ಬೆಳಿಗ್ಗೆಯಿಂದ ಸಿಂಹಗಢ ಹತ್ತಿ ಇಳಿದು ತಿರುಗಾಡಿ ಸುಸ್ತಾಗಿ ಬಂದು ಸಂಜೆ 6 ಗಂಟಗೆ ಮಲಗಿದ್ದೆ.
ಅವತ್ತು ನನ್ನ ಆತ್ಮೀಯ ಗೆಳೆಯ, ರೂಮ್ ಮೆಟ್ ಮಹದೇವನ ಹುಟ್ಟುಹಬ್ಬದ ದಿನ. ಪಾರ್ಟಿಗೆ ಹೋಗೋಣ ಅಂತ ಮಹದೇವ ಪದೇ ಪದೇ ಹೇಳುತ್ತಿದ್ದ. ಯಾವುದನ್ನು ಕೇಳಿಕೊಳ್ಳದವನಂತೆ ಮಲಗಿದ್ದೆ. ಹೊಟ್ಟೆ ತುಂಬಾ ಹಸಿದಿತ್ತು. ಏನಾದರು ಮಾಡಿಕೊಂಡು ತಿನ್ನೋಣವೆಂದರೆ ಸುಸ್ತು. ಬಾಲು, ಮಹದೇವರಿಗೇ ಏನಾದರು ಮಾಡ್ರೋ ಅಂತ ಹೇಳಿದರೆ ನಾವು ಪಾರ್ಟಿಗೆ ಹೋಗ್ತೀವಿ ಬರುವುದಾದರೆ ಬಾ ಇಲ್ಲ ಮಾಡಿಕೊಂಡು ತಿನ್ನು ಎಂದರು. ಬೇರೆದಾರಿಯಿಲ್ಲದೆ ಸುಮ್ಮನೆ ಮಲಗಿದೆ. ಬೆಳಿಗ್ಗೆಯಿಂದ ಮಳೆಯಲ್ಲಿ ತೋದಿದ್ದರಿಂದ ಚಳಿಯಿಂದ ಮೈ ಗಡಗಡ ನಡುಗುತಿತ್ತು. ದಪ್ಪನಾದ ದುಪ್ಪಡಿ ಹೊದ್ದು ಕಣ್ಣು ಮುಚ್ಚಿದ್ದೆ. ಪುಟತೆರೆದ ಸಂಧ್ಯಾರಾಗ ಪುಸ್ತಕ ಕೈಯಲ್ಲಿತ್ತು.
ನನಗೆ ಸುಸ್ತಾಗಿ, ಹಸಿವಾಗಿರುವುದು ತಿಳಿದ ಮಹದೇವ ಪಾರ್ಟಿಗೆ ಹೋಗುವ ಮೊದಲು ನನಗೆ ಏನಾದರು ತಂದು ಕೊಡಲಾ ಅಂತ ಕೇಳಿದ ಹೂಂ... ಅಂತ ನಿದ್ದೆಯಲ್ಲೇ ಹೇಳಿದೆ. ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ತರುತ್ತೇನೆಂದು ಹೇಳಿ ಬಾಲು ಮಹದೇವ ಇಬ್ಬರೂ ಹೊರಟರು. ನನ್ನ ಮೈ ಸುಸ್ತಿನಿಂದ ತುಂಬಿತ್ತು, ಕಣ್ಣು ನಿದ್ದೆಯಲ್ಲಿ ಮುಳಿಗಿದ್ದವು.
