ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ. ಯಾವುದನ್ನು ಕೊಳ್ಳುವುದು? ಇದು ನನ್ನ ಬುದ್ಧಿಗೆ ಸರಿಯಾಗಿ ಅರಿವಾಗುತ್ತಿಲ್ಲ. ನನಗೆ ತುಂಬಾ ಆಳವಾಗಿ ಅಧ್ಯಯನ ಮಾಡುವ ಮನಸ್ಸಿದೆ.
ಸರಳವಾಗಿ, ಸಮಗ್ರವಾಗಿರುವ ಪುಸ್ತಕಗಳ ಬಗ್ಗೆ ನನಗೆ ಯಾರಾದರು ತಿಳಿಸುವಿರ? ಕನ್ನಡದಲ್ಲಿ ಬರೆದವರ ಹೆಸರು, ಪ್ರಕಾಶಕರು, ಸಿಗುವ ಸ್ಥಳ. ಇಷ್ಟೂ ಮಾಹಿತಿಗೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವೆನು. ನಿಮ್ಮ ಅಮೂಲ್ಯ ಸಲಹೆಯ ನಿರೀಕ್ಷೆಯಲ್ಲಿ.ಮುಂಚಿತವಾಗಿ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ.




ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

ಗಂಗಾ ನಿನ್ನ ನಿಜವಾಗಲೂ ಪ್ರೀತಿಸ್ತಾ ಇದ್ದೀನಿ ಕಣೆ. ಹಾಗಂತ ಎಷ್ಟೋ ಬಾರಿ ನಿನಗೆ ಹೇಳಿದೆ. ನೀನು ನನ್ನ ಮಾತನ್ನ ಕೇಳಲೇ ಇಲ್ಲ. ನನ್ನ ಪ್ರೀತಿಯನ್ನ ಏನೇನೋ ಅಂದೆ ನೋಡು ಆದ್ರೂನೂ ನಾನು ನಿನ್ನ ಇಷ್ಟಪಡ್ತೀನಿ ಅಂತ ಹೇಳ್ತನೇ ಇದ್ದೆ. ನಿನ್ನ ಬಗ್ಗೆನೇ ಕವಿತೆ ಬರೆದೆ. ಎಷ್ಟು ಕವಿತೆ ಅಂತಿಯಾ! ನಾನು ಬರೆದ ಕವಿತೆಯಲ್ಲಿ ಎಲ್ಲಾದರೂ ಒಂದು ಮೂಲೆಯಲ್ಲಿ ನೀನು ಇದ್ದೇ ಇರ್ತಿದ್ದೆ ನೋಡು. ನಿನಗಲ್ಲದೆ ಬೇರೆ ಯಾರ್‍ಯಾರಿಗೋ ನನ್ನ ಹೃದಯದಲ್ಲಿ ಜಾಗ ಕೊಡೋಣ ಅಂತ ತುಂಬಾ ಪ್ರಯತ್ನಿಸಿದೆ. ಆದರೆ ಮನಸಾಕ್ಷಿ ಒಪ್ಪುತ್ತಿರಲಿಲ್ಲ. ಏನ್ಮಾಡ್ಲಿ ಇವತ್ತು ಬೇರೆ ಒಬ್ಬಳಿಗೆ ನನ್ನ ಮನಸ್ಸನ್ನ ಒಪ್ಪಿಸಿಬಿಟ್ಟೆ ಕಣೆ.

