ಯಾವ ಹಾಡು ಹಾಡಲಿ?

ಬಣ, ಮತ, ದರ್ಮದ ಗುಂಗಿನಲ್ಲಿ ಹೊತ್ತಿ ಉರಿಯುವ ಇಂದಿನ ಬದುಕಿನ ಜಂಜಾಟಗಳಿಗೆ ಬೆಟ್ಟು ಮಾಡಿ ತೋರಿಸುವಂತ ಕಬ್ಬ.

ಯಾವ ಹಾಡು ಹಾಡಲಿ
ಯಾವ ಹಾಡಿನಿಂದ ನಿನಗೆ
ನೆಮ್ಮದಿಯನು ನೀಡಲಿ

ಸುತ್ತ ಮುತ್ತ ಮನೆಮಠಗಳು
ಹೊತ್ತಿಕೊಂಡು ಉರಿಯುತಿರಲು
ಸೋತು ಮೂಕವಾದ ಬದುಕು
ನಿಟ್ಟಿಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ?

ಬರಿ ಮಾತುಗಳ ಜಾಲದಲ್ಲಿ
ಶೋಷಣೆಗಳ ಜಾಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ
ಯಾವ ಹಾಡು ಹಾಡಲಿ?

ಉರಿವ ಕಣ್ಣು ಚಿತೆಯಲ್ಲಿ
ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ
ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ?

ಬೆಳಕಿಲ್ಲದ ದಾರಿಯಲ್ಲಿ
ಪಾಳುಗುಡಿಯ ಸಾಲಿನಲ್ಲಿ
ಬಿರು ಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ?


ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ

2 comments:

ಪ್ರತಿ ಸೊಲ್ಲಿನ ಕೊನೆಯ ಸಾಲು ತೆಗೆದರೆ "ಮೈಸೂರು ಮಲ್ಲಿಗೆ" ಚಿತ್ರದ ಕೊನೆಯಲ್ಲಿ ಬರುವ ಕೆ.ಎಸ್.ನರಸಿಂಹಸ್ವಾಮಿ ಅವರ ಹಾಡಿನಂತಿದೆ. ಚೆನ್ನಾಗಿ ಬರೆದಿದ್ದೀರಿ...

ಸಾಹಿತ್ಯ ಇಲ್ಲಿದೆ

September 23, 2008 at 4:57 AM  

ಓಹ್.. ಶಿವರುದ್ರಪ್ಪನವರ ಕವಿತೆ ಎಂದು ನೋಡಿರಲಿಲ್ಲ :-)
ಇರಲಿ, ಕವಿತೆಯನ್ನು ಇಲ್ಲಿ ಹಾಕಿ ಒಳ್ಳೆ ಕೆಲಸ ಮಾಡಿದ್ದೀರಿ.
ನನ್ನಿ

September 23, 2008 at 4:59 AM  

Newer Post Older Post Home

Blogger Template by Blogcrowds