರುವ ಕನ್ನಡ ಪದ ಇಲ್ಲವೇ ಇಲ್ಲ. ನೀವೇ ಊಹಿಸಿ ನಮ್ಮ ಅಚ್ಚಕನ್ನಡದ ಪಡಿಪಾಟಲು. ಕನ್ನಡದ ನಿಗಂಟು ಎಂಬ ತಲೆನಾಮ ಹೊತ್ತು ಬೆಳಕಿಗೆ ಬಂದ ಹೊತ್ತಿಗೆಯಲ್ಲಿ ನಮಗೆ ಸಿಗುವುದು ನಲವತ್ತಕ್ಕಿಂತ ಹೆಚ್ಚಿನ ಒರೆಗಳು ಬೇರೆ ನುಡಿಯವು. ಹೆಚ್ಚಾಗಿ ಸಕ್ಕದ ಒರೆಗಳೆ ತುಂಬಿದ್ದಾರೆ. ಸಕ್ಕದ ಪದಗಳನ್ನು ಕನ್ನಡದಲ್ಲಿ ತರುವುದರಬಗ್ಗೆ, ಬಳಸುವುದರ ಬಗ್ಗೆ ಹಿಗ್ಗಿನಿಂದ ಹೇಳಿಕೊಳ್ಳುವ ಒಂದು ಗುಂಪೇ ಇದೆ. ಅವರು ಇದಕ್ಕೆ ಹೂಡುವ ಹಂಚಿಕೆ, ಕೊಡುವ ಹಂಚಿಕೆ ಏನಪ್ಪ ಅಂದರೆ ಬೇರೆ ಭಾಷೆಯ ಪದಗಳನ್ನು ನಾವು ಬಳಸುವುದರಿಂದ ನಮ್ಮ ನುಡಿ ಬೆಳೆಯುತ್ತೆ. ನಮ್ಮ ನುಡಿಯ ಸಿರಿ ಬೆಳೆಯುತ್ತೆ, ನಮ್ಮ ನುಡಿಯ ಸೊಗಸು ಬೆಳೆಯುತ್ತದೆ ಎಂದು. ಎಲ್ಲಿಯವರೆಗೆ ಬೇರೆ ನುಡಿಗಳ ಒರೆಗಳನ್ನು ಎರವಲು ಪಡೆಯುವುದು? ಎರವಲು ಪಡೆಯಲು ನಮ್ಮಲ್ಲಿ ದಿನಬಳೆಕೆಯ ದಿನಿಸು ಗುರಿತಿಸಲು, ನಮ್ಮ ಸುತ್ತಲಿರುವ ನಿಸರ್ಗವನ್ನು ಗುರುತಿಸಲು, ಪ್ರಾಣಿ, ಹಕ್ಕಿ, ಪಿಕ್ಕಿ, ನೀರು, ನಿಡಿ, ಕಳ್ಳು ಬಳ್ಳಿಗಳನ್ನು, ಕೆಲಸವನ್ನು ಗುರುತಿಸಲು ಕನ್ನಡದಲ್ಲಿ ಒರೆಗಳಿಲ್ಲವೇ? ಒರೆಸಿರಿ ನಮ್ಮಲ್ಲಿ ಇಲ್ಲವೇ? ನಾವು ತೆಗೆದುಕೊಳ್ಳುತ್ತುರುವ ಒರೆಗಳು ನಮ್ಮಲ್ಲಿ ಇಲ್ಲವೇ? ಯಾವುದಕ್ಕಾಗಿ ನಾವು ಈ ಒರೆಗಳನ್ನು ಎರವಲು ತೆಗೆದುಕೊಳ್ಳಬೇಕು? ತೆಗೆದುಕೊಂಡರೂ ಎಷ್ಟು? ಅದಕ್ಕೆ ಮೇರೆ ಬೇಡವೇ? ಎಲ್ಲೆ ಬೇಡವೇ?

ಕುವೆಂಪುರವರ ಒಂದು ಹಾಡನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಇಂತಹ ಸಕ್ಕದ ಬಲೆಯಲ್ಲಿ ಸಿಲುಕಿದ ಕನ್ನಡ ಕಬ್ಬಿಗರ ಬಳಗದಲ್ಲಿ ಬಹಳ ಜನ ಸಿಗುತ್ತಾರೆ. ಇಲ್ಲಿ ಯಾರನ್ನೂ ಹೀಯಾಳಿಸುವುದಕ್ಕಾಗಿಯಾದರು, ಯಾರನ್ನಾದರು ಕೀಳಾಗಿ ಕಾಣುವುದಕ್ಕಾಗಿ, ಯಾರನ್ನಾದರು ಅಲ್ಲಗೆಳೆಯಲಾಗಲಿ ಈ ಹಾಡನ್ನು ಮಾದರಿಯಾಗಿ ತೆಗೆದುಕೊಂಡಿಲ್ಲ. ನಮ್ಮ ನೊರೆಹಾಲಿನಂತ ಚೆಲುಗನ್ನಡ ತಿಳಿದೋ ತಿಳಿಯದೆಯೋ ಸಕ್ಕ, ಇಂಬ್ಲೀಚ್‌ನ ಹುಳಿ ಸೇರಿ ಹೇಗೆ ಒಡಕಲು ಹಾಲಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಇದನ್ನು ಇಲ್ಲಿ ಹೆಸರಿಸಿದ್ದೇನೆ.


ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಬಹಳ ದಿನಗಳಿಂದ ಈ ಹಾಡನ್ನು ಕೇಳಿ ನಲಿದಿದ್ದೇನೆ. ಆದರೆ ಯಾವ ಸಾಲುಗಳು, ಪದಗಳು ನನಗೆ ತಿಳಿಯುತ್ತಿರಲಿಲ್ಲ, ಅರಿವಾಗುತ್ತಿರಲಿಲ್ಲ. ಅಲ್ಲೊಂದು ಇಲ್ಲೋಂದು ಒರೆ ಬಿಟ್ಟು. ನನಗೆ ಕನ್ನಡ ಗೊತ್ತಿರುವುದೇ ಇಷ್ಟೇನೋ ಅಂದು ಕೊಂಡುಬಿಟ್ಟಿದ್ದೆ. ನನ್ನಲ್ಲೇ ಕೀಳರಿಮೆ ಬೆಳೆದು ಮುತ್ತಿಕೊಂಡಿತ್ತು. ತುಂಬಾ ಮಂದಿಗಳಲ್ಲಿ ತಿರುಳೇನೆಂದು ಕೇಳಿದರು ಸರಿಯಾಗಿ ಯಾರಿಗೂ ಗೊತ್ತಿರಲಿಲ್ಲ. ಯಾರನ್ನು ಕೇಳಿದರೂ ಕುವೆಂಪು ಬರೆದಿರುವುದು, ತುಂಬಾ ಎತ್ತರದ ಕನ್ನಡದಲ್ಲಿದೆ ಅಂತ ಜಾರಿಕೆಯ ಮಾತು ಹೇಳಿಬಿಡುತಿದ್ದರು. ಒಂದು ದಿನ ನಾನೆ ಒರೆಗಂಟು ಹಿಡಿದು ಕೂತೆ. ವೆಂಕಟ ಸುಬ್ಬಯ್ಯನವರ ಒರೆಗಂಟಿನಲ್ಲಿ ಜಾಲಾಡಿದೆ, ಕಸ್ತೂರಿ ಕನ್ನಡದಲ್ಲಿ ತಡಕಾಡಿದೆ, ಶಾಬದಿಮಠದ ಹೊತ್ತಿಗೆ ನೋಡಿದೆ, ಗುರುನಾಥಜೋಶಿಯವರ ಒರೆಗಂಟಿನಲ್ಲೂ ಹುಡುಕಾಡಿದೆ. ಅಷ್ಟೂ ಕನ್ನಡ ಒರೆಗಂಟಲ್ಲಿ ಎಷ್ಟೊಂದು ಪದಗಳೇ ಸಿಗುತ್ತಿರಲಿಲ್ಲ. ಸಿಕ್ಕರೂ ಯಾವುದು ಒರೆಯೂ ಕನ್ನಡದ್ದಲ್ಲ. ತದಬಳಿಕ ಒಂದು ದಿನ ಗೊತ್ತಾಯಿತು. ಈ ಹಾಡಲ್ಲಿ ಇರುವುದು ಕನ್ನಡ ನುಡಿಗಳಲ್ಲ ಬರಿ ಸಂಸ್ಕೃತ ಒರೆಗಳು. ಹುಡುಕಿ ನೋಡಿದಾಗ ನೂರಕ್ಕೆ ತೊಂಬತ್ತು ಪದಗಳು ಸಂಸ್ಕೃತ ಒರೆಗಳೇ. ಹೀಗೆ ಸಕ್ಕದ ಒರೆಗಳಿಂದ ಬರೆದ ಹಾಡು ಹೇಗೆ ತಿಳಿಯಬೇಕು ನಮ್ಮಂತ ಕನ್ನಡದ ಹಳ್ಳಿ ಹೈದರಿಗೆ?? ಮೇಲಿನ ಕಬ್ಬದಲ್ಲಿರುವುದು ನಲವತ್ತೆಂಟು ಸಕ್ಕದ ಒರೆಗಳು. ಮಿಕ್ಕಿದ್ದು ಎಶ್ಟು? ಅಯ್ಯೋ ನನ್ನ ಕಸ್ತೂರಿ ಕನ್ನಡವೇ..ಅಯ್ಯೋ ಕನ್ನಡದ ರಸಕವಿಯೇ ಯಾಕಪ್ಪ ಹೀಗೆ ಮಾಡಿದೆ ಅನ್ನಿಸಿಬಿಟ್ಟಿತು. ಕುವೆಂಪುರವರನ್ನು ರಸಕವಿ ಎಂದು ಒಪ್ಪಿಕೊಳ್ಳುವೆ ಇದಕ್ಕೆ ಎರಡು ಮಾತಿಲ್ಲ. ಆದರೆ ಕನ್ನಡದ ಕವಿ ಎಂದು ನಾ ಹೇಗೆ ಒಪ್ಪಿಕೊಳ್ಳಲಿ? ಅವತ್ತಿನಿಂದ ನನಗೆ ಕುವೆಂಪು ಮೇಲೆ ಇದ್ದ ಕೈವಾರ (ಅಭಿಮಾನ) ಕಿಂಚಿತ್ತಾದರು ಕಡಿಮೆ ಆಗದಿರಲಿಲ್ಲ.

ಕನ್ನಡ ನಾಡಗೀತೆ "ಜಯಭಾರತ ಜನನಿಯ ತನು ಜಾತೆ" ಇದು ಕೂಡ ಸಕ್ಕಮಯ. ನಮ್ಮ ನಾಡಗೀತೆಯನ್ನೊಮ್ಮೆ ಒಳಹೊಕ್ಕು ಬಿಡಿಸಿ ಬಿಡಿಸಿ ನೋಡಿ ಎಷ್ಟು ಕನ್ನಡ ನುಡಿಗಳು ಆ ಹಾಡಿನಲ್ಲಿ ಬಳಕೆಯಾಗಿವೆ? ಬರಿ ಹೋಳು. ನೇರವಾಗಿ ಕನ್ನಡದ ಬದಲು ಸಂಸ್ಕೃತನೆ ಓದಬಹುದಲ್ಲ!!

ಇವತ್ತು ಇಂತಹ ಸಂಸ್ಕೃತ ಪ್ರೇಮಿಗಳು ನೀಡುವ ಹಂಚಿಕೆಯಂತೆ ನಮ್ಮ ಕನ್ನಡ ನುಡಿ ಬೆಳೆಯುವುದಕ್ಕೆ ಹೊಂದಿಕೊಳ್ಳುವ ಕೆಲವು ನುಡಿ ಬಳಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇವರ ಹಂಚಿಕೆ ನಾವು ಒಪ್ಪೋಣ. ನಮ್ಮದಲ್ಲದಿದ್ದರೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಎದೆಗಾರಿಕೆ ತೋರೋಣ. ಆದರೆ ಅದೇ ನಮ್ಮ, ನಮ್ಮತನಕ್ಕೆ ಉರುಳಾದರೆ ಇನ್ನು ನಮ್ಮದು ಅನ್ನುವುದು ಏನು ಉಳಿಯುತ್ತೆ? ನಮ್ಮದು ನಮ್ಮತನ ಅನ್ನುವುದನ್ನು ನಾವು ಜಗತ್ತಿಗೆ ಹೇಗೆ ತೋರಿಸುವುದು? ನಮ್ಮತನ ತೋರಲು ನಾವು ತೊಡುವ ಬಟ್ಟೆಬರೆ, ನಮ್ಮ ನಡೆ, ನಮ್ಮ ಬದುಕು, ನಾವಾಡುವ ನುಡಿ, ನಾವು ಉಣ್ಣುವ ಕೂಳು ನಮ್ಮವಾಗಿರಬೇಕು ತಾನೆ. ನಮ್ಮತನ ತೋರಲು ಎಲ್ಲದಕ್ಕಿಂತ ಮೇಲೆ ನಿಲ್ಲುವುದು ನಾವಾಡುವ ನುಡಿ.
ಆ ನಮ್ಮ ನುಡಿಯ ಇಂದಿನ ಪಾಡು ಕೇಳಿದಿರಿ. ಇಂದು ನಮ್ಮ ಕನ್ನಡ ಅಚ್ಚ ಕನ್ನಡ ಕಂಪುಸೂಸುವ ’ಕಸ್ತೂರಿ ಕನ್ನಡ’ ವಾಗಿ ಉಳಿದಿಲ್ಲ. ಸಿಕ್ಕಸಿಕ್ಕ ಭಾಷೆಯನ್ನು ಅರಗಿಸಿಕೊಂಡು ಮುಸುರೆಯಾಗಿ ಗಬ್ಬು, ಸಿಂಡು ಸಿಂಡುನಾತವಾಗಿ ಹೋಗಿದೆ. ಸಕ್ಕದ ’ಅನ್ನ’ ಎಂಬ ಹೊರೆಗೆ ಸಿಕ್ಕ ಕನ್ನಡದ ’ಕೂಳು’ ಇನ್ನಲ್ಲವಾಗುತ್ತಿದೆ. ಪಡಸಾಲೆ ಮರೆಯಾಗಿ ಡೈನಿಂಗ್ ಹಾಲ್ ಮನೆಯಲ್ಲಿ ನುಸಿಳಿದೆ. ಊಟಕ್ಕೆ ಬದಲಾಗಿ ಮೀಲ್ಸ್, ಲಂಚ್, ದಿನ್ನರ್ ಸಪ್ಪರ್, ಹೈಟೆಕ್ ಐ.ಟಿ ಕನ್ನಡಿಗರ ಬಾಯಲ್ಲಿ, ಅಕ್ಷರ ತಿಳಿದವರಲ್ಲಿ ಉಲಿಯುತ್ತಿವೆ.