ಗಂಗಾ, ಹೀಗೆ ನೇರವಾಗಿ ಹೇಳ್ತೀನಿ ಅಂತ ಬೇಸರಿಸಿಕೋ ಬೇಡ ಕಣೆ. ಏನ್ ಮಾಡ್ಲಿ ಎಷ್ಟಂತ ನಿನ್ನಲ್ಲಿ ಗೋಗರಿಯಲಿ. ನನ್ನ ಪ್ರೀತಿ ನಿನಗೆ ಅರ್ಥನೇ ಆಗ್ಲಿಲ್ಲ. ಅವಳಿಗೆ ನನ್ನ ಮನಸ್ಸು ಯಾಕೆ ಒಪ್ಪಿಸಿಬಿಟ್ಟೆ ಗೊತ್ತಾ. ಅವಳ ನಗು ನಿನ್ನಂತೇ ಇದೆ. ಆಕೆ ನಕ್ಕರೆ ತೇಟ್ ನಿನ್ನ ತರಾನೇ ಕಾಣಿಸ್ತಾಳೆ. ನಿನ್ನಷ್ಟೇ ವೈಯ್ಯಾರ ನೋಡು. ಆದರೆ ಒಂದು ಮಾತ್ರ ನಿನಗಿಂತ ಚಂದ ಇದೆ ಅದೇನ್ ಗೊತ್ತಾ ಅವಳ ನಡಿಗೆ. ನಿನ್ತರ ಈಷ್ಟ್ ವೆಷ್ಟು ಅಲ್ಲ ನೋಡು ಅವಳು ನಡೆಯೋದು. ಸೂಪರ್, ಅವಳು ನಡೆದರೆ ಹಂಸ ನಾಚಿಬಿಡಬೇಕು. ಅವಳು ನಡು ಬಳುಕಿಸಿ ನಡೆಯುವ ವೈಕರಿ ನೋಡಿದರೆ ನಿಜ ಆ ಬೇಲೂರ ಬಾಲಿಕೆ ನೆನಪಿಗೆ ಬರ್ತಾಳೆ ನೋಡು. ಅವಳಿಗೆ ನಿನಗಿಂತ ಚನ್ನಾಗಿ ಸಿಟ್ಟಾಗೋದು ಗೊತ್ತು ಕಣೆ. ತುಂಬಾ ಚನ್ನಾಗಿ ಸಿಟ್ಟಾಗ್‌ತಾಳೆ. ಸಿಟ್ಟಾದಾಗ ಅವಳಮುಖ ತೇಟ್ ಕಾಳಿತರ ಕಾಣಿಸ್ತಿರುತ್ತದೆ.
ನೋಡು ಬರಿ ಆಕೆ ಬಗ್ಗೆ ಹೇಳ್ತೀನಿ ಅಂತ ಹೊಟ್ಟೆ ಕಿಚ್ಚು ಪಡಬೇಡ. ಇನ್ನೊಂದೇನು ಗೊತ್ತಾ ಅವಳ ಕೆನ್ನೆ ನಿನ್ನೊಷ್ಟು ದುಂಡಾಗಿ ಮುದ್ದು ಮುದ್ದಾಗಿ ಇಲ್ಲ ನೋಡು. ಅದಕ್ಕೆ ಒಂದೊಂದು ಸಾರಿ ನಿನ್ನ ನೆನಪು ನನ್ನ ಕಾಡಿ ಬಿಡುತ್ತೆ ಏನ್ ಮಾಡ್ಲಿ. ನನ್ನ ಜೊತೆ ಮಾತಾಡ್ ಅಂತ ನಿನಗೆ ಕೇಳಿ ಕೇಳಿ ಸಾಕಾಯ್ತು. ಬೇರೆ ವಿಧಿಯಿಲ್ಲದೆ ಆಕೆ ಜೊತೆ ಮಾತಾಡ್ತೀನಿ. ಅವಳ ಕೂದಲು ಕಣೆ, ರೇಷ್ಮೆಯಷ್ಟು ನಯವಾಗಿದ್ದಾವೆ. ನಿನಗೆ ಗೊತ್ತಲ್ಲ ಉದ್ದುದ್ದ ನಯವಾದ ಕೂದಲು ಇರೋ ಹುಡುಗಿ ಅಂದ್ರೆ ನನಗೆ ತುಂಬಾ ಇಷ್ಟ ಅಂತ ಅದಕ್ಕೆ ಇರಬೇಕು ಅವಳು ನನ್ನ ಮನಸ್ಸನ್ನ ಬೇಗ ಕದ್ದು ಬಿಟ್ಲು. ಮಲಗುವಾಗ ಅವಳ ಕೂದಲು ನೆನಪಿಗೆ ಬಂದರೆ ನಿದ್ದೇನೇ ಹತ್ತೋದಿಲ್ಲಪ್ಪ. ಕಣ್ಣು ತುಂಬಾ ಅವಳ ಕೂದಲೇ ಚಾಮರ ಬೀಸಿದಂತೆ ಬಾಸವಾಗುತ್ತಿರ್ತದೆ. ಆಗ ನಿನ್ನ ನೆನಪು ಬರೋದೆ ಇರುತ್ತಾ?? ನೀನೆಲ್ಲಿ ನನ್ನ ಮನಸ್ಸಿಂದ ಹೊರೊಟೋಗ್ತೀಯ. ಅಂತು ಇಂತು ನನ್ನ ಹುಚ್ಚನನ್ನ ಮಾಡಬೇಕಂತನೇ ನಿರ್ಧಾರ ಮಾಡಿಯ ಅನಿಸ್ತೀದೆ ನನಗೆ. ಆಕೆ ನಿನ್ನಷ್ಟು ಚಂದಾಗಿ ಕಿಲಕಿಲ ಸುತ್ತೆಲ್ಲ ಕಲರವ ತುಂಬುವಂತೆ ನಗೋದಿಲ್ಲ ಆದರೆ ನಗುವಾಗ ನಿನ್‌ತರನೇ ಕಾಣಸ್ತಾಳೆ ಗೊತ್ತಾ. ಆಕೆಗೆ ನೀನು ಮಾತಾನಾಡುವಷ್ಟು ಸೊಗಸಾಗಿ ಮಾತಾಡೊದಕ್ಕೆ ಬರೋದಿಲ್ಲ ನೋಡು. ನಿನ್ನಷ್ಟು ಸ್ವೀಟಾಗಿರಲ್ಲ ಆವಳ ಮಾತು. ಆದ್ರುನೂ ಏನೋ ಒಂದು ಖುಷಿ ಕಣೆ ನನಗೆ ಆಕೆ ಜೊತೆ ಮಾತನಾಡುವಾಗ.
ಅವಳ ಹೆಸರು ಕೂಡ ನನ್ನ ಇಷ್ಟವಾದ ಹೆಸರೇ. ಅವಳ ಹೆಸರು ಹೇಳಿದ್ರೆ ಎಲ್ಲಿ ನೀನು ಹೊಟ್ಟೆಕಿಚ್ಚು ಪಟ್ಟುಬಿಡ್ತೀಯೋ ಅಂತ ಭಯ ಆದರುನೂ ಹೇಳಿಬಿಡ್ತೀನಿ. ಆಕೆ ಹೆಸರು ಜಯಶ್ರೀ ಕಣೆ. ಹೆಸರು ತುಂಬಾ ಮುದ್ದಾಗಿದೆ ಅಲ್ವಾ? ದಿನಾಲೂ ಅವಳ ಮುಖ ನೋಡಬೇಕೆನಿಸುತ್ತೆ ಆದರೆ ಏನು ಮಾಡ್ಲಿ ಆಕೆ ಇರುವುದು ಮುಂಬೈನಲ್ಲಿ. ನಾವಿಬ್ಬರು ದಿನಾಲು ನಿನ್ನಬಗ್ಗೆನೇ ಮಾತಾನಾಡ್ತಿರ್ತೀವಿ. ನಿನ್ಗೊಂದು ಗೊತ್ತ. ನಿನಗಾಗಿ ಒಂದು ಕವಿತೆ ಬರೆದಿದ್ದೆ. ನಿನಗೆ ನೆನಪಿದಿಯೋ ಇಲ್ಲವೋ ನನ್‌ಗೊತ್ತಿಲ್ಲ. ಅದೇ "ಸುಕುಮಾರಿ ಗಂಗಾ" ಅಂತ ಬರೆದಿದ್ದೆನಲ್ಲ. ನಿನಗೆ ಅದರ ನೆನಪಿರುವುದು ನನಗೆ ಸಂಶಯ. ನನ್ನ ದ್ವೇಶಮಾಡುತ್ತ ಮರೆತಿರಬಹುದು. ಇದೇ ನೋಡು ಆ ಕವಿತೆ.

