ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?

ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆಗಳುತೇಲುತಿವೆ
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ

ಎದೆ ಎದೆಗಳ ನಡುವೆ ಇದ್ದ
ಸೇತುವೆಗಳು ಮುರಿದಿವೆ
ಭಯ-ಸಂಶಯ- ತಲ್ಲಣಗಳ
ಕಂದರಗಳು ತೆರೆದಿವೆ

ಮುಕ ಮುಕವೂ ಮಕವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ

ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಗೋಡೆ
ಹಾಡಿದವರು: ಅಶ್ವತ್

** ಅವಾಹನೆ **

ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರಿಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಉಸಿರೇಳಲಿ ನವುರಾಗಿ!

ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ,
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿ ಚೆಲು ಬೆರಳಾಗಿ!

ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೋಗರಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ

ಎಲ್ಲೋ ದೂರದಿ ಚಿಕ್ಕಿ ಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೆ,
ಬನ್ನಿ ನನ್ನೆದೆಯ ಲಾಸ್ಯವನಾಡಿರಿ
ಚಿಮ್ಮಲಿ ನಲಿವಿನ ಬುಗ್ಗೆಗಳು

ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಕಾರ್ತೀಕ

Newer Posts Older Posts Home

Blogger Template by Blogcrowds