ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಯ ತಲಾತಲದಿ
ನಂದುತಿಹ ಕಿಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ನೀಲಿಯಲ್ಲಿ ಮಯ್ಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮವ್ನದಲ್ಲಿ
ಅಲೆಯಂತಿಹ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ಜಲವಿಲ್ಲದ ನೆಲದಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲಿ
ಸೊರಗಿ ಹೋದ ನುಡಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆ
ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದರಿದ
ಹೊಂಗನಿಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹ್ರುದಯಕೆಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ
ಹಾಡಿದವರು: ಸಿ. ಅಶ್ವತ್
ಬಣ, ಮತ, ದರ್ಮದ ಗುಂಗಿನಲ್ಲಿ ಹೊತ್ತಿ ಉರಿಯುವ ಇಂದಿನ ಬದುಕಿನ ಜಂಜಾಟಗಳಿಗೆ ಬೆಟ್ಟು ಮಾಡಿ ತೋರಿಸುವಂತ ಕಬ್ಬ.
ಯಾವ ಹಾಡು ಹಾಡಲಿ
ಯಾವ ಹಾಡಿನಿಂದ ನಿನಗೆ
ನೆಮ್ಮದಿಯನು ನೀಡಲಿ
ಸುತ್ತ ಮುತ್ತ ಮನೆಮಠಗಳು
ಹೊತ್ತಿಕೊಂಡು ಉರಿಯುತಿರಲು
ಸೋತು ಮೂಕವಾದ ಬದುಕು
ನಿಟ್ಟಿಸಿರೊಳು ತೇಲುವಲ್ಲಿ
ಯಾವ ಹಾಡು ಹಾಡಲಿ?
ಬರಿ ಮಾತುಗಳ ಜಾಲದಲ್ಲಿ
ಶೋಷಣೆಗಳ ಜಾಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ
ಯಾವ ಹಾಡು ಹಾಡಲಿ?
ಉರಿವ ಕಣ್ಣು ಚಿತೆಯಲ್ಲಿ
ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ
ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡು ಹಾಡಲಿ?
ಬೆಳಕಿಲ್ಲದ ದಾರಿಯಲ್ಲಿ
ಪಾಳುಗುಡಿಯ ಸಾಲಿನಲ್ಲಿ
ಬಿರು ಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ
ಯಾವ ಹಾಡು ಹಾಡಲಿ?
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ/ಕವನ ಸಂಕಲನ : ಪ್ರೀತಿ ಇಲ್ಲದ ಮೇಲೆ
ಈ ಬರಹ ನನಗೆ ಹಾಗೆ ಈ-ಓಲೆಯಲ್ಲಿ ಸಿಕ್ಕಿತು
ಬರಹಗಾರ : ಎ.ಆರ್. ಮಣಿಕಾಂತ್ . ಈ ಬರಹ ನನ್ನನ್ನೆದೆಯನ್ನು ಆಳವಾಗಿ ನಾಟಿತು ಅದಕ್ಕೆ ನನ್ನ ಬ್ಲಾಗ್ನಲ್ಲಿ ಸೇರಿಸೋಣ ಅಂದುಕೊಂಡೆ. ಅದಕ್ಕೆ ಇಲ್ಲಿ ಸೇರಿಸಿದೆ. ಬರೆದವರ ಒಪ್ಪಿಗೆ ಕೇಳದೇ ಇಲ್ಲಿ ಹಾಕಿರುವೆ. ಕೇಳಲು ಎಲ್ಲಿರುವರೋ ನನಗೆ ತಿಳಿಯದು. ಅವರಲ್ಲೊಂದು ಕೋರಿಗೆ ಅವರ ಬರಹ ನಾನಿಲ್ಲಿ ಹಾಕಿರುವುದು ಹಿಡಿಸದಿದ್ದರೆ ಹೇಳಿ. ನಾನು ಇಲ್ಲಿಂದ ತೆಗೆದು ಹಾಕುವೆ. ಗೆಳೆಯರೆ/ಓದಗರೇ ತುಂಬಾ ಒಳ್ಳೆಯ ಬರಹ, ತಾಯ್ತನ ತಾಯಿಯ ಮುಚ್ಚಟೆಯ ಬಗ್ಗೆ ತೋರಿಸಿರುವ ಸೊಗಸಾದ ಬರಹ. ನೀವೂ ಓದಿ ನಲಿಯಿರಿ.