*** ಸುಕುಮಾರಿ ಗಂಗಾ ***

ಕುಮುದ ಕೋಮಲ ಪದದಳ ಗಂಗಾ

ಕೋಕಿಲ ಕೊರಳ ಹಾಡು ಇಂಚರ ಗಂಗಾ
ಚಂದ್ರಿಕೆಯ ತಂಪು ಕಿರಣ ಬಾಣ ಗಂಗಾ
ಸೃಷ್ಠಿಯ ಸೊಭಗಿನ ಸುಕನ್ಯೆ ನನ್ನ ಗಂಗಾ

ಮೈಬಳುಕಿಸುವ ನಾಗಲತೆಯ ಕುಡಿ ಗಂಗಾ

ದುಂಬಿ ಝೇಂಕಾರ ಲಹರಿ ಗಂಗಾ
ನೀಲೋತ್ಪಲ ನಗೆಯ ತೆರೆ ತರಂಗ ಗಂಗಾ
ಕೊಳದ ನೀರ ತಿಳಿ ಬಿಂಬ ಗಂಗಾ

ಕಣ್ಣ ಕನಸಿನ ಕಂಪನ ಛಾಯೆ ಗಂಗಾ
ನನ್ನ ಪ್ರೀತಿಯ ಪೂಜೆಗೆ ಜಪನಾಮ ಗಂಗಾ
ಮನದ ಅನುರಾಗದ ಚಿಲುಮೆ ಗಂಗಾ
ಕೋಟಿ ಕನಸುಗಳಿಗೆ ಮೂರ್ತವಿಟ್ಟ ಗಂಗಾ

ನನ್ನ ಧಮನಿಯ ಬಡಿತದ ಶಬ್ಧ ಗಂಗಾ

ನನ್ನುಸಿರು ಹಾಡುವ ಮುರಳಿ ಗಾಯನ ಗಂಗಾ
ನನ್ನೆದೆಯ ಕವಿಯ ಕಾವ್ಯಕೆ ಸ್ಫೂರ್ತಿ ಗಂಗಾ
ನನ್ನ ಬದುಕಿನ ಕಾವ್ಯದ ಪದ ಚರಣ ಗಂಗಾ

ನಸುಗುಂಗರು ಕೇಶ ತುರುಬಿನ ನಾಗವೇಣಿ ಗಂಗಾ

ಮಧುರ ಸ್ಪುಟ ಮಾತಿನ ಸುಭಾಷಿಣಿ ಗಂಗಾ
ಮಂದಾರವನ್ನೆ ನಾಚಿಸುವ ಸುಹಾಸಿನಿ ಗಂಗಾ
ಸ್ನೇಹದ ಹೊಸ ರೂಪಾಂತರ ಸುಮಿತ್ರೆ ನನ್ನ ಗಂಗಾ

ಕಂಪಿತ ಕೋಮಲ ಕಪೋಲ ಸುಂದರಿ ಗಂಗಾ

ತುಂಬು ಕುಚ ಶೋಭಿತ ಕುಮಾರಿ ಗಂಗಾ
ಬಿರಿದ ಸಂಪಿಗೆಯ ತಟಿ ಸುಶೋಭಿತ ಗಂಗಾ
ನನ್ನ ಹೃದಯದ ಒಡತಿ ಚಂದುಳ್ಳಿ ಚೆಲುವೆ ಗಂಗಾ

ಬಿದಿಗೆ ಚಂದ್ರನ ಬೊಗಸೆ ಕಣ್ಣ ಸುನಯನ ಗಂಗಾ

ನಿಟೀಲ ನಡುವೆ ಬಿಂದಿಯದಾರೆ ಸುಕುಮಾರಿ ಗಂಗಾ
ಕವಿಯ ವರ್ಣನೆಗೆ ನಿಲುಕದ ಸುವರ್ಣೆ ಗಂಗಾ
ನನ್ನ ಪ್ರೇಮ ಪಯಣಕೆ ದೃವತಾರೆ ಗಂಗಾ