ಬೆಂಗಳೂರಿನಲ್ಲಿನ ಕನ್ನಡದ ಇನ್ನೊಂಡು ಮುಖ ನೋಡಿ. ನೀವು ಯಾವುದೇ ದಿನಿಸಿ ಅಂಗಡಿ, ಹಣ್ಣಿನ ಅಂಗಡಿ, ತಿಂಡಿ ಅಂಗಡಿಯ ಮೇಲೆ ಬರೆದಿರುವ ಹೆಸರುಗಳನ್ನು ನೋಡಿ. ನಿಮಗೆ ಸಿಗುವುದು ನೂರಕ್ಕೆ ಎಂಬತ್ತರಷ್ಟು ಇಂಬ್ಲೀಚ್ ನುಡಿಗಳು. ಉದಾಹರಣೆಗೆ ಕೆಲವನ್ನು ಇಲ್ಲಿ ಬರೆದಿರುವೆ " ಪಾಟ್ಕರ್ ಜ್ಯೂಸ್ ಅಂಡ್ ಚಾಟ್ಸ್" ,"ಬಸವೇಶ್ವರ ಕಾಂಡಿಮೆಂಟ್ಸ್ ಅಂಡ್ ಜನರಲ್ ಸ್ಟೋರ್ಸ್" "ಮಂಜುನಾಥ ಫಾಸ್ಟ್ ಫುಡ್ಸ್" " ಗುರುಶ್ರೀ ಹೋಂ ಫುಡ್ಸ್" ಅಕ್ಶರ ಮಾತ್ರ ಕನ್ನಡದ್ದು ಒರೆ ಇನ್ಯಾರದ್ದೊ. ಯಾಕೆ ಈ ಗುಲಾಮಿತನ.

ಯಾಕೆ ಈ ಹೀನತನ ಈ ಕನ್ನಡಿಗರಿಗೆ? ಇನ್ನು ದಾರಿಯ ಹೆಸರು, ಬೀದಿಯ ಹೆಸರು, ಓಣಿಯ ಹೆಸರು, ಎಲ್ಲವು ಇಂಬ್ಲೀಚ್ ಅಥವ ಸಂಸ್ಕೃತ ನುಡಿಗಳಿಂದ ಮೇಳೈಸುತ್ತಿವೆ. "ಮೆಜೆಸ್ಟಿಕ್" "ಎಮ್. ಜೀ. ರೋಡ್" "ಬ್ರಿಗೇಡ್ ರೋಡ್" " ಏರ್ ಪೋರ್ಟ ರೋಡ್" " ಹಡ್ಸನ್ ಸರ್ಕಲ್" " ಲಾಲ್ ಬಾಗ್" " ಕಬ್ಬನ್ ಪಾರ್ಕ" ನೂರಾರು ಇಂತಹ ಉದಾಹರಣೆಗೆ ಕೊಡಬಹುದು. ಕನ್ನಡ ಸೊಡರು ತುಂಬಿರುವ ಹೆಸರು "ಬಸವನಗುಡಿ" ಬುಲ್ ಟೆಂಪಲ್ಲಾಗಿದೆ. ಇಂದು ಇನ್ನೂ ಮಹಾತ್ಮಗಾಂಧಿ ಬೀದಿಗೆ ಹೋದರಂತು ನಾವಿರುವುದು ಕನ್ನಾಡಿನ ಬೆಂಗಳೂರಿನಲ್ಲೋ ಅಥವ ಅಮೇರಿಕದ ಬೆಂಗಳೂರಿನಲ್ಲೋ ಅನ್ನಿಸುವುದು.