ಹೊರಗಡೆ ಏನೋ ಸಪ್ಪಳ. ಯಾರೋ ಕೂಗಿದಂತೆ ಅನ್ನಿಸುತ್ತಿತ್ತು. ಏನೆಂದು ಗೊತ್ತಾಗಲಿಲ್ಲ. ಮಳೆ ಸಣ್ಣಗೆ ಹನಿಯುತ್ತಿತ್ತು. ಕಣ್ಣೊರೊಸಿಕೊಳ್ಳುತ್ತ ಕಿಟಕಿಯಿಂದ ಹೊರಗಡೆ ಇಣುಕಿದೆ. ಅಷ್ಟೊತ್ತಿದೆ ನನ್ನ ಮೂಗಿಗೆ ಏನೋ ವಾಸನೆ ಸುಳಿವುಸಿಕ್ಕು ದೀರ್ಗವಾಗಿ ಗಾಳಿ ಎಳೆದುಕೊಳ್ಳುತ್ತಿತ್ತು. ಕೈ ಕಣ್ಣುಜ್ಜುತ್ತಿತ್ತು. ನೋಡಿದರೆ ನಮ್ಮ ಮನೆಯ ಮಾಲಿಕರ ಯಜಮಾನಿಯವರು ಓಣಿಯಲ್ಲಿನ ಹೆಂಗಸರನ್ನು ಕರೆದು ಕರೆದು ಏನೋ ತೋರಿಸುತ್ತಿದ್ದರು. ನನಗೆ ಕುತೂಹಲ ಪ್ರಾರಂಬವಾಯಿತು. ಯಾಕೆ ಇವರು ಎಲ್ಲರನ್ನು ಕರೆಯುತ್ತಿದ್ದಾರೆ ಅದೂ ಇಷ್ಟೊಂದು ಏರು ದ್ವನಿಯಲ್ಲಿ? ಅಸ್ತವ್ಯಸ್ತವಾಗಿದ್ದ ಲುಂಗಿ ಸುತ್ತಕೊಳ್ಳುತ್ತ ನಾನು ಕೆಳಗಿಳಿದು ಬಂದೆ. ನನ್ನ ನೋಡಿದೊಡನೆಯೇ ಆ ಯಜಮಾನಿ ಕುಮಾರ್ ನೋಡಿಲ್ಲಿ ಬ್ರಹ್ಮ ಕಮಲ ಅರಳಿದೆ, ವರ್ಷಕ್ಕೊಂದೇ ಬಾರಿ ಅರಳುವುದು. ಇವತ್ತು ಜೇಷ್ಠ ಮಾಸದ ಏಕಾದಶಿ ತಾನೆ ಅದಕ್ಕೆ ಇವತ್ತು ಅರಳಿದೆ. ಎಲ್ಲರಿಗೂ ತೋರಿಸೋಣ ಅಂತ ಕರಿತಿದ್ದೆ.
ನಮ್ಮ ಮನೆಯ ಯಜಮಾನಿ ಕನ್ನಡದವರಾಗಿದ್ದರಿಂದ ನನ್ನ ಜೊತೆ ಇಷ್ಟೆಲ್ಲವನ್ನೂ ಒಂದೇ ಉಸುರಿನಲ್ಲಿ ಕನ್ನಡದಲ್ಲೇ ಹೇಳಿದರು. ನಾವು ಕನ್ನಡ ಮಾತನಾಡುತ್ತಿದ್ದುದ್ದರಿಂದ ಅಷ್ಟೊತ್ತಿದೆ ಅಲ್ಲಿ ಬಂದು ಸೇರಿದ್ದ ಮರಾಠಿ ಹೆಂಗಸರು ನಮ್ಮನ್ನೇ ನೋಡುತ್ತಿದ್ದರು. ಮಳೆ ಸ್ವಲ್ಪ ಜೋರಾಗಿ ಹನಿಯಲು ಶುರುವಾಯಿತು. ಒಮ್ಮೆ ಹೂವಿನ ಕಡೆ ಕಣ್ಣಾಡಿಸಿ ಬಂದೇ ಎಂದೇಳಿ ಮೆಟ್ಟಿಲತ್ತತೊಡಗಿದೆ. ಕ್ಯಾಮರವನ್ನು ಚಾರ್ಜಮಾಡಲು ಮಹದೇವ ಇಟ್ಟಿದ್ದ. ಕ್ಯಾಮರವನ್ನು ವೈರಿನಿಂದ ಬಿಡಿಸಿಕೊಂಡು ಒಂದೇ ಉಸಿರಿನಲ್ಲಿ ಕೆಳಗಿಳಿದು ಬಂದು ಅರಳಿದ್ದ ರಾತ್ರಿ ರಾಣಿಯನ್ನು ನನ್ನ ಕ್ಯಾಮರದಲ್ಲಿ ಸೆರೆಯಿಡಿಯ ತೊಡಗಿದೆ. ಮನೆಯ ಅಂಗಳದಲ್ಲಿ ಗೋಡೆಗುಂಟ ಅಡರಿ ಬೆಳೆದಿರುವ ಎರಡು ಗಿಡಗಳಿವೆ. ಮೈ ತುಂಬಾ ಹಾಲುಬಿಳುಪಿನ ಹೂವು ಬಿಟ್ಟು ಸುತ್ತೆಲ್ಲ ಕಂಪು ಸೂಸಿ ಆ ಗಿಡಗಳು ಬೀಗುತಿದ್ದವು. ಬಿಳಿ ಪಕಳೆಗಳನ್ನು ನೋಡಿದ ನನ್ನ ಮನಸ್ಸಿನಲ್ಲಿ ಒಲವಿನ ಗೆಳತಿಯ ನಗೆಗುಳಿಯ ಕೆನ್ನೆಯ ಚಿತ್ರ ನುಸುಳದೇ ಇರಲು ಸಾದ್ಯವೇ?