ಆರ್ದ ಹೃದಯದಲಿ ಸ್ವಾತಿ ಮುತ್ತಾದ ಗಂಗಾ

ಒಲವಿನ ದಾರಿಗೆ ಬೆಳಕಾದ ಸುತೇಜ ಗಂಗಾ
ಸಪ್ತ ಸಾಗರದಾಚೆಯ ಕಲ್ಪನೆ ಸುನೀಲ ಗಂಗಾ
ನನ್ನ ಪ್ರೇಮ ದೇವತೆ ಸುಶೀಲ ಗಂಗಾ


ಈ ಕವಿತೆ ಕೇಳಿ ಆಕೆ ತುಂಬಾ ಹೊಟ್ಟೆ ಕಿಚ್ಚು ಪಟ್ಲು. ಎರಡು ದಿನ ನನ್ನ ಕೂಡೆ ಮಾತನಾಡ್ಲೇ ಇಲ್ಲ. ಅದಕ್ಕೆ ಆಕೆಯನ್ನು ಸಮಧಾನ ಮಾಡಲು ಸಾಕು ಸಾಕಾಗಿ ಹೋಯ್ತು. ಎರಡು ದಿನ ಹರಸಾಹಸ ಮಾಡಿದ ನಂತರ ಮಾತನಾಡಿಡ್ಲು. ನಿನ್ನಷ್ಟೊಂತೂ ಹಟವಿಲ್ಲ ಬಿಡು ಎರೆಡೇ ದಿನದಲ್ಲಿ ದಾರಿಗೆ ಬಂದುಬಿಟ್ಲು. ನೀನಾದ್ರೆ ಒಂದು ವರ್ಷ ಆದ್ರು ಮುಖ ಊದಿಸಿಕೊಂಡೇ ಇದ್ದೀಯ.

ಬದುಕೆಂದರೆ ಈಗೆ ನೋಡು ಎಷ್ಟು ಆಕಸ್ಮಿಕ ಅಲ್ವ? ಯಾಕೆ ಈ ಮಾತು ನಿನ್ನತ್ತಿರ ಹೇಳ್ತೀನಿ ಅಂದ್ರೆ. ನನಗೆ ಜಯಶ್ರೀ ಇದ್ದಾಳಲ್ಲ ಅವಳು ಸಿಕ್ಕಿದ್ದೆ ಆಕಸ್ಮಿಕ. ಅವತ್ತೊಂದಿನ ನಿನ್ನ ನೋಡುಬೇಕೆನ್ನಿಸಿತು ವಿಮಾನ ಹತ್ತಿಕೊಂಡು ಆಸೆಯಿಂದ ಬೆಂಗಳೂರಿಗೆ ಬಂದಿದ್ದೆ. ನೆನಪಿದೆಯ.!!! ನಿನಗೆ ಫೋನ್ ಮಾಡಿ ಗೋಗರೆದು ಅತ್ತು, ಬೆಟ್ಟಿಯಾಗು ಅಂತ ಕೇಳಿಕೊಂಡೆ. ಹೃದಯನೇ ಇಲ್ಲದವಳ ತರ ಮಾತಾಡಿ ಬೆಟ್ಟಿ. ಹಠಬಿಡದೇ ನೀನು ಕೊನೆಗೂ ನನ್ನ ಬೆಟ್ಟಿ ಆಗ್ಲೇ ಇಲ್ವಲ್ಲ. ಅವತ್ತು ತುಂಬಾ ದುಃಖ ಆಗಿತ್ತು ನೋಡು. ಅವತ್ತು ನನಗಾಗಿದ್ದು ಎಂತಹ ನೋವು ಅಂತಿಯಾ ಎರಡು ದಿನ ಒಂದಗಳು ಕೂಳು ತಿನ್ನಲಿಕ್ಕೆ ಸಹನು ಆಗಲಿಲ್ಲ. ಸುಮ್ಮನೆ ಒಬ್ಬನೆ ಕುಳಿತು ಅತ್ತುಬಿಟ್ಟೆ.