ಶೌಚಾಲಯ, ಮಹಿಳೆ, ಪುರುಷ, ನಗರ, ಸದನ, ನಿವಾಸ, ಸೌದ, ಭವನ ಬರಿ ಸಕ್ಕದ ಒರೆಯ ಹೊರೆ. ಎಷ್ಟು ನಾಚಿಕೆಗೇಡಲ್ಲವೆ ಕನ್ನಡದ್ದು. ಶೌಚಾಲಯಕ್ಕೆ ಕಕ್ಕಸುಮನೆ, ದೊಡ್ಡಿ ಅಂತ ಬರೆಯಲು ನಮಗೆಲ್ಲ ಯಾಕಿಷ್ಟು ಕೀಳರಿಮೆ? ಪುರುಷ, ಮಹಿಳೆಗೆ ಗಂಡಸರು, ಹೆಂಗಸರು ಅಂತ ಹೇಳುವುದಕ್ಕೆ ಏನು ದಾಡಿ? ಸದನ, ನಿವಾಸಕ್ಕೆ ಬದಲು ಮನೆ, ಉಪ್ಪರಿಗಿ, ಮಾಳಿಗೆ ಅನ್ನುವುದಕ್ಕೆ ನಮ್ಮಲ್ಲರಿಗೇಕೆ ನಾಚಿಕೆ? ಇನ್ನು ನಮ್ಮ ಸರಕಾರದ ಪಾಲಿಕೆಗಳಂತು ಬಿಡಿ ಎಲ್ಲಾ ಸಂಸ್ಕೃತಮಯ. ಪಾಲಿಗೆ, ಪುರಸಭೆ, ನಗರಸಭೆ..ಇನ್ನೇನೇನೋ. ಇದಕ್ಕೆಲ್ಲ ಕಾರಣವೇನು ’ಸಕ್ಕದ ಹಿರಿದು, ಕನ್ನಡ ಕೀಳು’ ಎಂಬ ತಪ್ಪು ತಿಳುವಳಿಕೆ ಇಲ್ಲ ಸಕ್ಕದ ಒರೆ ಬಳಸುವುದರಿಂದ ಕನ್ನಡದ ಸೊಬಗು ಹೆಚ್ಚಾಗುದೆಂಬ ತಪ್ಪು ನಂಬಿಕೆ. ಇಲ್ಲವೆ ಕನ್ನಡ ಬಳಸಲು ಕೀಳರಿಮೆ. ಇಲ್ಲವೆ ನನ್ನನ್ನೇ ಮಾದರಿಯಾಗಿ ತೆಗೆದುಕೊಂಡರೆ ಕನ್ನಡದಲ್ಲಿ ಒರೆಗಳೇ ಇಲ್ಲವೆನ್ನುವ ಅರೆತಿಳುವಳಿಕೆ. ಇನ್ನು ಕೆಲವರು ಇಂತಹ ಕನ್ನಡ ಒರೆಗಳು ಯಾರಿಗೂ ಗೊತ್ತಿಲ್ಲ, ನಾವು ಬರೆದರೆ, ಬಳಸಿದರೆ ಬೇರೆಯವರಿಗೆ ತಿಳಿಯುವುದಿಲ್ಲ ಅನ್ನುವ ಹಂಚಿಕೆ ಮುಂದಿಡುತ್ತಾರೆ. ಅಯ್ಯೋ ದೇವರೆ ಬಳಸದೇ, ಬರೆಯದೇ ಹೇಗೆ ತಿಳಿಯಬೇಕು? ಬಳಕೆಗೆ ತಂದರೆ ತಾನೆ ತಿಳಿಯುವುದು! ಇದು ಒದ್ತರ ಸಕ್ಕ, ಇಂಬ್ಲೀಚ್ ಮೇಲಿನ ಒಲವಿರುವವರ ಸೋಗಲಾಡಿತನ ಎನ್ನುವುದ ದಿಟ. ಎಗ್ಗಿಲ್ಲದೆ ನುಗ್ಗಿ ಅಡರಿರುವ ಬೇರೆ ನುಡಿಯ ಪದಗಳು ನಮ್ಮ ನುಡಿಯ ಬೆಳವಣಿಗೆ ಕುಂಟಿತ ಗೊಳಿಸದೇ ಇರಲಾರವು. ಇನ್ನೂ ಅಸಯ್ಯ ಪಡುವಂತ ಉದಾಹರಣೆ ಬೇಕೆಂದರೆ ಕನ್ನಡ ನಮ್ಮ ಉಸಿರು ಎಂದೆನ್ನುವಂತೆ ತೊರಿಸಿಕೊಳ್ಳುವ "ಕನ್ನಡ ರಕ್ಷಣಾ ವೇದಿಕೆ" ಈ ಗುಂಪಿನ ಹೆಸರಲ್ಲಿ ಇರುವ ಮೂರು ಒರೆಗಳಲ್ಲಿ ಎರಡು ಒರೆ ಅಪ್ಪಟ ಸಕ್ಕ. ಇವರೇನು ಕನ್ನಡ ಉಳಿಸುವರೊ ಕನ್ನಡ ಮಾತೆಗೇ ತಿಳಿದಿರಬೇಕು. "ಕನ್ನಡ ರಕ್ಷಣಾ ವೇದಿಕೆ"ಗೆ ಬದಲಾಗಿ "ಕನ್ನಡ ಕಾವಲು ಬಳಗ" ಯಾಕಾಗಬಾರದಾಗಿತ್ತು? "ಕನ್ನಡ ಕಾವಲು ಒಡ್ಡಣ" ಎಂದು ಬಳಸಬಹುದಿತ್ತಲ್ಲವೆ? "ಕನ್ನಡ ಕಾಪು ಪಡೆ" ಎಂದೇಕೆ ಆಗಲಿಲ್ಲ?