****ನಾನು ಆಗಷ್ಟೇ ಒಂದನೇ ತರಗತಿಗೆ ಸೇರಿದ್ದೆ. ಯಥಾಪ್ರಕಾರ ಮನೇಲಿ ಮಧಾಹ್ನದ ಬಡತನವಿತ್ತು. ಆದರೆ ಅದು ನಮಗೆ ಗೊತ್ತೇ ಆಗದಂತೆ ಅಮ್ಮ ಎಚ್ಚರ ವಹಿಸಿದ್ದಳು. ಬೆಳಗ್ಗೆ ಹೊತ್ತು ತಿಂಡಿ ತಿಂದು ನಮಗೆ ಅಭ್ಯಾಸವೇ ಇರಲಿಲ್ಲ. ಬೆಳಗ್ಗೆ ಬೆಳಗ್ಗೇನೇ ಅಮ್ಮ ಅಕ್ಕಿಯದೋ, ರಾಗೀದೋ ಗಂಜಿ ಮಾಡ್ತಿದ್ದಳು. ಅಪ್ಪ ಲಗುಬಗೆಯಿಂದ ಗಂಜಿ ಕುಡಿದು ಹೋದ ಮೇಲೆ ಉಳಿದಿದ್ದರಲ್ಲಿ ನಾನು ಅಮ್ಮ ಪಾಲು ಮಾಡ್ಕೋತಾ ಇದ್ವಿ. ತುಂಬಾ ಸಂದರ್ಭಗಳಲ್ಲಿ ಏನಾಗ್ತಾ ಇತ್ತು ಅಂದ್ರೆ, ಅಮ್ಮ ತಟ್ಟೆಗೆ ಗಂಜಿ ಹಾಕಿದ ತಕ್ಷಣ ನಾನು ಗಟಗಟನೆ ಕುಡಿದುಬಿಡ್ತಿದ್ದೆ. ಎರಡೇ ನಿಮಿಷದಲ್ಲಿ ನನ್ನ ತಟ್ಟೆ ಖಾಲಿಯಾದದ್ದು ಕಂಡು ಅಮ್ಮ, ಒಮ್ಮೆ ಮೆಲ್ಲನೆ ನಕ್ಕು ತನ್ನ ತಟ್ಟೇಲಿ ಇದ್ದುದನ್ನೂ ನನಗೇ ಕೊಡ್ತಿದ್ಲು.




ನನ್ನ ನೆಚ್ಚಿನ ಹಾಡು ಇದು. ಕೇಳಿದಂತೆಲ್ಲ ಕೇಳಬೇಕೆನಿಸುತ್ತದೆ. ನನ್ನ ಹಾಗು ನನ್ನ ಕೆಲಸಗಳನ್ನು ಯಾರಾದರು ಹುಚ್ಚುತನಕ್ಕೆ ಹೋಲಿಸಿದರೆ ಆಗ ನಾನವರ ಮುಂದೆ ಈ ಹಾಡನ್ನು ಹೇಳುತ್ತೇನೆ. ( ನನ್ನ ಒಲವಿನ ಗೆಳತಿ, ಅವಳ ಮೇಲಿನ ನನ್ನ ಒಲವನ್ನು ಬಿಸಿಲಗುದುರೆಗೆ ಓಲಿಸಿದಾಗ, ಅವಳು ನಾನು ನಿನಗೆ ಸಿಗುವುದಿಲ್ಲ..! ಯಾಕೆ ನನ್ನ ಬಗ್ಗೆ ಇಟೊಂದು ಕನಸು ಕಾಣ್ತಿಯ..? ಎಂದು ಕೇಳಿದಾಗಲೆಲ್ಲ ಅವಳಿಗೆ ನಾ ಹೇಳುವ ಹಾಡು ಇದು) ನನ್ನ ತಿಳುವಳಿಕೆಯನ್ನು ನೂರಾರು ದಿಕ್ಕಿಗೆ ಕೊಂಡೊಯ್ಯುವ ಹಾಡಿದು. ನೀವು ಕೇಳಿದರೆ ನಿಮಗೂ ಚಂದ, ಇಂಪು ಅನಿಸ ಬಹುದೇನೋ. ಆಗಲೇ ನೀವು ಕೇಳಿರಬಹುದು.....! ಆದರೂ ನಿಮ್ಮಲ್ಲಿ ಹಂಚಿಕೊಳ್ಳುವ ಹಂಬಲದಿಂದ ಇದನ್ನು ಇಲ್ಲಿ ಬರೆದಿರುವೆ. ಇಂತಹ ಸೊಗಸಾದ ಹಾಡನ್ನು ಬರೆದ ಶಿವರುದ್ರಪ್ಪನರವರಿಗೆ ನನ್ನಿ.
ಹಾಗು ಇಂಪಾಗಿ ಎದೆ ತುಂಬಿ ಹಾಡಿರುವ ಅಶ್ವತ್ ರವರಿಗೂ ನನ್ನಿ. ಜೊತೆಗೆ ನಿಮ್ಮೆಲ್ಲರಿಗೂ.............!
ಕಾಣದ ಕಡಲಿಗೆ ಹಂಬಲಿಸಿದೇ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಕಾಣದ ಕಡಲಿದ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು
ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ
ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರನೆ ಒಂದು ದಿನ?
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ
ಸೇರಬಲ್ಲೆನೇನು
ಕಡಲೊಡಲಿನ ಆ ರತ್ನ ಗರ್ಭದಲಿ
ಮುಳುಗಬಹುದೆ ನಾನು
ಕಡಲ ನೀಲಿಯಲಿ
ಕರಗಬಹುದೆ ನಾನು
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಚೆಲುವು- ಒಲವು
ಹಾಡಿದವರು: ಅಶ್ವತ್
ಈ ಹಾಡು ಕೇಳದೇ ಇರುವ ಕನ್ನಡಿಗರೇ ಇಲ್ಲವೇನೋ. ಹಾಡು ಕೇಳಿದಾಗಲೆಲ್ಲ, ಓದಿದಾಗಲೆಲ್ಲ ಬದುಕಿನ ಬಗ್ಗೆ ಏನೋ ಒಂದು ಹೊಸ ದಾರಿ ಕಂಡಂತೆ ಅನಿಸುತ್ತದೆ. ನೇರವಾದ ಚೆಲುವಾದ ಹಾಡು. ನಿಮ್ಮಂದಿಗೆ ಹಂಚಿಕೊಳ್ಳುವ ಹಂಬಲದಿಂದ ಇಲ್ಲಿ ಬರೆಯುತ್ತಿರುವೆ.
ವೇದಾಂತಿ ಹೇಳಿದನು
ಹೊನ್ನೆಲ್ಲ ಮಣ್ಣು
ಕವಿಯೊಬ್ಬ ಹಾಡಿದನು
ಮಣ್ಣೆಲ್ಲ ಹೊನ್ನು!
ವೇದಾಂತಿ ಹೇಳಿದನು
ಈ ಹೆಣ್ಣು ಮಾಹೆ
ಕವಿಯು ಕನವರಿಸಿದನು
ಓ ಇವಳೆನ್ನ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗನೇ ಗೆಲುವೆ!
ವೇದಾಂತಿ ಹೇಳಿದನು
ಈ ಬದುಕು ಶೂನ್ಯ
ಕವಿ ನಿಂತು ಸಾರಿದನು
ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ
ನಾನೆಷ್ಟು ಧನ್ಯ!
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಕಾರ್ತೀಕ
ಹಾಡಿದವರು: ಪಿ.ಬಿ.ಶ್ರೀನಿವಾಸ