ಹಬ್ಬ! ಎಸ್ಟೊಂದು ಸುಂದರವಾಗಿದ್ದವು ಆ ಹೂವು! ಬಿರಿದು ಅರಳಿದಾಗ ಹೊಮ್ಮುವ ಸುವಾಸನೆಯನ್ನು ಸವಿದೇ ಅನುಭವಿಸಬೇಕು. ಆ ಕಂಪಿನ ಸೊಗಸನ್ನ ಮಾತಿನಲ್ಲಿ ಹೇಳುವುದು ಕಷ್ಟಸಾಧ್ಯ. ಎಲೆಯನ್ನು ಸೀಳಿಕೊಂಡು ಅರಳುವ ಹೂವು ರಾತ್ರಿರಾಣಿ (ಬ್ರಹ್ಮ ಕಮಲ) ಸೃಷ್ಠಯ ಒಂದು ಅದ್ಭುತ.
ಹಾಲು ಬಿಳುಪಿನ ಆ ಹೂವನ್ನು ನಾನು ಹಿಂದೆ ಕೊಟ್ಟೂರಿನಲ್ಲಿ ಪಿ.ಯು.ಸಿ ಓದುವಾಗ ನೋಡಿದ್ದೆ. ಈಗ ಈ ಹೂವನ್ನು ನೋಡಿದಕೂಡಲೇ ಅವತ್ತಿನ ಒಂದು ಮಾತು ನನ್ನ ನೆನಪಿಗೆ ಬಂತು. ಈ ಹೂವು ಅರಳುವುದು ವರ್ಷದಲ್ಲಿ ಒಮ್ಮೆ ಮಾತ್ರ ಅಂತ ಯಾರೋ ಆ ದಿನ ಆಡುತಿದ್ದರು. ಅದನ್ನು ನಾನು ಕೇಳಿಸಿಕೊಂಡಿದ್ದೆ. ಮಳೆ ಸಣ್ಣದಾಗಿ ಹನಿಯುತ್ತಿದ್ದರಿಂದ ಬಿಳಿ ದಳಗಳ ಮೇಲೆ ಬಿದ್ದ ಮಳೆಯ ಹನಿ ಮುತ್ತು ಮೆತ್ತಿದಂತೆ ಕಾಣುತಿದ್ದವು. ಆ ರಾತ್ರಿ ರಾಣಿಯನ್ನು ಸಾಕಾಗುವವರೆಗೆ ನನ್ನ ಕ್ಯಾಮರದಲ್ಲಿ ಕ್ಲಿಕ್ಕಿಸಿದ್ದೆ. ಮತ್ತೆ ಕಣ್ಣು ನಿದ್ದೆಯನ್ನು ಅರಸುತ್ತಿದ್ದವು. ಪೋಟೊವನ್ನು ಯಜಮಾನಿಗೆ ತೋರಿಸಿದೆ. ಅವರು ಪಕ್ಕದ ಓಣಿಯಲ್ಲಿರುವ ಶಿವಮಂದಿರದ ಕಡೆ ಕೈತೋರಿಸುತ್ತ ಕುಮಾರ್ ಬೆಳಗ್ಗೆ ಈ ಹೂವನ್ನು ಶಿವನಿಗೆ ಅರ್ಪಿಸ ಬೇಕು ಎಂದೇಳಿದರು. ಅಷ್ಟೊತ್ತಿಗ್ಗೆ ನನ್ನ ಮೈ ಪೂರ್ತಿಯಾಗಿ ಒದ್ದೆಯಾಗಿತ್ತು. ತಲೆಯ ಮೇಲೆ ಬಿದ್ದ ನೀರನ್ನು ಕೊಡವಿಕೊಳ್ಳುತ್ತ ಹಸಿದು ಚುರು ಚುರು ಎನ್ನುತ್ತಿದ್ದ ಹೊಟ್ಟಯ ಮೇಲೆ ಕೈಯಾಡಿಸುತ್ತ ಮಹದೇವನ ಬರುವಿಗಾಗಿ ಕಾಯುತಿದ್ದೆ. ವಿಷಯ ಸೂಚಿ : ಈ ಹೂವಿನ ಬಗ್ಗೆ ನನಗೆ ಆ ಯಜಮಾನಿತಿ ಹೇಳಿದ್ದಷ್ಟೆ ಗೊತ್ತಿರುವುದು. ಅದನ್ನೇ ಬರೆದಿರುವೆ. ನಿಮಗೆ ಯಾರಿಗಾದರು ಹೆಚ್ಚಿನ ಮಾಯಿತಿ ತಿಳಿದಿದ್ದರೆ ನನಗೂ ತಿಳಿಸಿ. ತಿಳಿದುಕೊಳ್ಳುವ ಕುತೂಹಲವಿದೆ.
**ಕುಕೂಊ....