ಅವತ್ತು ಯಾರ ಮುಂದೆನೂ ನನ್ನ ನೋವನ್ನು ಹೇಳಿಕೊಳ್ಳಲಿಲ್ಲ. ಹೇಳಿಕೊಂಡ್ರೆ ನನ್ನ, ಜೊತಗೆ ನಿನ್ನ ಸೇರಿಸಿ ಇಬ್ಬರನ್ನೂ ನನ್ನ ಗೆಳೆಯರು ಬೈದ್‌ಬಿಡ್ತಾರೆ. ಅವಳೊಬ್ಬ ರಂಕ್ಲಿರಾಣಿ, ನೀನೊಬ್ಬ ಹುಚ್ಚ ಏನಾದ್ರು ಮಾಡ್ಕೋ ನಿಮ್ಮ ಜಗಳ ಯಾವತ್ತು ಇರಲ್ಲ ಹೇಳು ಅಂತ ನನಗೆ ಚೀಮಾರಿ ಹಾಕ್ತಾರೆ. ನನಗೆ ಬೈದ್ರೆ ಓಕೆ ಆದ್ರೆ ನಿನಗೆ ಬೈದ್ರೆ ನನಗೆ ಸಹಿಸೊಕೆ ಆಗಲ್ಲ ಕಣೆ. ಅದಕ್ಕೆ ಯಾರತ್ರನೂ ನಾನು ಈ ವಿಷಯ ಹೇಳ್ಲಿಲ್ಲ ನೋಡು. ಸುಮ್ಮನೆ ಮಂಗನ ತರ ಪುಣೆಗೆ ಮರಳಿ ಬಂದೆ. ಅದೇ ಅವತ್ತು ವಾಪಾಸ್ ಬರುವಾಗ ರೈಲು ಹತ್ತಿ ಕೂತೆ. ನಾನಿದ್ದ ಡಬ್ಬಿಯಲ್ಲೇ ಆ ಹುಡುಗಿ ಇದ್ಲು. ಅವರಪ್ಪ ಅಮ್ಮನ ಜೊತೆ ಕೆಳಗಿನ ಸೀಟ್ ಮೇಲೆ ಕುಂತಿದ್ಲು. ನಂದು ಸೀಟ್ ಮೇಲಿಂದಿತ್ತು. ಅದ್ಯಾಕೋ ಗೊತ್ತಿಲ್ಲ, ಆಕೆನೂ ಮೇಲೆ ಬರ್ತೀನಿ ಅಂತ ಗೋಗರೆದು ರಂಪಾಟ ಮಾಡಿ ಕೊನೆಗೂ ಅಪ್ಪ ಅಮ್ಮನ್ನ ಒಪ್ಪಿಸಿ ನನ್ನ ಜೊತೆ ಬಂದು ಕುಂತ್ಲು. ಆಗಿಂದನೇ ನಮ್ಮಿಬ್ಬರ ಗೆಳೆತನ ಸುರುವಾಗಿದ್ದು. ಅವಾಗ್ಲೆ ನಿನ್ನ ಬಗ್ಗೆ ಎಲ್ಲಾನೂ ಹೇಳಿಬಿಟ್ಟೆ ಆಕೆಗೆ. ಯಾಕಂದ್ರೆ ಬೇರೆಯವರು ನನ್ನ ನಿನ್ನ ವಿಷಯ ಕೇಳೋದಿಲ್ಲ. ಅವರಿಗೆಲ್ಲ ನಮ್ಮಿಬ್ಬರ ವಿಷಯ ವಾಕರಿಕೆ ಬರುವಂತಾಗಿದೆ. ಅದಕ್ಕೆ ಅವಳತ್ತಿರ ಮನಸ್ಸು ಬಿಚ್ಚಿ ಎಲ್ಲಾನೂ ಹೇಳಿಬಿಟ್ಟೆ. ಇವತ್ತಿಗೂ ಅವಳೊಬ್ಬಳತ್ತಿರ ಏನೂ ಮುಚ್ಚಿಡದೇ ಹೇಳ್ತನೇ ಇರ್ತೀನಿ.

ಇವತ್ತಿಗೆ ನಾಲ್ಕುದಿನದ ನಂತರ ಅವಳ ಹದಿನಾಲ್ಕನೆ ಹುಟ್ಟು ದಿನವಿದೆ. ಅವತ್ತು ಅವಳಿಗೆ ನಿನ್ನ ಹುಟ್ಟು ದಿನದಂದು ನಿನಗೆ ಕೊಟ್ಟಂತೆ ಅವಳಿಗೂ ಏನೇನೋ ಉಡುಗೊರೆ ಕೊಡಬೇಕೆನ್ನುವ ಆಸೆ ಕಣೆ. ಆದರೆ ಅವಳು ಏನನ್ನೂ ತೊಗೋಳ್ಳದಿಲ್ಲವಂತೆ. ಆಕೆಗೆ ನನ್ನ ಗೆಳೆತನ ನನ್ನ ಪ್ರೀತಿ ಅಷ್ಟೇ ಸಾಕಂತೆ. ನಾವಿಬ್ಬರು ಕೊನೆಯವರೆಗೂ ಅಣ್ಣತಂಗಿಯಾಗಿ ಪ್ರೀತಿಯಿಂದ ಇರೋಣ, ಆ ಪ್ರೀತಿನೇ ನನಗೆ ನಿನ್ನಿಂದ ಉಡುಗೊರೆ ಸಾಕು ಅಂತಿದ್ದಾಳೆ. ನಾನು ನಿನ್ನ ಪ್ರೀತಿಸ್ತೀನಿ ಎಂದು ನನ್ನ ಪ್ರೀತಿ, ನನ್ನ ಬದುಕನ್ನು ನಿನಗೆ ಧಾರೆಯರೆದೆ. ಆದರೆ ನನ್ನ ಪ್ರೀತಿ ನಿನಗೆ ಅರ್ಥವಾಗ್ಲೇ ಇಲ್ಲ. ಅವತ್ತು ನಾನು ನನ್ನ ಪ್ರೀತಿಯನ್ನು ಇನ್ನೊಬ್ಬರಿಗೆ ಕೊಡೋದಿಕ್ಕೆ ಪ್ರಯತ್ನ ಪಟ್ಟೆ, ಆದರೆ ವಿಧಿಯಾಟ ಬಲ್ಲವರಾರು ಇವತ್ತು ನನ್ನ ಪ್ರೀತಿನಾ ಕೇಳ್ತದ್ದಾರೆ. ಇವತ್ತು ಇನ್ನೊಬ್ಬರು ನನ್ನ ಪ್ರೀತಿ, ಗೆಳತನ ಕೇಳ್ತಿದ್ದಾರೆ ಅದು ಖುಷಿಯಿಂದ ಅದಕ್ಕೆ ಕೊಟ್ಟುಬಿಡ್ತಿನಿ ಕಣೆ. ನಾನೆಷ್ಟು ಧನ್ಯ ಅಲ್ವಾ?
ನಿನ್ನೆ ರಕ್ಷಬಂದನ ಇತ್ತಲ್ಲ ಅವತ್ತು ನನಗೆ ರಾಖಿ ಕಳಿಸಿದ್ದಾಳೆ. ನನಗೆ ಏನು ಕೊಡ್ತೀಯಾ ಅಂತನೂ ಕೇಳಿದ್ದಾಳೆ. ನಾನು ಅವತ್ತು ಕರೆ ಮಾಡಿ ನಿನಗೆ ಏನ್ ಬೇಕು ಹೇಳು ಅಂತ ಕೇಳಿದೆ. ಅದಕ್ಕೆ ಅವಳು ಏನು ಕೇಳಿದಲು ಗೊತ್ತಾ... ನಾನು ನಿನ್ನ ಗಂಗಾ ಜೊತೆ ಮಾತನಾಡಬೇಕು ಯಾವತ್ತು ಮಾತನಾಡಿಸ್ತೀಯಾ ಅಂತ ಕೇಳಿದ್ಲು. ನನಗೆ ಆಗ ಅವಳಿಗೆ ಏನ್ ಹೇಳಬೇಕೋ ಗೊತ್ತಾಗಲಿಲ್ಲ. ನೀನು ಬೇರೆ ಮುನಿಸಿಕೊಂಡು ಮುಖ ಊದಿಸಿಕೊಂಡೋಳು