ನಮ್ಮತನ ಹಾಳಗದಂತೆ ಬೇಕೆನಿಸುವಷ್ಟು ಸಂಸ್ಕೃತ ಹಾಗು ಇತರ ನುಡಿಯ ಪದ ಬಳಸುವುದು ಸರಿ. ಆದರೆ ಅದನ್ನೇ ಹಮ್ಮೆ ಅಂದುಕೊಳ್ಳುವುದು, ಅದನ್ನೇ ಹಿರಿತನ ಅಂದುಕೊಳ್ಳುವುದು, ಸಂಸ್ಕೃತ ಬಳಸದವರನ್ನು ಕೀಳಾಗಿ ಕಾಣುವುದು ಕನ್ನಡಿಗನಾಗಿ ಅಸಯ್ಯವಲ್ಲವೆ? ಇದು ಈಗೆ ಮುಂದುವರಿದರೆ ಇನ್ನು ನಮ್ಮ ಮುಂದಿನ ಪೀಳಿಗೆಗೆ ನಮ್ಮತನ, ಕನ್ನಡತನ ಅನ್ನುವುದನ್ನು ಈಗಿತ್ತು ಅಂತ ದಂತ ಕತೆಗಳನ್ನು ಹೇಳಬೇಕಾಗುತ್ತದೆ. ಈಗಾದರೆ ಮುಂದೆ ನಮ್ಮ ಕನ್ನಡ ಬೆಳೆಯುವುದೆಂತು? ಇಂದು ಕನ್ನಡಿಗನಾದವನು ಯೋಚಿಸಬೇಕಲ್ಲವೆ? ಒಂದು ಕಡೆ ಉದಾರಿಕರಣ, ವೈಶವಿಕರಣ, ಕೆಲಸ, ಶಿಕ್ಷಣದ ಹೆಸರಿನಲ್ಲಿ ಅಬ್ಬರಿಸಿ ಅಡರಿ ಮುತ್ತಿಕೊಳ್ಳುತ್ತಿರುವ ಇಂಬ್ಲೀಚ್. ಐಟಿ, ಬೀಟಿ, ಬಿಪಿಓ ಮಾಯಾಬಲೆಯಲ್ಲಿ ಸಿಕ್ಕಿ ಅಮೇರಿಕ, ಯುರೋಪಿನವರಂತೆ ಮಾತನಾಡುತ್ತ, ಅವರಂತೆ ಆವ ಭಾವ ಮಾಡುತ್ತ, ಅವರಂತೆ ಬಟ್ಟೆ ಬರೆ ತೊಡುತ್ತ, ಅದನ್ನೇ ಮಹಾಸಾಧನೆ ಎಂಬಂತೆ ಬೀಗುವ ಸೋಗಲಾಡಿ ನಮ್ಮವರಿಂದಲೇ ಕುಲಗೆಟ್ಟಿರುವ ಕನ್ನಡವನ್ನು ತಿಳಿಗೊಳಿಸಬೇಕು. ಪುರಾತನದು, ದೇವಭಾಷೆ, ಸನಾತನ ಭಾಷೆ ಎಂಬ ಪಟ್ಟಕಟ್ಟಿಕೊಂಡು ಮೆರೆದಾಡುತ ಸೋಗಲಾಡಿ ಸಂಸ್ಕ್ರತ, ಕನ್ನಡವನ್ನು ನುಂಗಿಹಾಕದೇ ಇರುವುದಿಲ್ಲ. ನಮ್ಮನ್ನು ನಾವು ಉಳಿಸಿಕೊಳ್ಳ ಬೇಕು, ನಮ್ಮತನ ಉಳಿಸಿಕೊಳ್ಳ ಬೇಕು. ಅದು ಇದು ಅವರದು ಇವರದು ಎಲ್ಲದ್ದನ್ನೂ ಕಲಸಿದ ಮುಸುರೆಯಾಗಿ ಅಲ್ಲ. ಕಸ್ತೂರಿ ಕನ್ನಡವಾಗಿ. ನಮ್ಮ ಕನ್ನಡ ಸಿರಿವಂತ ನುಡಿ. ಬದುಕಿಗೆ ಬೇಕಾದ ಎಲ್ಲಾ ಕೆಲಸ, ಎಲ್ಲಾ ದಿನಿಸಿಗಳನ್ನು, ಎಲ್ಲಾ ನಂಟನ್ನು ತೋರಿಸಲು ಸಾಕಾಗುವಶ್ಟು ಒರೆಸಿರಿ ನಮ್ಮಲ್ಲಿದೆ. ಹೊಸದಾಗಿ ಬಂದ ವಿಗ್ನಾನದ, ಯಂತ್ರಗಳ ಮುಂತಾದದವುಗಳ ಹೆಸರುಗಳನ್ನು ನಾವೇ ಕನ್ನಡದಲ್ಲಿ ಹುಟ್ಟುಹಾಕೋಣ. ಕನ್ನಡದಲ್ಲಿ ಸರಿಯಾದ ನುಡಿ ಹೊಂದಿಸಲಾಗದಿದ್ದರೆ ಬೇರು ನುಡಿಲ್ಲಿರುವ ಒರೆಯನ್ನೇ ಆ ನುಡಿಯಿಂದ ಎರವಲು ಪಡೆಯೋಣ. ಕನ್ನಡಕ್ಕೆ ಹೊಂದಿಕೊಳ್ಳದ ಪದವನ್ನು ನಮಗೆ ಹೊಂದಿಕೊಳ್ಳುವಂತೆ ತದ್ಬವವಾಗಿ ಬದಲಿಸಿ ಬಳಸೋಣ. ಆದರೆ ಕುರುಡರಂತೆ ಎಲ್ಲದ್ದನ್ನೂ ಒಪ್ಪಿಕೊಂಡರೆ ಎರಡುಸಾವಿರೇಡಿನ (ವರುಶದ) ಇತಿಹಾಸವಿರುವ ನಮ್ಮ ಹೆಮ್ಮೆಯ ಸಿರಿಗನ್ನಡದ ಬದುಕು ಮಣ್ಣುಗೂಡೀತು. "ಕಸ್ತೂರಿ ಕನ್ನಡ"ದ ಸವಿಗಂಪು ಕೊಳೆತ ಮುಸುರೆಯ ನಾತವಾಗಲು ನಾವು ಕಾರಣರಾಗದಂತ ಬದುಕನ್ನು ನಾವು ನಡೆಸಬೇಕು. ಆ ನಿಟ್ಟಿನಲ್ಲಿ ನಮ್ಮ ತಿಳುವಳಿಕೆಗಳನ್ನ ಹರಿದು ಬಿಡೋಣ.

ನನ್ನ ಈ ಬರಹದಲ್ಲಿ ಹಲವು ಸಕ್ಕದ ಒರೆ ಬಳಸಿರುವೆ. ಹಾಗೆ ಬಳಸಲು ನನ್ನ ಅರೆ ತಿಳುವಳಿಕೆ ಎಂಬುದು ದಿಟ. ಇಲ್ಲವೆ ಹುಟ್ಟಿದಾಗಿನಿಂದ ಈಬಗೆಯ ಕಲಬೆರೆಕೆಯದನ್ನುನ್ನು ಕಲಿತಿದ್ದರ ಬೆಳೆ ಇದು. ನನ್ನ ಮುಂದಿನ ಗುರಿ ಹೆಚ್ಚು ಹೆಚ್ಚು ಕನ್ನಡದ ಒರೆ ಬಳಸುವುದು. ಕನ್ನಡದ ಪದಗಳನ್ನು ಹುಡುಕಿ ಬಳಕೆಗೆ ತರುವುದು. ನನ್ನ ಬರಹದಲ್ಲಿ ಅವುಗಳನ್ನು ಬಳಸುವುದು. ನೂರಕ್ಕೆ ನೂರು ಬೇರೆ ನುಡಿಯ ಪದ ಬಳಸ ಬಾರದೆನ್ನುವುದು ಪೆದ್ದುತನ ಎನ್ನುವುದು ತಿಳಿದು ಜೊತೆಗೆ ಎಲ್ಲೆ ಮೀರಿದ ಬಳಕೆ ನಮ್ಮತನವನ್ನು ಮಣ್ಣುಗೂಡಿಸುತ್ತದೆ ಎನ್ನುವ ಎಚ್ಚರಿಕೆಯಲ್ಲಿ ಇರಬೇಕು. ಬೇರೆಯವರಿಗೆ ತಿಳಿಯುವುದಿಲ್ಲವೆಂದು ಇಂದು ನಾವು ಇದ್ದ ನಮ್ಮದೇ ನುಡಿಯ ಒರೆಗಳನ್ನು ಬಳಸದೇ ಇನ್ನೋಂದು ನುಡಿಯ ಒರೆ ಬಳಸಿದರೆ ನನ್ನ ಮಟ್ಟಿಗೆ ಅದು ಕನ್ನಡಕ್ಕೆ ಬಂದ ಕುತ್ತು. ಬೇರೆ ನುಡಿಯ ಒರೆಯನ್ನು ಬಳಸುವುದರಿಂದ ನಮ್ಮ ನುಡಿಯ, ನಮ್ಮತನದ ಬೆಳವಣಿಗೆ ಕುಂಟಿತವಾಗುತ್ತದೆ. ನಮ್ಮತನ ಮಣ್ಣುಮುಕ್ಕುತ್ತದೆ. ನಮ್ಮ ಕಸ್ತೂರಿ ಕನ್ನಡದ ಕಂಪು ಕಸ್ತೂರಿಯದಾಗಬೇಕಾದರೆ ನಾವು ನಮ್ಮದನ್ನು ಬೆಳಸ ಬೇಕು ಬಳಸ ಬೇಕು. ಇವತ್ತು ಕನ್ನಡನುಡಿ ಕನ್ನಡವಾಗಿ ಉಳಿದಿಲ್ಲ. ಎಲ್ಲೆಯಿಲ್ಲದೆ ಸಕ್ಕ, ಇಂಬ್ಲೀಚ್‌ಗಳ ಬಳಕೆಯಿಂದ ಕಲಬೆರೆಕೆಯಾಗಿದೆ. ಕನ್ನಡದ ಸೊಗಸು ಕನ್ನಡದಲ್ಲಿ ಇಂದು ಉಳಿದಿಲ್ಲ. ಕನ್ನಡದ ಬದುಕು ಅಮೇರಿಕ, ಯುರೋಪುಗಳ ಕುರುಡು ಅನುಕರಣೆಯಲ್ಲಿ ಸಿಲುಕಿ ಸಾಯುತ್ತಿದೆ. ಇವತ್ತು ಕನ್ನಡಕ್ಕೆ ಶಾಸ್ತ್ರಿಯ ಸ್ತಾನ ಮಾನ ಸಿಕ್ಕಿದೆ ಎಂದು ಎದೆಯುಬ್ಬಿಸಿ ಹೇಳುವಂತಿಲ್ಲ. ಶಾಸ್ತ್ರೀಯ ಸ್ತಾನ ಮಾನ ಸಿಕ್ಕೊಡನೆ ಕನ್ನಡ ಬೆಳೆದು ಬಿಡುವುದಿಲ್ಲ. ಆ ಸ್ತಾನ ಸಿಕ್ಕಿರುವುದರಿಂದ ಕನ್ನಡಕ್ಕೇನು ಒಳಿತಿಲ್ಲ. ಕೆಲವು ಪುಂಡ ಪೋಕರಿಗಳು ತಿಂದು, ಕುಡಿದು, ಕುಪ್ಪಳಿಸಿ ಮೆರೆದಾಡಲು ಅನುವಾಗಿದೆ. ಜೊತೆಗೆ ಕನ್ನಡತನ ಸಾಯುತ್ತದೆ ಅಶ್ಟೆ. ಇಂದು ತನ್ನದೇ ಒರೆಗಳನ್ನು ಬಳಸುವುದರಲ್ಲಿ ಕನ್ನಡ, ಕನ್ನಡಿಗರು ಸೋತಿದ್ದಾರೆ. ಕನ್ನಡವನ್ನು ಬದುಕಲ್ಲಿ ಬಳಸಲು ಕನ್ನಡಿಗರು ಮರೆತಿದ್ದಾರೆ. ಇಂದು ನಾವೆಲ್ಲ ಸೇರಿ ಕನ್ನಡವನ್ನು ಬೆಳಸಿ ಬಳಸ ಬೇಕಾಗಿದೆ. ಆಗ ನಮ್ಮ ಕನ್ನಡ ಕಸ್ತೂರಿ ಕನ್ನಡವಾದೀತು. ಬನ್ನಿ ಎಲ್ಲರು ಕೂಡಿ ಕೊಳಕಾಗಿರುವ ಕನ್ನಡವನ್ನು ತಿಳಿಯಾಗಿಸುವುದೇಗೆಂದು ಇಲ್ಲಿ ಮಾತನಾಡೋಣ. ನಮ್ಮದೇ ನಾಡನ್ನು ಕಟ್ಟಲು ಅಲ್ಲಿ ನಮ್ಮತನವನ್ನು ಬೆಳಸುವುದು ಹೇಗೆಂದು ಇಲ್ಲಿ ವಿಚಾರ ಮಾಡೋಣ ಬನ್ನಿ ಕನ್ನಾಡಿನ ಗೆಳೆಯರೆ.

ನನ್ನಿ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
"ನಾನು ಕನ್ನಡಿಗ ಇದಕ್ಕಿಂತ ಹೆಚ್ಚುಗಾರಿಕೆ ಎನಗಿನ್ನೊಂದಿಲ್ಲ"
kadakolla@gmail.com

1 comments:

ಓದಲು ತೊಡಗಿದಾಗ ಮೊದಲಲ್ಲಿ ನೀವು ಕೊಟ್ಟಿರುವ ಉದಾಹರಣೆಗಳನ್ನು ನೋಡಿ ನಗು ಬಂತು.. ಆದರೆ ಮುಂದೆ ನೀವು ಗಹನವಾಗಿ ಬರೆದಿರುವ ಬರಹ ನೋಡಿ ಸಂತಸವಾಯಿತು. ಆದಷ್ಟೂ ಕನ್ನಡ ಪದಗಳನ್ನು ಬಳಸಲು ಯತ್ನಿಸಬೇಕಾಗಿದೆ. ಚೆನ್ನಾಗಿ ಬರೆದಿದ್ದೀರಿ...

December 12, 2008 at 11:10 AM  

Newer Post Older Post Home

Blogger Template by Blogcrowds