ಅಂಗಲಾಚಿದ್ರೂ ಮಾತನಾಡ್ತಿಲ್ಲ, ಅಂತಹುದರಲ್ಲಿ ಆಕೆಗೆ ಏನ್ ಹೇಳಬೇಕೋ ತಿಳಿಯದೆ ತಬ್ಬಿಬ್ಬಾಗಿ ಬಿಟ್ಟೆ ನೋಡು. ಆಕೆಗೆ ನಿನ್ನ ಬಗ್ಗೆ ತುಂಬಾ ಹೇಳಿಬಿಟ್ಟಿದ್ದೆ. ಅದಕ್ಕೆ ನಿನ್ನ ಜೊತೆ ಮಾತನಾಡಬೇಕು ಅಂತ ಆಶೆ ಆಯ್ತಂತೆ. ಅವಳಿಗೆ ನಿನ್ನಜೊತೆ ಮಾತನಾಡಿಸಿದ್ರೆ ಅದೇ ರಕ್ಷಬಂಧನದ ಉಡುಗೊರೆಯಂತೆ. ಆಯಿತು ಮಾತನಾಡ್ಸತಿನಿ ಅಂತನೂ ಮಾತುಬೇರೆ ಕೊಟ್ಟು ಬಿಟ್ಟೀನಿ ಆಕೆಗೆ. ಈಗ ನೀನೇ ಹೇಳು ನಾನು ಹೇಗೆ ಅವಳ ಮಾತು ಉಳಿಸಿಕೊಳ್ಳಲಿ? ನೀನು ನೋಡಿದರೆ ಏಳೇಳು ಜನ್ಮ ನನ್ನ ಜೊತೆ ಮಾತನಾಡುವುದಿಲ್ಲ ಅನ್ನೋತರ ಆಡ್ತೀಯ. ನಿನ್ನ ನಂಬಿ ಎಲ್ಲಿ ಅವಳತ್ತಿರ ಮಾತಿಗೆ ತಪ್ಪಿ ಬಿಡ್ತೀನೋ ಅಂತ ತುಂಬಾ ಭಯ ಆಗ್ತಿದೆ ನನಗೆ.
ಆಕೆ ನಿನ್ನೊಷ್ಟು ಚೆಲುವಾಗಿ ಇಲ್ಲ ಕಣೆ. ಆದರೆ ತುಂಬಾ ಹೃದಯವಂತೆ ನೋಡು. ನನ್ನೆಲ್ಲಾ ನೋವಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಾಳೆ. ನನಗೆ ಸಮಧಾನ ಮಾಡ್ತಾಳೆ. ಇವತ್ತು ಅವಳ ಮಾತೇ ನನ್ನ ನೊಂದ ಹೃದಯಕ್ಕೆ ಔಷದಿ ನೋಡು. ಬಿಡು ನೀನಂತು ದ್ವೇಶದ ನಂಜನ್ನೇ ಕಾರ್ತೀಯ. ನಿನಗೆ ಏನು ಹೇಳಿದ್ರು ಅರ್ಥವಾಗೋದಿಲ್ಲ. ನನಗೆ ಒಂದೇ ಚಿಂತೆ ಅವಳು ಇವತ್ತು ಫೋನ್ ಮಾಡಿದ್ರೆ ಮತ್ತೇ ನನ್ನ ಕೇಳ್ತಾಳೆ ಗಂಗಾ ಜೊತೆ ಮಾತಾಡಿದ್ಯಾ ಅಂತ. ಎಂದು ಅವಳ ಜೊತೆ ಮಾತನಾಡಸ್ತೀಯಾ ಅಂತ ಕೇಳ್ತಾಳೆ. ಇವತ್ತು ಏನು ಸುಳ್ಳು ಹೇಳಬೇಕೋ ಯೋಚಿಸಬೇಕು. ಬರ್ಲಾ...



**ಕುಕೂಊ.....

೧೭/೦೮/೨೦೦೮

Newer Posts Older Posts Home

Blogger Template by Blogcrowds